_1769538529565.webp?w=480&auto=format%2Ccompress&fit=max)
_1769538529565.webp?w=480&auto=format%2Ccompress&fit=max)
ಆಗ ಶರಣ ಬಾಚರಸನು ‘ನೆನಪಿಗೆ ಸಿಗದ, ನೋಟಕ್ಕೆ ಸಿಗದ, ತನುವಿಗೆ ಸಿಗದ ಸಾಧನೆಯ ಭಾವನೆಯಲ್ಲಿ ಇಲ್ಲದ, ಹೇಳಲೂ ಕೇಳಲೂ ಇಲ್ಲದ, ಎಣೆ ಇಲ್ಲದುದನ್ನು ಮತ್ತಾವ ರೀತಿಯಲ್ಲಾದರೂ ಅನುಭವಿಸಿ ಹುಟ್ಟು ಮತ್ತು ಸಾವುಗಳು ಇಲ್ಲದವರಾಗುತ್ತೇವೆಯೆ?’ ಎಂದು ಅಲ್ಲಮನನ್ನು ಕೇಳುತ್ತಾನೆ. ಅವನ ಮಾತುಗಳಿಗೆ ಅಲ್ಲಮನು ಈ ರೀತಿ ನುಡಿಯುವನು: ಇಲ್ಲದುದ ತಾವರಿದೆವೆಂಬರೆ/ವುಳ್ಳವರು ತನುಮನಗಳೊಳು ತಾ/ವಿಲ್ಲದಿರಬೇಕಾಗಿಹುದು ಸಂಸಾರ ಸ್ವಪ್ನದಲಿ/ಇಲ್ಲದೆಚ್ಚತರಿವು ಮರುಹಿನ/ಗಲ್ಲಣೆಯನೀಡಾಡಿ ತಾನಿರ/ಬಲ್ಲೊಡಾತನೆ ಮುಕ್ತನೈ ಮಡಿವಾಳ ಕೇಳೆಂದ (ಪ್ರಭು.ಲೀ.24-22)
ಅಲ್ಲಮನ ಮಾತಿನ ಸ್ವಾರಸ್ಯವನ್ನು ನಾವು ತಿಳಿಯುವ ಪ್ರಯತ್ನವನ್ನು ಈಗ ಮಾಡೋಣ!
‘ಇಲ್ಲ’ದಿರುವುದನ್ನು ತಾವು ತಿಳಿದೆವು ಎಂಬ ಅರಿವುಳ್ಳವರು ದೇಹ ಮತ್ತು ಮನಸ್ಸುಗಳೊಳಗೆ ತಾವು ಇಲ್ಲದೆ ಇರಬೇಕಾಗುತ್ತದೆ. ಸಂಸಾರ ವೆಂಬುದು ಒಂದು ಸ್ವಪ್ನ. ಈ ಸಂಸಾರದಲ್ಲಿ ಎಚ್ಚರಗೊಂಡ ಜ್ಞಾನ-ಅಜ್ಞಾನಗಳ ತೊಂದರೆಯನ್ನು ನಿವಾರಣೆ ಮಾಡಿಕೊಂಡು ತಾನು ತಾನಾಗಿ ಇರಬಲ್ಲ ವನು ಹುಟ್ಟು-ಸಾವುಗಳನ್ನು ಖಂಡಿತವಾಗಿಯೂ ಗೆಲ್ಲುತ್ತಾನೆ. ಹೀಗೆಂದ ಅಲ್ಲಮನಿಗೆ, ಬಸವಣ್ಣನೇ ಆದಿಯಾಗಿ ಎಲ್ಲರೂ ತಮ್ಮ ಸಂಶಯವನ್ನು ಹೀಗೆ ನಿವೇದಿಸಿಕೊಳ್ಳುವರು: ‘ನೀನು ಮಾಯಾ ದೇಹಮನಗಳ ಕಾರ್ಯಗಳೆಲ್ಲವೂ ಸುಳ್ಳು ಎನ್ನುವುದಾದರೆ, ಮುಕ್ತಿಯನ್ನು ನಾವು ಹುಡುಕುವುದಾದರೂ ಏಕೆ? ನಾವೇ ಸುಳ್ಳು ಎನ್ನುವುದಾದರೆ ಆ ಭಾವನೆಯನ್ನು ತರುವ ಮನಸ್ಸು ಏನಿದೆಯೋ ಅದು ನಿಜವಾಗಲು ಇರುವುದೇ?’
ಅಲ್ಲಮನಿಗೂ ಶರಣರಿಗೂ ನಡೆಯುತ್ತಿರುವ ‘ಮನೋಲಯದ ತಾತ್ವಿಕ ಸಂವಾದ’ ಇಂದಿನ ಆಧುನಿಕ ಮನೋವಿಜ್ಞಾನಿಗಳು ಗಮನಿಸಲು ತಕ್ಕುದಾಗಿದೆ. ಉಪನಿಷತ್ತಿನಲ್ಲೂ ಮನೋವಿಜ್ಞಾನದ ಪರಿಕಲ್ಪನೆಗಳಿವೆ. ಅಲ್ಲಮನು ಒಬ್ಬ ಮನೋವಿಜ್ಞಾನಿಯೂ ಹೌದು. ಅವನು ಬಸವಣ್ಣ ಮುಂತಾದವರ ಪ್ರಶ್ನೆಗಳನ್ನು ಕೇಳಿ-ಅದಕ್ಕೆ ತಕ್ಕುದಾದ ಉತ್ತರಗಳನ್ನು ನೀಡುತ್ತಾನೆ. ‘ಮಾತಿನ ಅಭೇದದಿಂದ ಮಾರಿಯನ್ನು ಕೊಲ್ಲಲು ಸಾಧ್ಯವಿಲ್ಲ. ಅದೇ ರೀತಿ ಮನಸ್ಸಿನ ಸಂಕಲ್ಪದ ಮಾತ್ರದಿಂದಲೇ ನಾಮ-ರೂಪ-ಕ್ರಿಯೆ ಗಳನ್ನು ನಿವಾರಿಸಿಕೊಳ್ಳಲು ಸಾಧ್ಯವೇ? ಇದು ಸಾಧ್ಯವಾಗುವುದು ಪ್ರೀತಿ-ನೀತಿ ಗಳನ್ನು ದಾಟಿದ ಉಪಮಾತೀತನಿಗೆ ಮಾತ್ರ. ಉಳಿದವರಿಗೆ ಇದು ಅಸಾಧ್ಯ. ಎಂದು ಹೇಳಿ ಆದರೆ,
ನೀರ ಹೊಳೆ ಕೆಸರಾಗದಿಹುದೆ ವಿ/ಚಾರಿಸಲು ಬಸವನ ಸಮೀಪದ/ಲಾರು ಸಮ್ಯಗ್ಜ್ಞಾನಸಾಧಕರಾಗರೆಂದೆನುತ (ಪ್ರಭು.ಲೀ 24-24)- ನೀರು ತುಂಬಿದ ಹೊಳೆ ಕೆಸರಾಗುವುದು ಉಂಟಷ್ಟೆ. ವಿಚಾರಮಾಡಿ ನೋಡಿದರೆ ಬಸವಣ್ಣನಿಗೆ ಸಮನಾಗಿ ಪೂರ್ಣಜ್ಞಾನ ಸಾಧಕರು ಯಾರೂ ಇಲ್ಲವೆಂದು ಅಲ್ಲಮನು ಕೈವಾರಿಸಿಬಿಡುತ್ತಾನೆ. ಆಗ ಬಸವಣ್ಣನು ಯುಕ್ತಿ-ಯುಕ್ತವಾಗಿ ‘ಆನೆಯು ತೆಂಗನ್ನು ಒಡೆಯದೆ ಮೆಲ್ಲನೆ ಅದರ ತಿರುಳನ್ನು ಜೀರ್ಣಿಸಿಕೊಳ್ಳುವುದು ಉಂಟಷ್ಟೆ. ಅದೇ ರೀತಿ ನೀನು ಶರೀರವನ್ನು ನಾಶಮಾಡಿದ ರೀತಿಯಲ್ಲಿ ಕುಂದಿಸಿ, ದೇಹದ ಒಳ-ಹೊರಗೆ ತುಂಬಿದ ಮಾಯೆಯನ್ನು ಹಿಮ್ಮೆಟ್ಟಿಸುತ್ತ ಘನವಾದ ಮಹಿಮೆ ಸಲ್ಲುವುದು ನಿಮಗೊಬ್ಬರಿಗೆ ಮಾತ್ರ ಸಾಧ್ಯ’ವೆಂದು ನುಡಿಯುತ್ತಾನೆ. ಆಗ ಅಲ್ಲಮನು ಬಸವಣ್ಣನನ್ನು ಪ್ರಶಂಸಿಸುತ್ತ ‘ಲೋಕಕ್ಕೆ ಬಸವನಿಂದ ಅಧ್ಯಾತ್ಮವು ಹರಡಿತು’ ಎಂದು ಹೇಳಿ ‘ಮನಸ್ಸೆ ಮಹಾದೇವಿಯಕ್ಕ, ನೆನಹು ಚೆನ್ನಬಸವ, ಜ್ಞಾನವೇ ಮಡಿವಳ ಮಾಚಿದೇವ, ವಿವೇಕವೇ ಬಾಚರಸ. ಸುಶೀಲವೇ ಹಡಪದಪ್ಪಣ್ಣ. ದೇಹವೇ ಕಿನ್ನರಿಬೊಮ್ಮಯ್ಯ. ಇವೆಲ್ಲವುಗಳ ಚೇತನವೇ ಬಸವಣ್ಣ’ ಎಂದು ಮನದುಂಬಿ ಬಸವಣ್ಣನನ್ನು ಕೊಂಡಾಡುತ್ತಾನೆ.
ಅಲ್ಲಮನು ಪ್ರತಿಯೊಬ್ಬ ಶರಣರಿಗೂ ಸಂಸಾರವೆಂಬ ಕೆಟ್ಟ ಕನಸನ್ನು ಅವರವರ ಭಾವದಲ್ಲಿ ಕೊಡುತ್ತಾನೆ. ಸಂಸಾರವೆಂಬ ಕೂಪವನ್ನು ಮಾಯಾರಹಿತ ಸ್ಥಿತಿಯನ್ನು ಸುಲಭವಾಗಿ ದಾಟ ಬಹುದಾದ ಕ್ರಮವನ್ನು ಅಲ್ಲಮನು ಎಲ್ಲರಿಗೂ ಅನುಗ್ರಹಿಸುತ್ತಾನೆ. ಬಗೆಬಗೆಯ ಬಣ್ಣಗಳಲ್ಲಿ ಬಂದ ಅಬ್ಬರಯುಕ್ತವಾದ ಮೋಡಗಳ ಮೊತ್ತವು ಬಿರುಗಾಳಿ ಬೀಸಿದಾಗ ಸರಿದು ಹೋಗುವಂತೆ ಅಲ್ಲಿದ್ದ ಸಮಸ್ತ ಶರಣರ ಮನದ ವಾಸನೆಗಳು ಕೆಲವೇ ಕ್ಷಣಗಳಲ್ಲಿ ಮಾಯವಾಗಿ ಹೋಗುತ್ತವೆ. ಅವರೆಲ್ಲರಿಗೆ ಪ್ರಭುಲಿಂಗನ ಲೀಲೆಯಿಂದ ಪರಮಸುಖವು ಪ್ರಾಪ್ತವಾಗುತ್ತದೆ. ಅಲ್ಲಮನು ಎಲ್ಲರಿಗೂ ನಿತ್ಯಪದವಿಯನ್ನು ಕೊಟ್ಟು; ಪರಿಪೂರ್ಣತೆಯ ನಿರ್ಲೆಪವೃತ್ತಿಯಲ್ಲಿ ಪರಬ್ರಹ್ಮವಸ್ತು ನಾನು ನಾನೇ ಆಗಿರುವುದನ್ನು ಪ್ರಕಟಪಡಿಸುತ್ತ ಸಮಸ್ತರನ್ನು ಅನುಗ್ರಹಿಸುವನು.