ಕಾರಟಗಿ ತಾಲೂಕಿನ ನಾಗನಕಲ್ ಹತ್ತಿರದ ಎಲ್‌ವಿಟಿ ತಪೋವನದಲ್ಲಿ ಆಯೋಜಿಸಿದ್ದ ಎಸ್‌ಐಆರ್ ಕಾರ್ಯಾಗಾರಕ್ಕೆ ಶಾಸಕ ಶಿವರಾಜ ತಂಗಡಗಿ ಚಾಲನೆ ನೀಡಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಪುರ, ಎದ್ದೇಳು ಕರ್ನಾಟಕ ಒಕ್ಕೂಟದ ಸದಸ್ಯರಾದ ಕುಮಾರ್ ಸಮತಳ, ಪ್ರಮುಖರಾದ ಚನ್ನಮ್ಮ, ದುರುಗೇಶ್, ವಿಶಾಲ್, ಸಿರಾಜ್ ಪಾಷಾ, ಶೈಲಜಾ ಹಿರೇಮಠ ಇತರರಿದ್ದರು.
ಕಾರಟಗಿ:ಪ್ರಜಾತಂತ್ರ ವಿರೋಧಿಯಾಗಿರುವ ಕೇಂದ್ರ ಸರ್ಕಾರವು ಎಸ್‌ಐಆರ್ ಮೂಲಕ ಮತಹಕ್ಕು ಕಸಿದು ಪ್ರಜಾಪ್ರಭುತ್ವದ ಮೇಲೆ ದಮನಕಾರಿ ನೀತಿ ತೋರುತ್ತಿದ್ದು, ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಎದ್ದೇಳು ಕರ್ನಾಟಕ ಸಂಘಟನೆಯ ಕೇಂದ್ರ ಸಂಯೋಜಕ ನೂರ್ ಶ್ರೀಧರ್ ಹೇಳಿದರು.
ನಾಗನಕಲ್ ಹತ್ತಿರದ ಎಲ್‌ವಿಟಿ ತಪೋವನದಲ್ಲಿ ಕನಕಗಿರಿ-ಕಾರಟಗಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಂದ ಬೂತ್‌ಮಟ್ಟದ ಏಜೆಂಟ್‌ರಿಗೆ ಬುಧವಾರ ಆಯೋಜಿಸಿದ್ದ ಎಸ್‌ಐಆರ್ ಕಾರ್ಯಾಗಾರದಲ್ಲಿ ಮಾತನಾಡಿದರು.
ಪ್ರಜಾತಂತ್ರ ವಿರೋಧಿ ಬಿಜೆಪಿ ಒಂದು ಕಡೆ ಜನಸಾಮಾನ್ಯರ ವಿರುದ್ಧ ಧಮನಕಾರಿ ವರ್ತನೆ ತೋರುತ್ತಿದ್ದರೆ, ಬಿಜೆಪಿಯ ಬಿ ಟೀಂ ಚುನಾವಣಾ ಆಯೋಗ, ಸಿ ಟೀಂ ಆಗಿ ಸುಪ್ರೀಂಕೋರ್ಟ್ ವರ್ತಿಸುತ್ತಿವೆ. ಎಸ್‌ಐಆರ್ ಹೆಸರಿನಲ್ಲಿ ವಿರೋಧ ಪಕ್ಷಗಳ ಮತದಾರರನ್ನು ಗುರಿಯಾಗಿಸಿ, ಅರ್ಹ ಮತದಾರರ ಹೆಸರುಗಳನ್ನು ಸಹ ಪಟ್ಟಿಯಿಂದ ತೆಗೆದು ಹಾಕಲಾಗುತ್ತಿದೆ. ಇದಕ್ಕೆ ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳೇ ನಿದರ್ಶನವಾಗಿವೆ ಎಂದು ದೂರಿದರು.
ದೇಶದಲ್ಲಿ ನಮ್ಮಂತಹ ಎಲ್ಲ ಶಕ್ತಿಗಳು ಒಂದಾಗಿ ಪ್ರಜಾತಂತ್ರವನ್ನು ಉಳಿಸುವ ಮಹಾ ಹೋರಾಟಕ್ಕೆ ಸಜ್ಜಾಗಬೇಕಿದೆ. ಈ ಕಪಟ ಚುನಾವಣಾ ಆಯೋಗವನ್ನು ಬದಲಿಸದಿದ್ದರೆ, ಸರಿಯಾದ ಚುನಾವಣಾ ವ್ಯವಸ್ಥೆ ಜಾರಿಗೆ ತರದೇ ಹೋದಲ್ಲಿ ದೇಶದ ಪ್ರಜಾತಂತ್ರಕ್ಕೆ ಉಳಿಗಾಲವಿಲ್ಲ ಎಂದರು.
ಶಾಸಕ ಶಿವರಾಜ ತಂಗಡಗಿ ಮಾತನಾಡಿ, ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲು ಬಿಜೆಪಿಯವರು ಯಾವುದೇ ಹಂತಕ್ಕೆ ಇಳಿಯಲು ಹೇಸುವುದಿಲ್ಲ. ಕ್ಷೇತ್ರ ಪುನರ್ವಿಂಗಡಣೆ ಮೂಲಕ ಕಾಂಗ್ರೆಸ್‌ಗೆ ಮತ ಹಾಕುವ ಸಾಂಪ್ರದಾಯಿಕ ಮತದಾರರಿರುವ ಕ್ಷೇತ್ರಗಳನ್ನು ಒಡೆದು ಬಿಜೆಪಿ ಮತದಾರರಿರುವ ಕ್ಷೇತ್ರಗಳಲ್ಲಿ ಸೇರಿಸುವ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿದರು.
ನಿಮ್ಮ ಮನೆಯ ಹತ್ತಿರ ಆರ್‌ಎಸ್‌ಎಸ್‌ನವರನ್ನು ಬಿಟ್ಟುಕೊಳ್ಳಬೇಡಿ. ನೀವು ಬಿಟ್ಟುಕೊಂಡಿದ್ದೇ ಆದರೆ, ಅವರು ನಿಮ್ಮ ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ.