ವಿಮಾನ ಸೇವೆ ಸ್ಥಗಿತದಿಂದ ಹೊಡೆತ!

ಬೆಳಗಾವಿ ವಿಮಾನ ನಿಲ್ದಾಣ.
ಬೆಳಗಾವಿ ವಿಮಾನ ನಿಲ್ದಾಣ.
Published on
ಡಿ.ವಿ.ಕಮ್ಮಾರ ಬೆಳಗಾವಿ
ದೇಶದ ಸಣ್ಣ ಮತ್ತು ಮಧ್ಯಮ ವಿಮಾನ ನಿಲ್ದಾಣಗಳು ನೀಡುವ ಸೇವೆ ಆಧರಿಸಿ ವಿಮಾನಯಾನ ಪ್ರಾಧಿಕಾರದಿಂದ ನಡೆಸಲಾಗುವ ಗ್ರಾಹಕರ ಸಂತೃಪ್ತಿ ಸೂಚ್ಯಂಕದಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ 11ನೇ ಶ್ರೇಯಾಂಕ ಬಂದಿದ್ದರೂ, ಕ್ರಮೇಣ ವಿಮಾನ ಸೇವೆ ಕಡಿತಗೊಳಿಸುತ್ತಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಕಳೆದ ಡಿ.25ರಿಂದ ಬೆಳಗಾವಿ&ಮುಂಬೈ ಮಧ್ಯೆ ಇದ್ದ ವಿಮಾನಯಾನ ಸಂಪರ್ಕ ಕಡಿತಗೊಂಡಿದೆ. ಇದರಿಂದ ಎರಡೇ ವಾರದಲ್ಲಿ ಬೆಳಗಾವಿಯ ಕೈಗಾರಿಕಾ ವಲಯದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಪ್ರಮುಖವಾಗಿ ಮುಂಬೈ ಮೂಲಕವೇ ಇಲ್ಲಿನ ಫೌಂಡ್ರಿ ಕ್ಲಸ್ಟರ್​ನ ಬಿಡಿಭಾಗಗಳು ದೇಶದ ವಿವಿಧ ಭಾಗದ ಜತೆಗೆ ವಿದೇಶಕ್ಕೂ ರವಾನೆಯಾಗುವ ವ್ಯವಹಾರ ಜಾಲ ಹೊಂದಿದೆ. ಆದರೀಗ ರಫ್ತು ಜಾಲವೇ ಬಂದ್​ ಆಗುವ ಆತಂಕ ಸೃಷ್ಟಿಯಾಗಿದೆ.
ಉತ್ತಮ ಸೇವೆಯಲ್ಲಿದ್ದರೂ ಏಕಾಏಕಿಯಾಗಿ ಸೇವೆ ನಿಲ್ಲಿಸಿರುವುದರ ಬಗ್ಗೆ ಚರ್ಚೆ ಆರಂಭಗೊಂಡಿದೆ.
ಸುಲಭ ಸಂಪರ್ಕ: ಮುಖ್ಯವಾಗಿ ಇಲ್ಲಿಂದ ಮುಂಬೈ ಸಹಿತ ದೇಶದ ವಿವಿಧ ನಗರಗಳಿಗೆ ವಿಮಾನಯಾನ ಸಂಪರ್ಕವಿರುವ ಕಾರಣಕ್ಕೆ, ಬೇರೆ ಬೇರೆಯ ಕೈಗಾರಿಕೆಗಳ ಜತೆಗೆ ಇಲ್ಲಿಂದ ನೇರ ವ್ಯವಹಾರ ಸಂಪರ್ಕ ವೃದ್ಧಿಯಾಗಿತ್ತು. ಅನೇಕ ಖರೀದಿದಾರರು ಮುಂಬೈ ಮೂಲಕವೇ ಇಲ್ಲಿನ ಕೈಗಾರಿಕೆಗಳಿಗೆ ಬರುತ್ತಿದ್ದರು. ವಿಮಾನ ಸಂಪರ್ಕ ನಿಂತಿದ್ದರಿಂದ ಖರೀದಿಗಾರರು ಬೇರೆ ಕೈಗಾರಿಕಾ ವಲಯದತ್ತ ಮುಖ ಮಾಡುತ್ತಿದ್ದಾರೆ.
ಸದ್ಯ ಗ್ರಾಹಕರ ಸಂತೃಪ್ತಿ ಸೂಚ್ಯಂಕದಲ್ಲಿ ಹುಬ್ಬಳ್ಳಿ ವಿಮಾನ ನಿಲ್ದಾಣ ದೇಶದಲ್ಲೇ 4ನೇ ಸ್ಥಾನದಲ್ಲಿದ್ದರೆ, 11ನೇ ಸ್ಥಾನ ಪಡೆದಿರುವ ಸಾಂಬ್ರಾ ನಿಲ್ದಾಣಕ್ಕೆ 4.89 ಅಂಕ ಸಿಕ್ಕಿದೆ. ಮೈಸೂರು ನಿಲ್ದಾಣ 15ನೇ ಸ್ಥಾನದಲ್ಲಿದೆ. ಇಂತಹ ಬೆಳವಣಿಗೆ ನಡುವೆ ಮುಂಬೈ ವಿಮಾನ ಸೇವೆ ಕಸಿದುಕೊಂಡಿದ್ದಕ್ಕೆ ಸ್ಥಳಿಯ ಕೈಗಾರಿಕೋದ್ಯಮಿಗಳು ಹೋರಾಟಕ್ಕೆ ಮುಂದಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net