ಔರಾದ್(ಬೀದರ್): ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಮಕ್ಕಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಎಕಲಾರ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳನ್ನು ಹೈದರಾಬಾದ್ನಿಂದ ತಿರುಪತಿಗೆ ವಿಮಾನದಲ್ಲಿ ಕರೆದೊಯ್ಯಲಾಯಿತು. ಇಂಗ್ಲಿಷ್ ವಿಷಯದಲ್ಲಿ 95ಕ್ಕಿಂತ ಹೆಚ್ಚು ಅಂಕ ಪಡೆದ ಓಂಕಾರ ಕಲ್ಲಪ್ಪ ರಾಮಗೊಂಡ (97 ಅಂಕ), ಭಾಗ್ಯವಂತಿ ಅಶೋಕ ಬಿರಾದಾರ (96) ಹಾಗೂ ಅಂಕಿತಾ ಸಿದ್ದಪ್ಪ ದೇಶಟ್ಟೆ (96) ಭಾನುವಾರ ಹೈದರಾಬಾದ್ನಿಂದ ತಿರುಪತಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಶಿಕ ಸತೀಶ ಮಜಗೆ, ಮಕ್ಕಳಲ್ಲಿ ಓದಿನ ಕುರಿತು ಆಸಕ್ತಿ ಮತ್ತು ಸಾಧನೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಹಿಂದೆಯೇ ವಿಮಾನಯಾನ ಕುರಿತು ಮಾಹಿತಿ ನೀಡಿದ್ದರು. ಗ್ರಾಮೀಣ ಮಕ್ಕಳಲ್ಲಿ ಸ್ಪರ್ಧಾ ಮನೋಭಾವ ಮೂಡಿಸುವುದಲ್ಲದೇ ಹೆಚ್ಚಿನ ಅಂಕ ಪಡೆಯಲು ಇಂತಹ ಪ್ರಯೋಗಗಳು ಪ್ರೇರಣೆಯಾಗಿದೆ. ಜೀವನದಲ್ಲಿ ವಿಮಾನಯಾನ ಕನಸು ನನಸಾಗುತ್ತಿರುವುದು ಖುಷಿ ನೀಡುತ್ತಿದೆ ಎಂದು ಮಕ್ಕಳು ಸಂತಸ ಹಂಚಿಕೊಂಡರು.