ಐನೋರಹೊಸಹಳ್ಳಿ ಕೂಸಿನ ಮನೆ ಇತರ ಕೇಂದ್ರಗಳಿಗೆ ಮಾದರಿ

Ainorahosahalli Nursery School a model for other centres
Ainorahosahalli Nursery School a model for other centres
Published on

ಬಂಗಾರಪೇಟೆ:

ಐನೋರಹೊಸಹಳ್ಳಿಯಲ್ಲಿರುವ "ಕೂಸಿನ ಮನೆ' ರಾಜ್ಯದ ಇತರ ಕೂಸಿನ ಮನೆಗಳಿಗೆ ಮಾದರಿಯಾಗಿದೆ. ಮಕ್ಕಳ ಆರೈಕೆ ಹಾಗೂ ನಿರ್ವಹಣೆ ಅತ್ಯುತ್ತಮವಾಗಿ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಆಯುಕ್ತೆ ಉಮಾ ಮಹಾದೇವನ್​ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮದ ಕೂಸಿನ ಮನೆ ಹಾಗೂ ಗ್ರಂಥಾಲಯಕ್ಕೆ *ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೂಸಿನ ಮನೆಯಲ್ಲಿ ಸುಮಾರು 10 ಮಕ್ಕಳಿಗೆ ಆರೈಕೆ ನೀಡುತ್ತಿರುವುದನ್ನು ವೀಕ್ಷಿಸಿದರು. ಮಕ್ಕಳಿಗೆ ನಿತ್ಯ ಹಣ್ಣು&ಹಂಪಲು, ಮೊಳಕೆ ಕಾಳು ಸೇರಿ ವಿವಿಧ ಪೌಷ್ಟಿಕ ಆಹಾರ ವಿತರಿಸುತ್ತಿರುವುದನ್ನು ವೀಸಿದರು.
ಕೂಸಿನ ಮನೆಯಲ್ಲಿ ಮಕ್ಕಳ ಆರೈಕೆಗೆ ಅಗತ್ಯವಿರುವ ಮೂಲ ಸೌಕರ್ಯ ಗುಣಮಟ್ಟದಿಂದ ಕಲ್ಪಿಸಿ ಉತ್ತಮವಾಗಿ ನಿರ್ವಹಿಸಲಾಗುತ್ತಿದೆ. ಕೇವಲ ಕೂಲಿ ಕೆಲಸಕ್ಕೆ ತೆರಳುವ ಪಾಲಕರ ಮಕ್ಕಳಿಗೆ ಮಾತ್ರ ಆರೈಕೆ ನೀಡುವುದಕ್ಕೆ ಸೀಮಿತವಾಗದೆ, ಗ್ರಾಮದಲ್ಲಿ ಕೂಲಿ ಕೆಲಸವನ್ನೇ ಅವಲಂಬಿಸಿರುವ ಹಾಗೂ ತಮ್ಮ ಮಕ್ಕಳನ್ನು ಆರೈಕೆ ಮಾಡಲು ಕಷ್ಟ್ಟಪಡುತ್ತಿರುವ ಇತರ ಪಾಲಕರ ಮಕ್ಕಳಿಗೂ ಆರೈಕೆ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಕಟ್ಟಡ ಚಿಕ್ಕದಾಗಿರುವುದರಿಂದ ಸ್ಥಳಾವಕಾಶದ ಕೊರತೆ ಇದೆ. ಗ್ರಾಮದಲ್ಲಿ ಹೆಚ್ಚು ಸ್ಥಳಾವಕಾಶವಿರುವ ದೊಡ್ಡ ಕಟ್ಟಡ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವವರು ಗ್ರಂಥಾಲಯ ಸೌಲಭ್ಯ ಸದ್ಬಳಕೆ ಮಾಡಿಕೊಂಡು ಜ್ಞಾನ ಹೆಚ್ಚಿಸಿಕೊಳ್ಳಬೇಕು. ಮಕ್ಕಳಿಗೆ ಮನೆಗಳಲ್ಲಿ ಓದಲು ಸಾಧ್ಯವಾಗದಿದ್ದರೆ, ರಾತ್ರಿ ವೇಳೆಯಲ್ಲಿಯೂ ಗ್ರಂಥಾಲಯಕ್ಕೆ ಬಂದು ಪುಸ್ತಕಗಳನ್ನು ಓದುವಂತಹ ವ್ಯವಸ್ಥೆ ಅಧಿಕಾರಿಗಳು ಕಲ್ಪಿಸಬೇಕು ಎಂದು ತಿಳಿಸಿದರು.
ಗ್ರಾಪಂ ಅಧಿಕಾರಿಗಳು ಜನರಿಗೆ ಹತ್ತಿರವಾಗಿ ಕಾರ್ಯನಿರ್ವಹಿಸಿದರೆ ಗ್ರಾಮಗಳ ಅಭಿವೃದ್ಧಿ ಮತ್ತಷ್ಟು ವೇಗ ಪಡೆಯುತ್ತದೆ. ಗ್ರಾಮದಲ್ಲಿ ಕಸ ಸಂಗ್ರಹಣೆಯಂತಹ ಸ್ವಚ್ಛತಾ ಕಾರ್ಯ ಮಹಿಳೆಯರು ನಿರ್ವಹಿಸಲು ಆದ್ಯತೆ ನೀಡಿದರೆ ಸ್ವಚ್ಛತೆ ಪರಿಣಾಮಕಾರಿಯಾಗಿ ಕಾಪಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವಿಣ್​ ಪಿ.ಬಾಗೇವಾಡಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ರವಿಕುಮಾರ್​, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯಶ್ವಂತ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net