‘ಮಳೆ’ ಗರಿಗೆದರಿದ ಕೃಷಿ ಚಟುವಟಿಕೆ

ಗುಂಡ್ಲುಪೇಟೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೂರ್ಯಕಾಂತಿ ಬಿತ್ತನೆ ಬೀಜ ಸಂಗ್ರಹ ಮಾಡಲಾಗಿದೆ.
ಗುಂಡ್ಲುಪೇಟೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೂರ್ಯಕಾಂತಿ ಬಿತ್ತನೆ ಬೀಜ ಸಂಗ್ರಹ ಮಾಡಲಾಗಿದೆ.
Published on
ಗುಂಡ್ಲುಪೇಟೆ: ಭಾನುವಾರ ರಾತ್ರಿ ತಾಲೂಕಿನ ಕೆಲವು ಭಾಗಗಳಿಗೆ ಮಳೆ ಬಿದ್ದು ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ. ರಾತ್ರಿ ಬಿದ್ದ ಮಳೆಯಿಂದ ಗ್ರಾಮಾಂತರ ಪ್ರದೇಶಗಳ ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿಸಿ ಮುಂದೆ ಬೀಳುವ ಮಳೆಗೆ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಯುಗಾದಿ ಹಬ್ಬದ ಸಂದರ್ಭದಲ್ಲಿ ಬೀಳುವ ಮಳೆಗೆ ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಆರಂಭವಾಗುತ್ತದೆ. ಹಬ್ಬಕ್ಕೂ ಮೊದಲೇ ಕೃಷಿ ಚಟುವಟಿಕೆಗಳು ಗರಿಗೆದರಿ ರೈತರು ತಮ್ಮ ಜಮೀನುಗಳಿಗೆ ಗೊಬ್ಬರ, ಕೆರೆಗಳ ಮೆಕ್ಕಲು ಮಣ್ಣು ಹೂಡಿ ಮೇಲಿಂದ ಮೇಲೆ ಉಳುಮೆ ಮಾಡಿ ಭೂಮಿಯನ್ನು ಹದಗೊಳಿಸಿದ್ದಾರೆ. ಯುಗಾದಿ ಹಬ್ಬದಂದು ಮೊದಲನೇ ಮಳೆ ಬೀಳುತ್ತಿದ್ದಂತೆ ಬಿತ್ತನೆ ಆರಂಭಿಸುವುದು ವಾಡಿಕೆ. ಆದರೆ ಈ ಬಾರಿ ಹಬ್ಬ ಕಳೆದು 15 ದಿನಗಳಾಗುತ್ತಾ ಬಂದಿದ್ದರೂ ಇನ್ನೂ ಮಳೆ ಬೀಳದ ಕಾರಣ ಬಿತ್ತನೆ ಕಾರ್ಯ ವಿಳಂಬವಾಗಿದೆ. ಮಳೆ ಬಿದ್ದರೆ ಬಿತ್ತನೆ ಮಾಡಿಕೊಳ್ಳಲು ರೈತರು ತಮ್ಮ ಜಮೀನುಗಳನ್ನು ಉಳುಮೆ ಮಾಡಿ ಹದಗೊಳಿಸಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯು ಪಟ್ಟಣ ಸೇರಿದಂತೆ ತಾಲೂಕಿನ ತೆರಕಣಾಂಬಿ, ಬೇಗೂರು ಹಾಗೂ ಹಂಗಳ ಗ್ರಾಮಗಳ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ 200 ಕ್ವಿಂಟಾಲ್ ಸೂರ್ಯಕಾಂತಿ ಗಂಗಾ ಕಾವೇರಿ ತಳಿಯ ಬಿತ್ತನೆ ಬೀಜಗಳನ್ನು ಸಂಗ್ರಹಿಸಿದೆ. ಸದ್ಯ ಹೆಚ್ಚಿನ ರೈತರು ಸೂರ್ಯಕಾಂತಿ ಬಿತ್ತನೆ ಮಾಡುವುದರಿಂದ ಅದನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಕೆಲವೇ ಭಾಗಗಳಿಗೆ ಮಾತ್ರ ಮಳೆ ಬಿದ್ದಿರುವುದರಿಂದ ಇನ್ನೂ ಬೀಜ ಮಾರಾಟ ಆರಂಭವಾಗಿಲ್ಲ. ರೈತರು ಕೇಳಿದ ಕೂಡಲೇ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಪೂರೈಸಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net