ಬಳ್ಳಾರಿಯ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತುಸಂಗ್ರಹಾಲಯದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮವನ್ನು ಮಲ್ಲಸಜ್ಜನ ವ್ಯಾಯಾಮ ಶಾಲೆಯ ಕಾರ್ಯದರ್ಶಿ ಟಿ.ಜಿ. ವಿಠ್ಠಲ ಉದ್ಘಾಟಿಸಿದರು. ಉಪನ್ಯಾಸಕ ಒಬ್ಬಯ್ಯ, ನಿವೃತ್ತ ಅಧಿಕಾರಿ ಮಹಾಬಳೇಶ್ವರಪ್ಪ ಇದ್ದರು.
ಬಳ್ಳಾರಿ: ಚರಿತ್ರೆ ಅರಿಯಲು ವಸ್ತು ಸಂಗ್ರಹಾಲಯಗಳು ಸಹಕಾರಿಯಾಗಿವೆ ಎಂದು ಮಲ್ಲಸಜ್ಜನ ವ್ಯಾಯಾಮ ಶಾಲೆಯ ಕಾರ್ಯದರ್ಶಿ ಟಿ.ಜಿ. ವಿಠ್ಠಲ ಹೇಳಿದರು.
ನಗರದ ರಾಬರ್ಟ್ ಬ್ರೂಸ್ ಫುಟ್ ಸಂಗನಕಲ್ಲು ಪ್ರಾಕ್ತನ ವಸ್ತುಸಂಗ್ರಹಾಲಯದಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇತಿಹಾಸದ ಆಸಕ್ತರು ಪಠ್ಯಪುಸ್ತಕಗಳನ್ನು ಓದುವುದು ಮತ್ತು ಪಳೆಯುಳಿಕೆಗಳ ಚಿತ್ರಗಳನ್ನು ನೋಡುವುದು ಅನಿವಾರ್ಯವಿರಬಹುದು. ಆದರೆ ವಸ್ತು ಸಂಗ್ರಹಾಲಯಕ್ಕೆ ನೇರವಾಗಿ ಭೇಟಿ ನೀಡಿದಾಗ ಇತಿಹಾಸದ ಕುರುಹುಗಳನ್ನು ಕಣ್ತುಂಬಿಕೊಂಡು ಮಾಹಿತಿ ಪಡೆದುಕೊಳ್ಳುವ ಅನುಭವವೇ ವಿಶಿಷ್ಟವಾಗಿರುತ್ತದೆ ಎಂದರು.
ಕೃಷಿ ಇಲಾಖೆಯ ನಿವೃತ್ತ ಅಧಿಕಾರಿ ಮಹಾಬಳೇಶ್ವರಪ್ಪ ಮಾತನಾಡಿ, ವಸ್ತುಸಂಗ್ರಹಾಲಯಗಳ ಮೂಲಕ ಸಾವಿರಾರು ವರ್ಷಗಳ ಹಿಂದಿನ ಜನಜೀವನ, ಆಹಾರ ಪದ್ಧತಿ ಬಗ್ಗೆ ವಿವರವಾದ ಮಾಹಿತಿ ಪಡೆಯಬಹುದು ಎಂದರು.
ಕಲಬುರಗಿಯ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿನಿಯರಾದ ರೋಹಿಣಿ, ಅಶ್ವಿನಿ ಅವರು ಉನ್ನತ ಸಂಶೋಧನೆಗಳಲ್ಲಿ ವಸ್ತುಸಂಗ್ರಹಾಲಯಗಳ ಪಾತ್ರದ ಕುರಿತು ಬೆಳಕು ಚೆಲ್ಲಿದರು.