ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್​ ಟಿಕೆಟ್​ ಬೆಲೆ ಹೆಚ್ಚಳ? ನವೆಂಬರ್​ ಮೊದಲ ವಾರದಲ್ಲಿ ನಿರ್ಧರಿಸುವುದಾಗಿ ಬೈರತಿ ಸುರೇಶ್ ಹೇಳಿಕೆ

bus fare hike
ಹಾಲಿನ ದರ ಏರಿಕೆ ಬೆನ್ನಲ್ಲೇ ಬಸ್​ ಟಿಕೆಟ್​ ಬೆಲೆ ಹೆಚ್ಚಳ? ನವೆಂಬರ್​ ಮೊದಲ ವಾರದಲ್ಲಿ ನಿರ್ಧಾರಿಸವುದಾಗಿ ಬೈರತಿ ಸುರೇಶ್ ಹೇಳಿಕೆ
Published on: 

ಬೆಂಗಳೂರು: ಈಗಾಗಲೇ ಲೀಟರ್​ಗೆ 8 ರೂ. ಹಾಲಿನ ದರ ಏರಿಕೆ ಮಾಡುವ ಮೂಲಕ ರಾಜ್ಯದ ಜನತೆಗೆ ಬಿಗ್ ಶಾಕ್ ನೀಡಿರುವ ಸರ್ಕಾರ, ಬಸ್​ ಪ್ರಯಾಣದ ದರವನ್ನೂ ಹೆಚ್ಚಳ ಮಾಡುವ ಮುನ್ಸೂಚನೆಗಳು ಲಭಿಸಿವೆ. ನವೆಂಬರ್ ತಿಂಗಳ ಮೊದಲ ವಾರದಲ್ಲಿ ಸರ್ಕಾರಿ ಬಸ್ ಟಿಕೆಟ್​ ದರವನ್ನು ಏರಿಸುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ಗುರುವಾರ ಸಂಪುಟ ಸಭೆಯ ಬಳಿಕ ಮಾತನಾಡಿದ ಸಚಿವರು, ಸಭೆಯಲ್ಲಿ ಬಸ್ ಪ್ರಯಾಣ ದರ ಏರಿಕೆ ವಿಚಾರದ ಬಗ್ಗೆ ವಿಸ್ತೃತ ಚರ್ಚೆಯೂ ನಡೆಯಿತು. ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಲ್ಲಿ ಐದು ಬಾರಿ ಡೀಸೆಲ್ ಮತ್ತು ಇತರ ತೈಲೋತ್ಪನ್ನಗಳ ದರವನ್ನು ಹೆಚ್ಚಳ ಮಾಡಿದೆ. ಇದರಿಂದ ಸರ್ಕಾರದ ನಾಲ್ಕೂ ಸಾರಿಗೆ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದರು.

ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿ ರಾಜ್ಯದ ಜನರಿಗೆ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವ ದೃಷ್ಟಿಯಿಂದ ಈಗಾಗಲೇ ನಾವು ಬಸ್ ಪ್ರಯಾಣದ ದರ ಹೆಚ್ಚಳ ಮಾಡಬೇಕೆಂದು ತೀರ್ಮಾನ ಮಾಡಿದ್ದೇವೆ. ಅದರಂತೆ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಬಗ್ಗೆ ಎಲ್ಲ ಸಚಿವರ ಜೊತೆ ಚರ್ಚೆ ನಡೆಸಿದರು ಎಂದರು.

ದರ ಏರಿಕೆ ಇಲಾಖೆಗೆ ಹೊಣೆ

ಎಲ್ಲಾ ಸಚಿವರ ಅಭಿಪ್ರಾಯ ಪಡೆದ ನಂತರ ಮುಖ್ಯಮಂತ್ರಿಗಳು ಪ್ರಯಾಣ ದರ ಏರಿಕೆ ಮಾಡುವ ನಿರ್ಧಾರವನ್ನು ನಮ್ಮ ಸಾರಿಗೆ ಇಲಾಖೆಗೇ ವಹಿಸಿದ್ದಾರೆ. ಸಿಎಂ ನೀಡಿರುವ ಜವಾಬ್ದಾರಿ ಹಿನ್ನೆಲೆಯಲ್ಲಿ ನವೆಂಬರ್ 3ರಂದು ಎಲ್ಲಾ ನಾಲ್ಕೂ ಸಾರಿಗೆ ನಿಗಮಗಳ ಉನ್ನತಾಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ನವೆಂಬರ್ 4ರಂದು ಈ ಬಗ್ಗೆ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.

Also Read
ಅನ್ಯ ರಾಜ್ಯಗಳ ಹಾಲಿನ​ ದರ ಎಷ್ಟಿದೆ ಹೇಳಿ? ಬೆಲೆ ಹೆಚ್ಚಳದ ಬಗ್ಗೆ ಸಚಿವರಾದ ಕೃಷ್ಣಭೈರೇಗೌಡ, ಲಕ್ಷ್ಮಣ ಸವದಿ ಸ್ಪಷ್ಟನೆ
bus fare hike

ವಿಪಕ್ಷಗಳ ಷಡ್ಯಂತ್ರ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿಸಿದಂತೆ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ವಿರೋಧ ಪಕ್ಷಗಳ ವಿರುದ್ಧ ತೀವ್ರ ಕಿಡಿಕಾರಿದ ಬೈರತಿ ಸುರೇಶ್, ಇದು ವಿಪಕ್ಷಗಳ ಷಡ್ಯಂತ್ರ. ನಮ್ಮ ನಾಡು ಕಂಡ ಧೀಮಂತ ನಾಯಕ ಸಿದ್ದರಾಮಯ್ಯ. ಅವರನ್ನು ತೇಜೋವಧೆ ಮಾಡಬೇಕೆಂಬ ಉದ್ದೇಶದಿಂದ ವಿರೋಧ ಪಕ್ಷದವರು ಷಡ್ಯಂತ್ರ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರದ್ದು ಯಾವುದೇ ತಪ್ಪಿಲ್ಲ. ನಿಷ್ಕಳಂಕಿತರು ಎಂಬುದು ಸಾಬೀತಾಗಿದೆ. ಈ ಬಗ್ಗೆ ಪಾರದರ್ಶಕವಾದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು.