ಬೆಂಗಳೂರು: ರಾಜ್ಯದ ಜನ ಸಾಮಾನ್ಯರಿಗೆ ಸರ್ಕಾರದ ಕಡೆಯಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದ್ದು, ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ ಬರೋಬ್ಬರಿ 8 ರೂ.ಗಳಷ್ಟು ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ. ಈ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಸಚಿವರಾದ ಕೃಷ್ಣಭೈರೇಗೌಡ ಮತ್ತು ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕೂ ಮೊದಲು ನಮ್ಮಲ್ಲಿ ಮಾರಾಟದ ಹಾಲಿನ ದರ 46 ಇತ್ತು. ಇನ್ಮುಂದೆ ಲೀಟರ್ ಹಾಲಿನ ಮಾರಾಟ ದರವು 54 ರೂ. ಆಗಲಿದೆ. ಬೇರೆ ರಾಜ್ಯಗಳ ಹಾಲಿನ ದರ ಎಷ್ಟಿದೆ ಹೇಳಿ. ನಮ್ಮ ಬೆಲೆಗೂ ಬೇರೆ ರಾಜ್ಯದ ದರಗಳಿಗೆ ಹೋಲಿಕೆ ಮಾಡಿ ನೋಡಿ ಎಂದು ಸಹಕಾರ ಸಚಿವ ಲಕ್ಷಣ ಸವದಿ ಹೇಳಿದ್ದಾರೆ.
ದರ ಪರಿಷ್ಕರಣೆ ನಂತರವೂ ನಮ್ಮ ಏರಿಕೆ ಕಡಿಮೆಯೇ ಎಂದ ಕಂದಾಯ ಸಚಿವ ಕೃಷ್ಣಭೈರೇಗೌಡ, ರೈತರಿಗೆ ಒಂದು ಲೀಟರ್ ಹಾಲಿಗೆ 35 ರೂ. ಸಿಗುತ್ತಿತ್ತು. ಇನ್ನು ಮುಂದೆ ಲೀಟರ್‌ಗೆ 42 ರೂ. ರೈತರಿಗೆ ಸಿಗುತ್ತದೆ. 5 ರೂ. ಲೀಟರ್‌ಗೆ ಪ್ರೋತ್ಸಾಹ ಧನವೂ ಸಿಗುತ್ತೆ. ಒಕ್ಕೂಟಗಳು 10 ರೂ. ಹೆಚ್ಚಳಕ್ಕೆ ಕೇಳಿದ್ದರು. ಆದರೆ, ನಾವು 10 ರೂ. ಬದಲು, 8 ರೂ.ಗೆ ಇಳಿಸಿದ್ದೇವೆ ಎಂದರು.
ನವೆಂಬರ್ 1ನೇ ತಾರೀಖಿನಿಂದ ಜಾರಿಗೊಳಿಸಲು ಸಂಪುಟ ನಿರ್ಧಾರ ಮಾಡಿದೆ. ರೈತರು ಹಾಲಿನ ದರ ಪರಿಷ್ಕರಣೆಗೆ ಒತ್ತಡ ತಂದಿದ್ರು, ಒಕ್ಕೂಟದಿಂದಲೂ ಬೇಡಿಕೆ ಇತ್ತು. ರಾಜ್ಯದಲ್ಲಿ ಹಾಲು ಮಾರಾಟದಲ್ಲಿ 46 ರೂ. ಇದೆ. ಬೇರೆ ಎಲ್ಲಾ ರಾಜ್ಯಗಳಲ್ಲಿ ನಮಗಿಂತ ಹೆಚ್ಚು ದರ ಇದೆ. ಎಲ್ಲಾ ಬೆಲೆಗಳು ಹೆಚ್ಚಳ ಆಗಿರೋದ್ರಿಂದ ರೈತರು ಬೆಲೆ ಹೆಚ್ಚಳಕ್ಕೆ ಒತ್ತಾಯ ಮಾಡಿದ್ದರು ಎಂದರು.
ರೈತರು ಬಿಕ್ಕಟ್ಟಿನಲ್ಲಿ ಇರುವುದರಿಂದ ನಾವು ಅವರಿಗೆ ನೆರವಿಗೆ ಬರಬೇಕು ಅಂತಾ ಹೆಚ್ಚಳ ಮಾಡಿದ್ದೇವೆ. ಹಾಲು ಉತ್ಪಾದನೆ ಮಾಡುವ ರೈತರಿಗೆ 7 ರೂ. ಹೆಚ್ಚಳ ಮಾಡಬೇಕು. ಒಕ್ಕೂಟಗಳಿಗೆ 1 ರೂ. ಕೊಡಬೇಕು. ಹೀಗಾಗಿ, ಒಟ್ಟು 8 ರೂ. ಬೆಲೆ ಹೆಚ್ಚಳಕ್ಕೆ ಸಂಪುಟ ತೀರ್ಮಾನ ಕೈಗೊಂಡಿದೆ. 7 ರೂ. ರೈತರಿಗೆ, 1 ರೂ. ಒಕ್ಕೂಟಗಳಿಗೆ ಹೋಗಲಿದೆ ಎಂದು ಹೇಳಿದರು.
ರಾಜ್ಯದಲ್ಲಿ ತೀವ್ರವಾದ ಬರಗಾಲವಿದೆ. 224 ಆಸುಪಾಸು ತಾಲೂಕುಗಳು ಬರ ಘೋಷಣೆಯಾಗಿದೆ. ರೈತರು ನಾನಾ ಸಂಕಷ್ಟಗಳನ್ನು ಅನುಸರಿಸ್ತಿದ್ದಾರೆ. ಜಲಾಶಯಗಳಲ್ಲಿ ನೀರಿನ ಕೊರತೆಯಿದೆ. ಬೆಳೆಗಳು ಒಣಗಿ ಹೋಗಿವೆ, ಬೆಳೆ ಇಲ್ಲ. ಕಬ್ಬಿನ ದರ ಸಾಲವುದಿಲ್ಲ ಎಂದು ರೈತರು ಹೋರಾಟ ಮಾಡ್ತಿದ್ದಾರೆ. ನಾವು ಎಲ್ಲಾ ರೀತಿಯಲ್ಲಿ ರೈತರ ನೆರವಿಗೆ ಬರೋದು ನಮ್ಮ ಕರ್ತವ್ಯ, ಧರ್ಮ. ಹಲವು ರೈತರು ಹೈನುಗಾರಿಕೆ ಮೂಲಕ ಜೀವನ ನಡೆಸ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿ ಕುಡಿಯುವ ನೀರಿನ ಸಮರ್ಪಕ ನಿರ್ವಹಣೆಗೆ ಪುಲಕೇಶಿನಗರದ ಕಾವಲ್ ಭೈರಸಂದ್ರ, ಜೆಪಿ ನಗರದ ಬನಶಂಕರಿ ಭಾಗದಲ್ಲಿ 2 GLRS ನಿರ್ಮಾಣಕ್ಕೆ ಒಪ್ಪಿಗೆ, 61 ಕೋಟಿ ವೆಚ್ಚದಲ್ಲಿ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಸರ್ವಜ್ಞ ನಗರದಲ್ಲಿ ಕಲುಷಿತ ನೀರು ಸೀವೇಜ್ ಇಲ್ಲದೆ, ಕೆರೆಗೆ ಹೋಗುತ್ತಿದೆ. ಅದನ್ನು ತಪ್ಪಿಸಲು ಕಾಚಾರಕನಳ್ಳಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಸ್ಥಾಪನೆಗೆ ಅಸ್ತು ಎಂದಿದ್ದೇವೆ ಎಂದರು.
ಇನ್ನು, 9243 ಮಹಿಳೆಯರಿಗೆ ಹೊಲಿಗೆ ಯಂತ್ರ ನೀಡಲು, 16 ಕೋಟಿ ಮೀಸಲಿಟ್ಟಿದ್ದೇವೆ. ಸರ್ಕಾರಿ ಯೋಜನೆಗಳ ಮೌಲ್ಯಮಾಪನ ಮಾಡಲು, ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ಒಪ್ಪಿಗೆ ಸೂಚಿಸಿದೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡಗಳ ಅಡಿಯಲ್ಲಿ ಅಭಿವೃದ್ಧಿ ನಿಗಮ ಇದೆ. ಪಂಗಡಗಳಲ್ಲಿ 2 ಲಕ್ಷ 80 ಸಾವಿರ ಜನ ಆದಿವಾಸಿಗಳು ಇದ್ದಾರೆ. ಇವರನ್ನು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ. ಇವರಿಗೆ ಪ್ರತ್ಯೇಕವಾಗಿ ಒಂದು ಅಭಿವೃದ್ಧಿ ನಿಗಮ ಆಗಬೇಕು ಹಾಗೂ ಅವರ ಕಲ್ಯಾಣಕ್ಕಾಗಿ ಕರ್ನಾಟಕ ಆದಿವಾಸಿ ನಿಗಮ ಸ್ಥಾಪನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ಡೀಸೆಲ್, ಪೆಟ್ರೋಲ್ ದರ, ಪ್ಲಾಸ್ಟಿಕ್ ದರ ಹೆಚ್ಚಳ ಆಗಿರುವುದರಿಂದ 1 ರೂ. ಒಕ್ಕೂಟಗಳಿಗೆ ಕೊಡ್ತಿದ್ದೀವಿ. ಇಂಧನ ದರ ಏರಿಕೆ ಆದರೂ ಪರವಾಗಿಲ್ಲ. ಅದೇ ಹಾಲಿನ ದರ ಹೆಚ್ಚಾದ್ರೆ ಏಕೆ ಹೀಗೆ? ಇಲ್ಲಿ ನಾವು ರೈತರಿಗೆ ಕೊಡುತ್ತಿದ್ದೇವೆ ಅಲ್ವಾ ಎಂದರು. ಇನ್ನು, ಪ್ರೈಮರಿ ಕಸದ ಕಲೆಕ್ಷನ್ಗೆ 598 ಕೋಟಿ ರೂ. ವರ್ಷಕ್ಕೆ ಖರ್ಚು ಆಗುತ್ತೆ. ಇದು ಹೊಸ ಟೆಂಡರ್ ಮಾಡಿದ್ರೆ 620 ಕೋಟಿ ರೂ. ಸುಮಾರು ಆಗಬಹುದು ಎಂದು ಹೇಳಿದರು.
ಬಸ್ ದರ ಏರಿಕೆ ಕುರಿತಾಗಿಯೂ ಚರ್ಚೆ ಆಯಿತು. ಜನವರಿಯಿಂದ 4ರಿಂದ 5 ಭಾರಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ. ಇದು ಹೀಗೆ ಆದರೆ, ನಿಗಮಗಳು ತೀರ ಕಷ್ಟವಾಗುತ್ತದೆ. ಹೀಗಾಗಿ, ಮುಂದೆ ನೋಡೋಣ ಎಂದು ಹೇಳಿದರು.