ಕಾಲುವೆಗೆ ಮಣ್ಣು ಸುರಿದು ಸಂತ್ರಸ್ತರ ಪ್ರತಿಭಟನೆ

ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಪಿ.ಟಿ. ಗ್ರಾಮದ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಗೆ ಮಣ್ಣು ಸುರಿದು ನೀರಿನ ಹರಿವನ್ನು ತಡೆಗಟ್ಟಿರುವುದು. ಹಣಮಂತ ಸೋಮನಾಳ, ತಮ್ಮಣ್ಣ ಬೈಲಗೊಂಡ, ವಿಜಯಕುಮಾರ ಡೊಮನಾಳ, ಶಾಂತಪ್ಪ ಬ್ಯಾಕೋಡ, ಸಿದ್ದಪ್ಪ ಗೋಡೆಕಾರ, ಮುತ್ತಪ್ಪ ಮಾದಿನಾಳ ಇತರರಿದ್ದರು.
ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಪಿ.ಟಿ. ಗ್ರಾಮದ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಗೆ ಮಣ್ಣು ಸುರಿದು ನೀರಿನ ಹರಿವನ್ನು ತಡೆಗಟ್ಟಿರುವುದು. ಹಣಮಂತ ಸೋಮನಾಳ, ತಮ್ಮಣ್ಣ ಬೈಲಗೊಂಡ, ವಿಜಯಕುಮಾರ ಡೊಮನಾಳ, ಶಾಂತಪ್ಪ ಬ್ಯಾಕೋಡ, ಸಿದ್ದಪ್ಪ ಗೋಡೆಕಾರ, ಮುತ್ತಪ್ಪ ಮಾದಿನಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭೂಮಿ ಕಳೆದುಕೊಂಡ ಸಿದ್ದಾಪುರ ಪಿಟಿ ಭಾಗದ ರೈತರ ಆಕ್ರೋಶ
  • ಇನ್ನೂ ಬಾರದ ಪರಿಹಾರ ಹಣ
  • ಅಧಿಕಾರಿಗಳ ನಿರ್ಲಕ್ಷೃಕ್ಕೆ ಸಂಕಷ್ಟ
ವಿಜಯಪುರ : ಮುದ್ದೇಬಿಹಾಳ ತಾಲೂಕಿನ ಸಿದ್ದಾಪುರ ಪಿ.ಟಿ. ಗ್ರಾಮದ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರು ತಮಗಿನ್ನೂ ಸೂಕ್ತ ಪರಿಹಾರ ಬಾರದ ಹಿನ್ನೆಲೆ ಕಾಲುವೆಯಲ್ಲಿ ಎಂಟು ಕಡೆ ಮಣ್ಣು ಸುರಿದು ನೀರಿನ ಹರಿವನ್ನು ತಡೆದು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.
2009-10ರಲ್ಲಿ ಕಾಲುವೆ ನಿರ್ಮಾಣಕ್ಕಾಗಿ ರೈತರ ಜಮೀನು ಸ್ವಾಧೀನಪಡಿಸಿಕೊಳ್ಳಲಾಯಿತು. ಯೋಜನೆ ಪೂರ್ಣಗೊಂಡು ವರ್ಷಗಳೇ ಕಳೆದರೂ ಪರಿಹಾರ ಮಾತ್ರ ಕಡತಗಳಲ್ಲೇ ಉಳಿದಿದೆ. ಕಳೆದ 17 ವರ್ಷಗಳಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದು, ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನಕ್ಕೆ ಬಂದಿಲ್ಲದಿರುವುದರಿಂದ ರೈತರು ಕಾಲುವೆಗೆ ಮಣ್ಣು ಸುರಿದು ಪ್ರತಿಭಟಿಸಿದ್ದಾರೆ. ಇದರಿಂದಾಗಿ ಬಸರಕೋಡ, ಆರೇಶಂಕರ ಹಾಗೂ ಕಿರಿಶ್ಯಾಳ ಕೆರೆಗಳಿಗೆ ನೀರು ಹರಿಯದೇ ಆ ಭಾಗದ ರೈತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಭಾಗದ ರೈತರು 2023ರಲ್ಲಿ ತೀವ್ರ ಪ್ರತಿಭಟನೆ ನಡೆಸಿದಾಗ ಆರು ತಿಂಗಳಲ್ಲಿ ಪರಿಹಾರ ನೀಡುವುದಾಗಿ ಅಧಿಕಾರಿಗಳು ಲಿಖಿತ ಭರವಸೆ ನೀಡಿದ್ದರು. 2026ರ ಜನವರಿಯಲ್ಲೂ ಗ್ರಾಮಸಭೆ ನಡೆಸಿ ಒಂದು ತಿಂಗಳಲ್ಲಿ ಪರಿಹಾರ ನೀಡುವುದಾಗಿ ಹೇಳಲಾಗಿತ್ತು. ಆದರೆ ಈವರೆಗೆ ಯಾವುದೇ ಭರವಸೆಯೂ ಈಡೇರಿಲ್ಲ ಎಂಬುದು ರೈತರ ಆರೋಪ.
ಆದ್ದರಿಂದ ಸರ್ಕಾರ ಮತ್ತು ಕೆಬಿಜೆಎನ್‌ಎಲ್ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ, ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಸಮ್ಮತ ಪರಿಹಾರ ನೀಡುವ ಮೂಲಕ ಕಾಲುವೆ ತೆರವುಗೊಳಿಸಿ ಕೆರೆಗಳಿಗೆ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕಾಗಿದೆ.
ಹಣಮಂತ ಸೋಮನಾಳ, ತಮ್ಮಣ್ಣ ಬೈಲಗೊಂಡ, ವಿಜಯಕುಮಾರ ಡೊಮನಾಳ, ಶಾಂತಪ್ಪ ಬ್ಯಾಕೋಡ, ಸಿದ್ದಪ್ಪ ಗೋಡೆಕಾರ, ಮುತ್ತಪ್ಪ ಮಾದಿನಾಳ, ಗುರುಸಿದ್ದಪ್ಪ ರಾಯಗೊಂಡ, ಶಿವಾನಂದ ಬಾಗೇವಾಡಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
"

ಭೂಮಿ ಕಳೆದುಕೊಂಡ ರೈತರ ಪಟ್ಟಿ

ಲಕ್ಕವ್ವ ಹಾಲ್ಯಾಳ, ಹಣಮಂತ ಸೋಮನಾಳ, ತಮ್ಮಣ್ಣ ಬೈಲಗೊಂಡ, ಬಸವರಾಜ ಬೈಲಗೊಂಡ, ರೇಣುಕಾ ಸೋಮನಾಳ, ಶಾಂತಗೌಡ ಬಿರಾದಾರ, ವಿಜಯಕುಮಾರ ಡೊಮನಾಳ, ಶಾಂತಪ್ಪ ಬ್ಯಾಕೋಡ, ಬಸವ್ವ ಬ್ಯಾಕೋಡ, ವಿಠ್ಠಲ ಬ್ಯಾಕೋಡ, ಸಿದ್ದಪ್ಪ ಗೋಡೆಕಾರ, ಮುತ್ತಪ್ಪ ಮಾದಿನಾಳ, ಗುರುಸಿದ್ದಪ್ಪ ರಾಯಗೊಂಡ, ಶಿವಾನಂದ ಬಾಗೇವಾಡಿ.

ಸಿದ್ದಾಪುರ ಪಿ.ಟಿ. ಗ್ರಾಮದ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆ ನಿರ್ಮಾಣಕ್ಕೆ ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಲು ಈಗಾಗಲೇ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ಎರಡು ತಿಂಗಳೊಳಗೆ ಪರಿಹಾರ ಹಣ ಕಲ್ಪಿಸಲಾಗುವುದು. ಬೇರೆ ಗ್ರಾಮಗಳ ರೈತರ ಹಿತದೃಷ್ಟಿಯಿಂದ ಕಾಲುವೆಗೆ ತಡೆಯೊಡ್ಡುವುದು ಸರಿಯಲ್ಲ.

ಡಿ. ಬಸವರಾಜು ಮುಖ್ಯ ಅಭಿಯಂತರ, ಆಲಮಟ್ಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net