ಸರಗೂರು: ಅಂಗವಿಕಲ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ ಅವರ ದೌರ್ಬಲ್ಯಗಳ ಹೊರತಾಗಿಯೂ ಅದಮ್ಯ ಶಕ್ತಿ ಅವರಲ್ಲಿದೆ ಎಂಬುದನ್ನು ನಿರೂಪಿಸಲು ಸಾಧ್ಯ ಎಂದು ಹಂಚೀಪುರ ಮಠದ ಶ್ರೀ ತೋಂಟದಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಅಖಿಲ ನಾಮಧಾರಿಗೌಡ ಸಮುದಾಯ ಭವನದಲ್ಲಿ ಮಂಗಳವಾರ ಶ್ರೀ ಚಿಕ್ಕ ದೇವಮ್ಮ ವಿಶೇಷಚೇತನರ ಕ್ಷೇಮಾಭಿವೃದ್ಧಿ ಒಕ್ಕೂಟ ಹಾಗೂ ಜೀವನಜ್ಯೋತಿ ವಿಶೇಷಚೇತನ ಕ್ಷೇಮಾಭಿವೃದ್ಧಿ ಒಕ್ಕೂಟ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಶಾಲಾ ಶಿಕ್ಷಣ ಇಲಾಖೆ, ಅಖಿಲಭಾರತ ನಾಮಧಾರಿಗೌಡರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಶೇಷಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಗವಿಕಲರ ಏಳಿಗೆಗೆ ಕುಟುಂಬದ ಸದಸ್ಯರು ಮಾತ್ರವಲ್ಲದೆ ಪ್ರತಿಯೊಬ್ಬ ನಾಗರಿಕರು ಕೈಜೋಡಿಸಬೇಕು. ಅಂಗವಿಕಲರಿಗಾಗಿ ಕಾನೂನಿನಡಿಯಲ್ಲಿ ಅನೇಕ ಹಕ್ಕುಗಳಿದ್ದು, ಅವರ ಶ್ರೇಯಸ್ಸು ಹಾಗೂ ಮಾನವ ಹಕ್ಕುಗಳಿಗೆ ಚ್ಯುತಿ ತರದಂತೆ ಅವರ ಅಭಿವೃದ್ಧಿಯಲ್ಲಿ ಸಹಕಾರ ನೀಡಬೇಕು ಎಂದರು.
ತಹಸೀಲ್ದಾರ್ ಮೋಹನಕುಮಾರಿ ಮಾತನಾಡಿ, ಅಂಗವಿಕಲರು ಸಮಾಜದಲ್ಲಿ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿ ಆತ್ಮವಿಶ್ವಾಸದಿಂದ ಜೀವನ ನಡೆಸುವಂತೆ ಅವಕಾಶ ಕಲ್ಪಿಸುವುದು ಸಮಾಜ ಹಾಗೂ ಸರ್ಕಾರದ ಜವಾಬ್ದಾರಿ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾರ್ಯಪ್ರವೃತ್ತರಾಗಬೇಕು ಎಂದರು.
ಅಂಗವಿಕಲ ಮಕ್ಕಳ ಸಬಲೀಕರಣಕ್ಕಾಗಿ ಅನೇಕ ಶಾಲಾ- ಕಾಲೇಜು ಹಾಗೂ ಸಂಘ-ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಕಾಲದಲ್ಲಿ ವಿಕಲಚೇತನರಿಗೆ ವಿದ್ಯಾಭ್ಯಾಸದ ಅವಕಾಶಗಳ ಜತೆಗೆ ಕೌಶಲಾಭಿವೃದ್ಧಿಗಳ ಕಲಿಕೆಯು ಅವರ ಬದುಕಿನಲ್ಲಿ ಸಾಧನೆ ಮಾಡುವಂತಹ ಭರವಸೆ ಮೂಡಿಸುತ್ತಿದೆ ಎಂದು ಹೇಳಿದರು.
ಉದ್ಯಮಿ ಕೆ.ಶ್ರೀನಿವಾಸ ಕುಮಾರ್ ಮಾತನಾಡಿ, ಅಂಗವಿಕಲರ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಅವುಗಳ ಬಗೆಗಿನ ಮಾಹಿತಿಯನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ತಿಳಿಸಿದರು.
ವಿವೇಕಾನಂದ ಸ್ಮಾರಕ ಆಸ್ಪತ್ರೆ ಮೂಳೆ ಮತ್ತು ಕೀಲು ವೈದ್ಯ ಡಾ.ಎಂ.ಆರ್.ಸೀತಾರಾಮ್ ಮಾತನಾಡಿ, ಸ್ಥಳೀಯ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಅನುಕೂಲವಾಗುವಂತೆ ವೈದ್ಯಕೀಯ ವೆಚ್ಚ, ವಿದ್ಯಾರ್ಥಿವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಎಲ್ಲ ತಾಲೂಕುಗಳ ವಿಶೇಷ ಮಕ್ಕಳಿಗೆ ಆಯೋಜಿಸಲಾಗಿದ್ದ ವಿವಿಧ ಕ್ರೀಡಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿಶೇಷ ಶಾಲಾ ಮಕ್ಕಳು ಸಿದ್ಧಪಡಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.
ಸಂಘದ ಅಧ್ಯಕ್ಷ ಚಾಮನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಒ ಪ್ರೇಮ್ ಕುಮಾರ್, ಅಡಳಿತ ಆರೋಗ್ಯಾಧಿಕಾರಿ ಡಾ.ಪಾರ್ಥಸಾರಥಿ, ಪಪಂ ಇಒ ಎಸ್.ಕೆ.ಸಂತೋಷ ಕುಮಾರ್, ಅಧ್ಯಕ್ಷೆ ಚೈತ್ರಾ ಸ್ವಾಮಿ, ಉಪಾಧ್ಯಕ್ಷ ಶಿವಕುಮಾರ್, ವರ್ತಕ ಮಂಡಳಿ ಅಧ್ಯಕ್ಷ ಎಸ್.ಪಿ.ಪ್ರಸಾದ್, ಲಯನ್ಸ್ ಕ್ಲಬ್ ಅಧ್ಯಕ್ಷ ಕಬಿನಿ ಭಾಸ್ಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ಬಿ.ನಾಗರಾಜು, ವಿಕಲಚೇತನರ ಸಂಯೋಜಕರಾದ ಎಸ್.ಎಸ್.ಮಹಾದೇವಯ್ಯ, ಜವರಾಜು, ಜೀವನ್ ಜ್ಯೋತಿ ವಿಶೇಷಚೇತನರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ. ಎನ್. ನಾಗರಾಜು, ರಮೇಶ್, ಪುಟ್ಟ, ನಾಗೇಂದ್ರಯ್ಯ ಇತರರು ಇದ್ದರು.