ಜಿಲ್ಲೆಯಲ್ಲಿ ದತ್ತು ಸ್ವೀಕಾರಕ್ಕೆ ಡಿಮಾಂಡ್

adoption
adoption
Published on
ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಆಧುನಿಕ ಜೀವನ ಶೈಲಿ, ಯಾಂತ್ರಿಕ ಬದುಕು, ಆರೋಗ್ಯ ಸಮಸ್ಯೆ, ಮಕ್ಕಳೇ ಆಗದಿರುವ ಪರಿಸ್ಥಿತಿ ಮತ್ತಿತರ ಕಾರಣಗಳಿಂದ ದತ್ತು ಮಕ್ಕಳನ್ನು ಪಡೆಯಲು ಹಂಬಲಿಸುವವರ ಸಂಖ್ಯೆ ಹೆಚ್ಚುತ್ತಿದೆ. ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ 3 ವರ್ಷದ ಅವಧಿಯಲ್ಲಿ 19 ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಪಾಲಕರ ಮಡಿಲಿಗೆ ಹಾಕಿದೆ. ಮಕ್ಕಳಿಗಾಗಿ ಈಗಾಗಲೆ ಹಲವು ಪಾಲಕರು ಸರದಿ ಸಾಲಿನಲ್ಲಿ ನಿಂತಿರುವುದು ದತ್ತು ಮಕ್ಕಳಿಗೆ ಎಷ್ಟು ಬೇಡಿಕೆ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಪಾಲಕರಿಂದ ಪರಿತ್ಯಕ್ತ ಮಕ್ಕಳು:
ಮಕ್ಕಳಿಗೆ ಪಾಲಕರ ಆಸರೆ, ಪಾಲಕರಿಗೆ ಮಕ್ಕಳ ಆಸರೆ.. ಇದು ದತ್ತು ಸ್ವೀಕಾರ ಪ್ರಕ್ರಿಯೆಯ ಒನ್‌ಲೈನ್ ಸ್ಲೋಗನ್ ಆಗಿದೆ. ಪಾಲಕರಿಂದ ಪರಿತ್ಯಕ್ತ ಮಕ್ಕಳ ಲಾಲನೆ ಪಾಲನೆ ಮಾಡುವ ದತ್ತು ಸ್ವೀಕಾರ ಕೇಂದ್ರಗಳು ಸೂಕ್ತ ಪಾಲಕರ ಮಡಿಲಿಗೆ ತಲುಪಿಸುವಲ್ಲಿ ಸಾಕಷ್ಟು ಶ್ರಮವಹಿಸುತ್ತಿದೆ. 2023ರಲ್ಲಿ 8 ಮಕ್ಕಳು, 2024ರಲ್ಲಿ 7 ಮಕ್ಕಳು ಹಾಗೂ 2025ರಲ್ಲಿ 4 ಮಕ್ಕಳು ದತ್ತು ಸ್ವೀಕಾರ ಪ್ರಕ್ರಿಯೆಯಡಿ ಪಾಲಕರ ಮಡಿಲು ಸೇರಿವೆ.
ರಕ್ಷಣಾ ಘಟಕದಿಂದ ಮಾಸಾಚರಣೆ:
ಪ್ರಸ್ತುತ ಜಿಲ್ಲೆಯಲ್ಲಿ 2 ದತ್ತು ಸ್ವೀಕಾರ ಕೇಂದ್ರಗಳಿವೆ, ದೇವನಹಳ್ಳಿಯಲ್ಲಿ ಸರ್ಕಾರಿ ದತ್ತು ಸ್ವೀಕಾರ ಕೇಂದ್ರ ಹಾಗೂ ನೆಲಮಂಗಲದಲ್ಲಿ ಅರೆ ಸರ್ಕಾರಿ ದತ್ತು ಸ್ವೀಕಾರ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ಪ್ರಸ್ತುತ 9 ಮಕ್ಕಳು ಕೇಂದ್ರದ ಪಾಲನೆಯಲ್ಲಿವೆ. ಇಷ್ಟು ಮಕ್ಕಳಿಗೂ ಪಾಲಕರ ಆಸರೆ ಒದಗಿಸುವುದು ಘಟಕದ ಸಿಬ್ಬಂದಿ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಅಭಿಯಾನ ಆರಂಭಿಸಿದೆ.
ದತ್ತು ಸ್ವೀಕಾರ ಮಾಸಾಚರಣೆ:
ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಜಿಲ್ಲೆಯ ಪ್ರಮುಖ ಸ್ಥಳಗಳಲ್ಲಿ ದತ್ತು ಸ್ವೀಕಾರ ಮಾಸಾಚರಣೆ ಆಯೋಜಿಸಿದ್ದು, ದತ್ತು ಸ್ವೀಕೃತಿ ನಿಯಮಗಳು ಮತ್ತಿತರ ವಿಷಯಗಳ ಕುರಿತು ಸಾರ್ವಜನಿಕವಾಗಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ಧಾರ್ಮಿಕ ಕ್ಷೇತ್ರಗಳು, ಪ್ರವಾಸಿ ತಾಣಗಳಲ್ಲಿ ಅಭಿಯಾನಕ್ಕೆ ಮುಂದಾಗಿದೆ.
ಪಾಲಕರಿಂದ ಪರಿತ್ಯಕ್ತ ಮಕ್ಕಳು ಸಾಮಾನ್ಯವಾಗಿ ದತ್ತು ಸ್ವೀಕಾರಕ್ಕೆ ಅರ್ಹವಾಗಿದ್ದು, ಯಾವುದೇ ಮಗು ಘಟಕದ ಸುಪರ್ಧಿಗೆ ಬಂದರೆ ಮೊದಲಿಗೆ ಆ ಮಗುವಿನ ಪಾಲಕರ ಹುಡುಕಾಟ ನಡೆಯುತ್ತದೆ. ಪಾಲಕರು ಪತ್ತೆಯಾಗದ ಪಕ್ಷದಲ್ಲಿ ಅಂಥ ಮಕ್ಕಳಿಗೆ ಕೇಂದ್ರದಲ್ಲೇ ಆಸರೆ ನೀಡಿ ಬಳಿಕ ದತ್ತು ಸ್ವೀಕರಿಸುವವರಿಗೆ ನೀಡಲಾಗುತ್ತದೆ ಕೆಲವು ವೇಳೆ ಕೆಲವು ಪಾಲಕರೇ ಕೇಂದ್ರಕ್ಕೆ ಮಕ್ಕಳನ್ನು ಬಿಟ್ಟುಬಿಡುತ್ತಾರೆ ಅಂಥ ಮಕ್ಕಳೂ ದತ್ತು ಸ್ವೀಕಾರಕ್ಕೆ ಅರ್ಹವಾಗಿರುತ್ತವೆ ಇಂಥ ಮಕ್ಕಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರದಿಂದಲೇ ನಾಮಕರಣ:
ಇತ್ತೀಚಿಗೆ ಜಿಲ್ಲೆಯ ಮಕ್ಕಳ ರಕ್ಷಣಾ ಘಟಕದಿಂದ ಆರೇಳು ತಿಂಗಳ ಎರಡು ಮಕ್ಕಳು ಪಾಲಕರ ಮಡಿಲು ಸೇರಿವೆ ಇದಕ್ಕೂ ಮೊದಲು ಘಟಕದ ಸಿಬ್ಬಂದಿಯೇ ಈ ಮಕ್ಕಳಿಗೆ ನಾಮಕರಣ ಮಾಡಿದ್ದರು. ಮಕ್ಕಳನ್ನು ಪಡೆದು ಪಾಲಕರು ಅದೇ ಹೆಸರಿನಿಂದ ಮಕ್ಕಳನ್ನು ಸ್ವೀಕರಿಸಿ ಅದೇ ಹೆಸರನ್ನೇ ಮುಂದುವರೆಸುವುದಾಗಿ ಹೇಳಿ ಕರೆದೊಯ್ದಿದ್ದರು. ಈ ಸನ್ನಿವೇಶ ಬಹಳ ಭಾವುಕವಾಗಿತ್ತು ಎಂದು ಘಟಕ ಸಿಬ್ಬಂದಿ ನೆನಪು ಮಾಡಿಕೊಳ್ಳುತ್ತಾರೆ.
ದತ್ತು ಎಂದರೇನು?
ಪಾಲರಿಗೆ ಬೇಡವಾದ 0ರಿಂದ 18 ವರ್ಷದ ಮಗುವನ್ನು ಕಾನೂನು ಬದ್ಧವಾಗಿ ಸ್ವಂತ ತಂದೆ ತಾಯಿಯಂತೆಯೇ ಪ್ರೀತಿ ಮಮತೆಯಿಂದ ನೋಡಿಕೊಳ್ಳುವ ಕುಟುಂಬವನ್ನು ಗುರುತಿಸಿ ಸ್ವಂತ ಮನೆಯಲ್ಲಿ ಬೆಳೆಸುವ ಪರಿಕಲ್ಪನೆಯೇ ದತ್ತು.
ದತ್ತು ಯಾರು ಪಡೆಯಬಹುದು?
ಮಗುವನ್ನು ಕುಟುಂಬದಲ್ಲಿ ಬೆಳೆಸಲು ಆಸಕ್ತಿ ಇರುವ ದಂಪತಿ, ಮಗುವಿನ ಅವಶ್ಯಕತೆ ಪೂರೈಸುವ ಆದಾಯ ಇರುವುದು, ಸುಧೀರ್ಘ ಕಾಯಿಲೆಗಳಿಂದ ಬಳಲುತ್ತಿರಬಾರದು, ಯಾವುದೇ ಅಪರಾಧ ಹಿನ್ನೆಲೆ ಇರಬಾರದು. ದತ್ತು ಸ್ವೀಕಾರ ಕೇಂದ್ರಗಳಲ್ಲಿ ಪಡೆಯಬಹುದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವೆಬ್‌ಸೈಟ್‌ನಲ್ಲಿ ಇದರ ಸಂಪೂರ್ಣ ಮಾಹಿತಿ ದೊರೆಯಲಿದೆ.
ಮಕ್ಕಳಿಗೆ ಪಾಲಕರ ಆಸರೆ ಒದಗಿಸುವುದು ಪಾಲಕರಿಗೆ ಮಕ್ಕಳ ಆಸರೆ ದೊರಕಿಸಿಕೊಡುವುದು ದತ್ತು ಸ್ವೀಕಾರ ಪ್ರಕ್ರಿಯೆಯ ಪ್ರಮುಖ ಆಶಯವಾಗಿದೆ. ದತ್ತು ಮಕ್ಕಳನ್ನು ಪಡೆಯಲು ಹಂಬಲಿಸುವವರಿಗೆ ದತ್ತು ಸ್ವೀಕಾರದ ಪ್ರಕ್ರಿಯೆ ಏನು? ಯಾವ್ಯಾವ ನಿಯಮಗಳನ್ನು ಅನುಸರಿಸಬೇಕು, ಎಲ್ಲಿ ಯಾವ ರೀತಿ ಸಂಪರ್ಕಿಸಬೇಕು ಮತ್ತಿತರ ಮಾಹಿತಿ ಬಗ್ಗೆ ಪ್ರಚಾರ ಮಾಡುವ ನಿಟ್ಟಿನಲ್ಲಿ ದತ್ತು ಸ್ವೀಕಾರ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ.
ಅನಿತಾಲಕ್ಷ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂ.ಗ್ರಾಮಾಂತರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net