ಬಸವೇಶ್ವರರ ಆದರ್ಶಗಳನ್ನು ಅಳವಡಿಸಿಕೊಳ್ಳಿ

ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬೆಳ್ಳಿ ರಥದಲ್ಲಿ ಬಸವೇಶ್ವರರ ಪ್ರತಿಮೆ ಮೆರವಣಿಗೆಗೆ ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ರಾಜಶೇಖರ ಸ್ವಾಮೀಜಿ, ಗುರುಸ್ವಾಮಿ ಸ್ವಾಮೀಜಿ, ಶಿವಕುಮಾರಸ್ವಾಮಿಗಳು, ಸಿ.ಎಂ.ಪ್ರಕಾಶ್, ತೊಂಟೇಶ್ ಇತರರಿದ್ದರು.
ತಿ.ನರಸೀಪುರ ತಾಲೂಕಿನ ವಾಟಾಳು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬೆಳ್ಳಿ ರಥದಲ್ಲಿ ಬಸವೇಶ್ವರರ ಪ್ರತಿಮೆ ಮೆರವಣಿಗೆಗೆ ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಚಾಲನೆ ನೀಡಿದರು. ರಾಜಶೇಖರ ಸ್ವಾಮೀಜಿ, ಗುರುಸ್ವಾಮಿ ಸ್ವಾಮೀಜಿ, ಶಿವಕುಮಾರಸ್ವಾಮಿಗಳು, ಸಿ.ಎಂ.ಪ್ರಕಾಶ್, ತೊಂಟೇಶ್ ಇತರರಿದ್ದರು.
Published on
ತಿ.ನರಸೀಪುರ: ವಿಶ್ವಗುರು ಬಸವಣ್ಣನವರ ಜಯಂತಿಯನ್ನು ಆಚರಿಸುವುದು ಮುಖ್ಯವಲ್ಲ, ಅವರ ತತ್ವಸಿದ್ಧಾಂತಗಳನ್ನು ನಿತ್ಯ ಜೀವನದಲ್ಲಿ ಆಚರಣೆಗೆ ತರುವುದು ಮುಖ್ಯ ಎಂದು ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ವಾಟಾಳು ಗ್ರಾಮದಲ್ಲಿರುವ ಮಠದ ಆವರಣದಲ್ಲಿ ಭಾನುವಾರ ಬಸವ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸವಣ್ಣನವರ ಪ್ರತಿಮೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಸವಣ್ಣನವರು ಕಾಯಕವೇ ಕೈಲಾಸ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಸಮಾಜಕ್ಕೆ ನೀಡಿದ್ದು, ಪ್ರತಿಯೊಬ್ಬರೂ ಆ ಆದರ್ಶಗಳನ್ನು ಅಳವಡಿಸಿಕೊಂಡು ಬದುಕಬೇಕು, ಬಸವಣ್ಣನವರ ವಚನಗಳು ಸಮಾಜದ ಅಂಧಶ್ರದ್ಧೆ, ಅಸಮಾನತೆ ಮತ್ತು ಜಾತಿ ಭೇದವನ್ನು ನಿವಾರಿಸುವ ಶಕ್ತಿಯನ್ನು ಹೊಂದಿವೆ. ಕೇವಲ ಜಯಂತಿ, ಮೆರವಣಿಗೆ ಹಾಗೂ ಕಾರ್ಯಕ್ರಮಗಳಿಗೆ ಸೀಮಿತವಾಗದೆ, ಅವರ ಚಿಂತನೆಗಳನ್ನು ಮನೆಮನೆಗೂ ತಲುಪಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಯುವ ಜನತೆ ಬಸವ ತತ್ವಗಳನ್ನು ಜೀವನದ ಮಾರ್ಗದರ್ಶಿಯಾಗಿ ಸ್ವೀಕರಿಸಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಸತ್ಯ, ಶ್ರಮ, ಪ್ರಾಮಾಣಿಕತೆ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವುದೇ ಬಸವಣ್ಣನವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಅಭಿಪ್ರಾಯಪಟ್ಟರು.
ಜಾತಿ, ಧರ್ಮ, ವರ್ಣಭೇದವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವ ಬಸವಣ್ಣನವರ ಸಂದೇಶ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಯುವ ಪೀಳಿಗೆ ಬಸವಣ್ಣನವರ ಆದರ್ಶಗಳನ್ನು ಅಳವಡಿಸಿಕೊಂಡು ಸತ್ಯ, ನ್ಯಾಯ ಮತ್ತು ಮಾನವೀಯತೆಯ ದಾರಿಯಲ್ಲಿ ಸಾಗಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮಸಮಾಜ ನಿರ್ಮಾಣಕ್ಕೆ ಬಸವ ತತ್ವಗಳು ದಾರಿದೀಪವಾಗಿವೆ ಎಂದು ಸ್ವಾಮೀಜಿ ತಿಳಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಬಸವಣ್ಣನವರ ಜಯಂತಿ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಮೈಸೂರಿನ ಕಾರ್ಯಕ್ರಮವೊಂದಕ್ಕೆ ಹೋಗಿದ್ದ ಸಂದರ್ಭದಲ್ಲಿ ಬಸವಣ್ಣನವರ 300 ವಚನಗಳನ್ನು ಚಿತ್ರದ ಮೂಲಕ ಬಿಡಿಸಲಾಗಿತ್ತು. ಅದೇ ರೀತಿಯಲ್ಲಿ ಗ್ರಾಮ ಮಟ್ಟದಲ್ಲೂ ವಚನಗಳನ್ನು ಚಿತ್ರಪಟದ ಮೂಲಕ ಬಿಡಿಸಲು ತಿಳಿಸಲಾಗಿದ್ದು, ಶೀಘ್ರದಲ್ಲೇ ಗ್ರಾಮ ಮಟ್ಟದಲ್ಲೂ ಈ ಕೆಲಸ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು.
ಆನಂತರ ಬೆಳ್ಳಿ ರಥದಲ್ಲಿ ವಿಶ್ವಗುರು ಬಸವೇಶ್ವರರ ಭವ್ಯ ಪ್ರತಿಮೆಯನ್ನು ಗ್ರಾಮದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ವಿವಿಧ ಕಲಾತಂಡಗಳು, ಡೊಳ್ಳು ಕುಣಿತ ಹಾಗೂ ಭಕ್ತರ ಜಯಘೋಷಗಳ ನಡುವೆ ನಡೆದ ಮೆರವಣಿಗೆ ಗಮನ ಸೆಳೆಯಿತು. ಬಸವ ಜಯಂತಿ ಹಿನ್ನೆಲೆಯಲ್ಲಿ ಇಡೀ ಗ್ರಾಮವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮರವಣಿಗೆ ಹೊರಡುವ ಬೀದಿಯ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿಗಳನ್ನು ಬಿಡಿಸಲಾಗಿತ್ತು.ವಕಾರ್ಯಕ್ರಮ ಆಯೋಜಿಸಿದ್ದ ಬಸವ ಬಳಗದ ಯುವಕರು ಮೆರವಣಿಗೆಯುದ್ದಕ್ಕೂ ನೃತ್ಯ ಪ್ರದರ್ಶನ ಮಾಡುವ ಮೂಲಕ ಸಂಭ್ರಮಿಸಿದರು.ಮಠದಲ್ಲಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ವೇಳೆ ಹೊಸೂರು ಹುಂಡಿ ಗುರುಮಲ್ಲೇಶ್ವರ ದಾಸೋಹ ಮಠದ ರಾಜಶೇಖರ ಸ್ವಾಮಿಗಳು, ಬಿಲಿಗೆರೆಹುಂಡಿ ಭಿಕ್ಷದ ಮಠದ ಗುರುಸ್ವಾಮಿ, ನರಗ್ಯಾತನಹಳ್ಳಿಯ ಶಿವಕುಮಾರಸ್ವಾಮಿಗಳು, ವಾಟಾಳು ಮಠದ ಕಿರಿಯ ಕಿರಿಯ ಶ್ರೀಗಳು, ಊರಿನ ಗೌಡರು, ಬಸವ ಬಳಗದ ಯುವಕರು, ಯಜಮಾನರು, ಮುಖಂಡರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net