_1765251338218.webp?w=480&auto=format%2Ccompress&fit=max)
_1765251338218.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳಾದ ಎ2 ದರ್ಶನ್, ಎ1 ಪವಿತ್ರಾ ಗೌಡ ಸೇರಿ ಇನ್ನುಳಿದವರು ಸದ್ಯ ಜೈಲುವಾಸ ಅನುಭವಿಸುತ್ತಿದ್ದಾರೆ. ಈ ಮಧ್ಯೆ, ದರ್ಶನ್ ಜೈಲಿನಲ್ಲಿ ಸಹ ಕೈದಿಗಳೊಂದಿಗೆ ಕಿತ್ತಾಡಿಕೊಂಡಿದ್ದಾರೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ದರ್ಶನ್ ಸಹ ಕೈದಿಗಳೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ದರ್ಶನ್ ಜತೆ ಒಂದೇ ಸೆಲ್ನಲ್ಲಿ ಅನುಕುಮಾರ್, ಜಗದೀಶ್ (ಜಗ್ಗ), ನಾಗರಾಜ್, ಪ್ರದೋಶ್ ಹಾಗೂ ಲಕ್ಷ್ಮಣ್ ಇದ್ದಾರೆ. ನಾಗರಾಜ್ನನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ.
ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕೆಲವರು ದರ್ಶನ್ ಮೇಲಿನ ಅಭಿಮಾನಕ್ಕಾಗಿ ಬಂದು ಪ್ರಕರಣದಲ್ಲಿ ಸಿಲುಕಿಕೊಂಡಿದ್ದೇವೆ ಎಂದು ಆರೋಪಿಸಿದ್ದರು. ಈ ಸಂಬಂಧ ನ್ಯಾಯಾಲಯದ ಖರ್ಚು ವೆಚ್ಚದ ಬಗ್ಗೆ ಅಂದಿನಿಂದ ಮುಸುಕಿನ ಗುದ್ದಾಟ ನಡೆಯುತ್ತಿತ್ತು. ಅದು ಈಗ ಬಹಿರಂಗವಾಗುತ್ತಿದೆ ಎನ್ನಲಾಗಿದೆ.
ಕೊಲೆ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ, ಸಾಕ್ಷಿಗಳ ಹೇಳಿಕೆ ಸೇರಿ ಇತರೆ ಪ್ರಕ್ರಿಯೆ ಆರಂಭಗೊಂಡಿದೆ. ಇದಕ್ಕೆ ವಕೀಲರ ನೇಮಕ ಮಾಡುವ ವಿಚಾರಕ್ಕೆ ಅನುಕುಮಾರ್, ಜಗದೀಶ್, ಪ್ರದೋಶ್ ಹಾಗೂ ಲಕ್ಷ್ಮಣ್ ದರ್ಶನ್ಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಬ್ಯಾರಕ್ ಒಳಗೆ ನಡೆದ ಮಾತಿನ ಚಕಮಕಿ ಗಲಾಟೆ ರೂಪ ಪಡೆದುಕೊಂಡಿದೆ.
ಜಗಳ ಜೋರಾಗುತ್ತಿದ್ದಂತೆ ಜೈಲು ಸಿಬ್ಬಂದಿ ಬ್ಯಾರಕ್ಗೆ ಬಂದು ಜಗಳ ಬಿಡಿಸಿದ್ದಾರೆ. ಮಲಗಿರುವ ವೇಳೆ ಕಾಲಿನಿಂದ ಒದ್ದು ಎಬ್ಬಿಸುತ್ತಾರೆ ಎಂದು ಸಹ ಕೈದಿಗಳು ಆರೋಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಐಪಿಎಸ್ ಅಧಿಕಾರಿ ಅಂಶುಕುಮಾರ್ ಈ ಬಗ್ಗೆ ಯಾವುದೇ ಗಲಾಟೆ ನಡೆದಿಲ್ಲ ಎಂದು ಹೇಳಿದ್ದಾರೆ. ಆದರೂ ದರ್ಶನ್ ಇರುವ ಬ್ಯಾರಕ್ ಮೇಲೆ ಜೈಲು ಅಧೀಕ್ಷಕರು ಇನ್ನಷ್ಟು ನಿಗಾ ಇರಿಸಿದ್ದಾರೆ ಎನ್ನಲಾಗಿದೆ.