ತಿರುಮಲದಲ್ಲಿ ಜಾಗದ ಗುತ್ತಿಗೆ ಅವಧಿ ವಿಸ್ತರಣೆಗೆ ಕ್ರಮ

ವಿಜಯವಾಡ ರಾಜ್ಯಪಾಲರ ಕಚೇರಿಯಲ್ಲಿ ಸಭೆ ಕರ್ನಾಟಕ ಮತ್ತು ಆಂಧ್ರದ ಸಚಿವರ ಸಭೆ
ವಿಜಯವಾಡ ರಾಜ್ಯಪಾಲರ ಕಚೇರಿಯಲ್ಲಿ ಸಭೆ ಕರ್ನಾಟಕ ಮತ್ತು ಆಂಧ್ರದ ಸಚಿವರ ಸಭೆ
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಶೈಲಂನಲ್ಲಿ 5 ಎಕರೆ ಭೂಮಿ
  • ತಿರುಮಲದಲ್ಲಿ ಜಾಗದ ಗುತ್ತಿಗೆ ಅವಧಿ ವಿಸ್ತರಣೆ
  • ವಿಜಯವಾಡ ರಾಜ್ಯಪಾಲರ ಕಚೇರಿಯಲ್ಲಿ ಸಭೆ
ಬೆಂಗಳೂರು: ತಿರುಮಲದಲ್ಲಿ ಕರ್ನಾಟಕಕ್ಕೆ 30 ವರ್ಷಗಳಿಗೆ ನೀಡಿರುವ ಏಳು ಎಕರೆ ಜಾಗದ ಗುತ್ತಿಗೆ ಅವಧಿಯನ್ನು 99 ವರ್ಷದವರೆಗೆ ವಿಸ್ತರಿಸುವುದು, ಆಂಧ್ರದ ಶ್ರೀಶೈಲಂ ದೇವಸ್ಥಾನದಲ್ಲಿ ಕರ್ನಾಟಕದ ಕಾರ್ಯ ಯೋಜನೆಗಳಿಗೆ 5 ಎಕರೆ ಭೂಮಿ ನೀಡುವುದು ಸೇರಿ ಆಂಧ್ರ ಮುಜರಾಯಿ ಇಲಾಖೆಯು ಕರ್ನಾಟಕಕ್ಕೆ ಹಲವು ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಿದೆ.
ವಿಜಯವಾಡ ರಾಜ್ಯಪಾಲರ ಕಚೇರಿಯಲ್ಲಿ ಶನಿವಾರ ಕರ್ನಾಟಕ, ಆಂಧ್ರಪ್ರದೇಶ ಮುಜರಾಯಿ ಇಲಾಖೆಗಳ ಸಚಿವರ ಸಭೆಯಲ್ಲಿ ಹಲವು ಮಹತ್ವದ ಸಂಗತಿಗಳ ಕುರಿತು ಚರ್ಚಿಸಲಾಯಿತು.
ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆಯಿಂದ ಮನವಿ ಬಂದಲ್ಲಿ ವಿಶೇಷ ದರ್ಶನಕ್ಕೆ ಅವಕಾಶ ನೀಡುವುದು ಹಾಗೂ ಮಂತ್ರಾಲಯದಲ್ಲಿ ರಾಜ್ಯ ಸರ್ಕಾರ ಖರೀದಿಸಿರುವ 5 ಎಕರೆ ಜಾಗವನ್ನು ರಾಜ್ಯದ ಹೆಸರಿಗೆ ಹಸ್ತಾಂತರಿಸಲು ಶೀಘ್ರ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ನಡೆಸಲಾಯಿತು.
ತಿರುಪತಿ, ಶ್ರೀಶೈಲ ಸೇರಿ ಕರ್ನಾಟಕದಿಂದ ಆಂಧ್ರಕ್ಕೆ ಸಾಕಷ್ಟು ಭಕ್ತರು ಭೇಟಿ ನೀಡುತ್ತಾರೆ. ಹೀಗಾಗಿ ಮತ್ತಷ್ಟು ಸೇವೆಗಳನ್ನು ಕಲ್ಪಿಸಲು ಈ ಹಿಂದೆ ಆಂಧ್ರ ರಾಜ್ಯಪಾಲರು ಬೆಂಗಳೂರಿಗೆ ಆಗಮಿಸಿದ್ದಾಗ ಸಚಿವ ರಾಮಲಿಂಗಾರೆಡ್ಡಿ ಮನವಿ ಸಲ್ಲಿಸಿದ್ದರು.
ಆಂಧ್ರ ರಾಜ್ಯಪಾಲರಾದ ಸಯ್ಯದ್ ಅಬ್ದುಲ್ ನಜೀರ್, ಸಚಿವ ರಾಮಲಿಂಗಾರೆಡ್ಡಿ, ಸಣ್ಣ ನೀರಾವರಿ ಸಚಿವರಾದ ಬೋಸರಾಜು, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ, ರಾಜ್ಯ ಮುಜರಾಯಿ ಇಲಾಖೆ ಆಯುಕ್ತ ಶರತ್, ಆಂಧ್ರದ ಮುಜರಾಯಿ ಸಚಿವ ಆನಂ ರಾಮನಾರಾಯರೆಡ್ಡಿ, ಆಂಧ್ರ ಮುಜರಾಯಿ ಆಯುಕ್ತ ರಾಮಚಂದ್ರಮೋಹನ್ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿದ್ದರು.
ರಾಜ್ಯದ ಭಕ್ತರ ಅನುಕೂಲಕ್ಕಾಗಿ ಇದೇ ಮೊದಲ ಬಾರಿಗೆ ಆಂಧ್ರದೊಂದಿಗೆ ವಿಶೇಷ ಪ್ರಯತ್ನ ಮಾಡಲಾಗಿದೆ. ಶೀಘ್ರವೇ ಎಲ್ಲಾ ಕಾರ್ಯಕ್ರಮಗಳು ಜಾರಿಯಾಗುವ ಸಾಧ್ಯತೆಗಳ ಕುರಿತು ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net