ಕೊಳ್ಳೇಗಾಲ: ತಾಲೂಕಿನ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾಂಗಣ ಅಭಿವೃದ್ಧಿಗಾಗಿ ಚಾಮರಾಜನಗರ ಯುವಜನ ಸಬಲೀಕರಣ ಇಲಾಖೆ ವತಿಯಿಂದ ಸರ್ಕಾರ 3 ಕೋಟಿ ರೂ. ಕ್ರಿಯಾ ಯೋಜನೆ ಪಡೆದುಕೊಂಡಿದೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಶ್ರೀ ಮಹದೇಶ್ವರ ಕಾಲೇಜು ಆವರಣದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬ್ಯಾಸ್ಕೆಟ್ ಬಾಲ್ ಸಿಂಥೆಟಿಕ್ ಅಂಕಣ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೊಳ್ಳೇಗಾಲ ತಾಲೂಕು ಕ್ರೀಡಾಂಗಣದಲ್ಲಿ ನೂತನ ಸಿಂಥೆಟಿಕ್ ಬ್ಯಾಸ್ಕೆಟ್ ಬಾಲ್ ಅಂಕಣಕ್ಕೆ ಬಹಳ ಸಂತೋಷದಿಂದ ಚಾಲನೆ ನೀಡಿದ್ದೇನೆ. ಸಿಂಥೆಟಿಕ್ ಬ್ಯಾಸ್ಕೆಟ್ ಬಾಲ್ ಅಂಕಣ ನಿರ್ಮಾಣವಾಗಲು ಮುಖ್ಯ ಮಂತ್ರಿಗಳು, ಕ್ರೀಡಾ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯ ಹಾಗೂ ಒಲಂಪಿಕ್ ಸಂಸ್ಥೆ ಅಧ್ಯಕ್ಷರು ಸಹಕಾರಿಸಿದ್ದಾರೆ. ಗುಣಮಟ್ಟವಾದ ಸಿಂಥೆಟಿಕ್ ಅಂಕಣ ಕೊಳ್ಳೇಗಾಲ ತಾಲೂಕು ಕ್ರೀಡಾಂಗಣದಲ್ಲಿ ನಿರ್ಮಾಣವಾಗಿರುವುದು ವಿಶೇಷವಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ನಾನು ಕೂಡ ಬ್ಯಾಸ್ಕೆಟ್ ಬಾಲ್ ಕ್ರೀಡಾ ಪಟುವಾಗಿದ್ದೆ. ಬೇರೆ ಕ್ರೀಡೆಗಳನ್ನು ಆಡುತ್ತಿದೆ ಎಂದರು.
ಚಾಮರಾಜನಗರ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಚೇತನ್ ದೊರೈರಾಜ್, ಪದಾಧಿಕಾರಿಗಳಾದ ಮಹೇಶ್, ಸುಮನ್ ಕ್ರೀಡಾ ಪ್ರೋತ್ಸಾಹಿಗಳಾಗಿದ್ದಾರೆ. ಹಿಂದೆ ಕಬಡ್ಡಿ, ಖೋ ಖೋ ಪಂದ್ಯಾವಳಿ ಆಯೋಜಿಸಿದ್ದರು. ಇದೀಗ ನೂತನ ಅಂಕಣದಲ್ಲಿ ಬ್ಯಾಸ್ಕೆಟ್ ಬಾಲ್ ಪಂದ್ಯಾವಳಿ ಆಯೋಜಿಸಿದ್ದಾರೆ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ನಿರಂತರ ಪ್ರಯತ್ನದಿಂದ ಗೆಲುವು ಸಾಧ್ಯವಾಗಿದೆ. ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವ ಹೆಚ್ಚಾಗಿರಬೇಕು ಎಂದು ಕಿವಿಮಾತು ಹೇಳಿದರು.
ಯುವ ಸಬಲೀಕರಣ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್, ಜಿಲ್ಲೆಯಲ್ಲಿಯೇ ಪ್ರಥಮವಾಗಿ ಸಿಂಥೆಟಿಕ್ ಬ್ಯಾಸ್ಕೆಟ್ ಬಾಲ್ ಅಂಕಣ ಕೊಳ್ಳೇಗಾಲದಲ್ಲಿ ನಿರ್ಮಾಣವಾಗಿರುವುದು ಇತಿಹಾಸವಾಗಿದೆ. ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಮಾಜಿ ಶಾಸಕ ಎಸ್.ಜಯಣ್ಣ ಶ್ರಮಿಸಿದ್ದರು. ಇದೀಗ ಅಧಿವೇಶನದಲ್ಲಿ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಕ್ರೀಡಾಂಗಣ ಅಭಿವೃದ್ಧಿಗಾಗಿ ಸರ್ಕಾರ ಗಮನ ಸೆಳೆದು ಶ್ರಮಿಸಿದ್ದಾರೆ. ಶಿಕ್ಷಣದಷ್ಟೇ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಇದರ ಪ್ರತಿ ಫಲವಾಗಿ ಸರ್ಕಾರದ ನಿದೇಶನದಂತೆ ಕೊಳ್ಳೇಗಾಲ ತಾಲೂಕು ಕ್ರೀಡಾಂಗಣದ ಮೂಲ ಸೌಕರ್ಯ, ಒಳಾಂಗಣ ಕ್ರೀಡಾಗಣ, ಮಲ್ಟಿಜಿಮ್ ಅಭಿವೃದ್ಧಿಗೆ 3 ಕೋಟಿ ರೂ. ಕ್ರೀಯಾ ಯೋಜನೆಯನ್ನು ಚಾಮರಾಜನಗರ ಯುವ ಜನ ಕ್ರೀಡಾ ಇಲಾಖೆ ಸರ್ಕಾರಕ್ಕೆ ಸಲ್ಲಿಸಿದೆ. ರಾಜ್ಯ ಸರ್ಕಾರ ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದೆ ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರು, ಜಿಎಸ್‌ಟಿ ಕಸ್ಟಮ್ಸ್‌ನ ನಿವೃತ್ತ ಅಧಿಕಾರಿ ವಿಜಯ್ ಬಳ್ಳಾರಿ, ಕರ್ನಾಟಕ ಬ್ಯಾಸ್ಕೆಟ್ ಬಾಲ್ ಸ್ಟೇಟ್ ಅಸೋಶಿಯೇಷನ್‌ನ (ಕೆಎಸ್‌ಬಿಬಿಎ) ಟೆಕ್ನಿಕಲ್ ಕಮಿಟಿ ಚೇರ್ಮನ್ ವೆಂಕಟೇಶ್, ಉಪಾಧ್ಯಕ್ಷ ಗುಣಶೇಖರ್, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಮೊಸೆಸ್, ಶ್ರೀ ಮಹದೇಶ್ವರ ಕಾಲೇಜು ಪ್ರಾಂಶುಪಾಲೆ ಪ್ರೊ.ಜಯಲಕ್ಷ್ಮೀ, ಕೆಎಂಎಫ್ ಮಾಜಿ ನಿರ್ದೇಶಕ ಬಿ.ತೋಟೇಶ್, ನಗರಸಭೆ ಮಾಜಿ ಸದಸ್ಯರಾದ ಸುಮಾ ಸುಬ್ಬಣ್ಣ, ಶಾಂತರಾಜು, ಚಾಮರಾಜನಗರ ಬ್ಯಾಸ್ಕೆಟ್ ಬಾಲ್ ಅಸೋಸಿಯೇಷನ್ ಅಧ್ಯಕ್ಷ ಚೇತನ್ ದೊರೈರಾಜ್, ಉಪಾಧ್ಯಕ್ಷ ಜಿ.ಎನ್.ಮಹೇಶ್ ಕುಮಾರ್, ಕಾರ್ಯದರ್ಶಿ ಸುಮನ್ ಇತರರು ಇದ್ದರು.