ಬನ್ನೂರು: ಶಿಸ್ತಿನ ಜೀವನ ನಡೆಸಿದಾಗ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವಿ.ಎಸ್.ಶಿವರಾಜ್ ಹೇಳಿದರು.
ಪಟ್ಟಣದ ರೋಟರಿ ಶಾಲೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವದ ಝೇಂಕಾರ ಸಮಾರಂಭದಲ್ಲಿ ಮಾತನಾಡಿದರು. ಇಂದು ಯುವ ಪೀಳಿಗೆ ಆರಾಧಿಸುವ ಸಾಕಷ್ಟು ನಾಯಕರು ಧೂಮಪಾನ, ಮಧ್ಯಪಾನ, ಡ್ರಗ್ಸ್‌ನಂತ ಮಾದಕ ವಸ್ತುಗಳ ವ್ಯಸನಿಗಳಾಗಿದ್ದು, ಅವರಿಂದ ನೀವು ಜೀವನ ರೂಪಿಸಿಕೊಳ್ಳಲು ಮತ್ತು ಸಮಾಜಕ್ಕೆ ಒಳಿತು ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಹಗಲಿರುಳು ನಿಮಗಾಗಿ ಶ್ರಮಿಸಿ ದೇಶ ಕಾಯುವಂತ ಸೇನಾಯೋಧರು ನಿಜವಾದ ನಾಯಕರು ಎಂದು ಬಣ್ಣಿಸಿದರು.
ದೇಶಕ್ಕಾಗಿ ತಮ್ಮ ಜೀವವನ್ನೇ ತ್ಯಾಗ ಮಾಡುವಂತಹ ಮಹಾನ್ ನಾಯಕರ ಚರಿತ್ರೆ ತಿಳಿಯುವ ಮೂಲಕ ದೇಶ ಕಾಯುವಂತ ಯೋಧರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಮಾತನಾಡಿದ ರೋಟರಿ ಸಂಸ್ಥೆ ಅಧ್ಯಕ್ಷ ಡಾ.ರಾಜೀವ್, ವಾರ್ಷಿಕೋತ್ಸವ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವಂತ ಪ್ರತಿಭೆ ಹೊರತರುವಂತ ವೇದಿಕೆಯಾಗಿದೆ. ಪ್ರತಿ ಮಕ್ಕಳು ವೇದಿಕೆಯನ್ನು ಬಳಸಿಕೊಂಡು ಪ್ರತಿಭೆಯನ್ನು ಅನಾವರಣಗಳಿಸುವ ಮೂಲಕ ಪಾಲಕರಿಗೆ ಸಂತೋಷ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಝೇಂಕಾರ ಕಾರ್ಯಕ್ರಮ ಆಯೋಜಿಸಸಲಾಗಿದೆ ಎಂದರು.
ನಂತರ ರೋಟರಿ ಶಾಲೆ ಅಧ್ಯಕ್ಷ ಬಿ.ಎನ್.ಸುರೇಶ್ ಮಾತನಾಡಿ, ಎಲ್ಲ ಪಾಲಕರ ಸಹಕಾರದಿಂದ ಇಂದು ರೋಟರಿ ಶಾಲೆ ಬೆಳೆದು ನಿಂತಿದೆ. ಕಲಿಕೆ ಮತ್ತು ವಿದ್ಯಾರ್ಥಿ ಚಟುವಟಿಕೆಯನ್ನು ಗುರಿಯಾಗಿಸಿ ನಡೆಸುತ್ತಿರುವಂತ ಸೇವಾ ಸಂಸ್ಥೆ ಇದಾಗಿದ್ದು, ತಾಲೂಕಿನಲ್ಲಿಯೇ ಉತ್ತಮ ಶಾಲೆ ಎನಿಸಿಕೊಂಡಿದೆ ಎಂದರು.
ಇದಕ್ಕು ಮುನ್ನ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವಿ.ಎಸ್.ಶಿವರಾಜ್, ಬಿಇಒ ಎಸ್.ಸಿ.ಶಿವಮೂರ್ತಿ, ರೋಟರಿ ಸಂಸ್ಥೆ ಅಧ್ಯಕ್ಷ ಡಾ.ರಾಜೀವ್, ರೋಟರಿ ಶಾಲೆ ಅಧ್ಯಕ್ಷ ಬಿ.ಎನ್.ಸುರೇಶ್ , ರೋಟರಿ ಮಾಜಿ ಅಧ್ಯಕ್ಷ ಡಾ.ಮಹೇಂದ್ರಸಿಂಗ್‌ಕಾಳಪ್ಪ, ಬಿ.ಎಸ್.ಯೋಗೇಂದ್ರ, ಕೆಂಪೇಗೌಡ, ಎಂ.ಎಸ್.ಜಯರಾಮೇಗೌಡ, ಬಿ.ಕೆ. ವೆಂಕಟೇಶ್‌ಪ್ರಸಾದ್, ಎಸ್.ಶಿವಕುಮಾರಸ್ವಾಮಿ, ವೈ.ಎಚ್.ಹನುಮಂತೇಗೌಡ, ಮಾಣಿಕ್‌ಚಂದ್‌ಚೌಧರಿ, ಎ.ಎಸ್.ಬಾಬು, ಟಿ.ವಾಸುದೇವ, ಮರಿಸ್ವಾಮಿ, ಬಸವನಹಳ್ಳಿ ವೆಂಕಟೇಶ್, ಕೃಷ್ಣೇಗೌಡ, ನಂಜುಂಡಸ್ವಾಮಿ ಇತರರು ಇದ್ದರು.