ಗುಂಡ್ಲುಪೇಟೆ: ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಉದ್ಯಮಶೀಲರಾಗಬೇಕು ಎಂದು ಚಾಮರಾಜನಗರ ಉದ್ಯೋಗ ವಿನಿಮಯ ಕಚೇರಿ ಉದ್ಯೋಗಾಧಿಕಾರಿ ಮೊಹಮ್ಮದ್ ಅಕ್ಬರ್ ಸಲಹೆ ನೀಡಿದರು.
ಪಟ್ಟಣದ ಅಂತಾರಾಷ್ಟ್ರೀಯ ಮಾನವ ಮತ್ತು ಏಳಿಗೆ ಸಂಸ್ಥೆ ಕಚೇರಿಯಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಕರ್ನಾಟಕ, ಉದ್ಯಮಶೀಲತಾಭಿವೃದ್ಧಿ ಕೇಂದ್ರ(ಸಿಡಾಕ್) ಧಾರವಾಡ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಡಾ.ಬಿ.ಎಸ್.ಅಜಯ್ ಕುಮಾರ್ ನೇತೃತ್ವದ ಅಂತಾರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆ ಸಹಯೋಗದಲ್ಲಿ ಜಿಲ್ಲೆಯ ಭಾವಿ ಉದ್ಯಮಿಗಳಿಗೆ ಆಯೋಜಿಸಿದ್ದ ಒಂದು ದಿನದ ಉದ್ಯಮಶೀಲತಾ ತಿಳಿವಳಿಕೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಲು ಸರ್ಕಾರದ ಹಲವು ಯೋಜನೆಗಳಿದ್ದು, ಅವುಗಳನ್ನು ಬಳಸಿಕೊಳ್ಳಬೇಕು. ಜತೆಗೆ ಗುಂಪು ಚಟುವಟಿಕೆಗಳ ಮೂಲಕ ಉದ್ಯಮಗಳನ್ನು ಪ್ರಾರಂಭಿಸಿ ಯಶಸ್ಸು ಗಳಿಸಿ. ಇದರಿಂದ ನಿಮ್ಮ ಸಂಸಾರ ಮತ್ತು ಜೀವನ ಉತ್ತಮವಾಗಲಿದೆ ಎಂದು ತಿಳಿಸಿದರು.
ಸಂಸ್ಥೆ ವ್ಯವಸ್ಥಾಪಕ ಕೇಶವಮೂರ್ತಿ ಮಾತನಾಡಿ, ಮಾರುಕಟ್ಟೆ ಸಂಪರ್ಕ ಹಾಗೂ ಯಾವ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ಅನುಕೂಲ ಎಂಬುದರ ಬಗ್ಗೆ ಉದ್ಯಮ ಪ್ರಾರಂಭ ಮಾಡಿರುವವರನ್ನು ಭೇಟಿ ಮಾಡಿ ತಿಳಿದುಕೊಳ್ಳಬೇಕು. ಜತೆಗೆ ಸಂಬಂಧಿಸಿದ ಇಲಾಖೆಗಳಿಂದ ತರಬೇತಿ ಪಡೆಯಬೇಕು. ಸ್ವಯಂ ಉದ್ಯಮ ಮಾಡುವ ಮಹಿಳೆಯರಿಗೆ ನಮ್ಮ ಸಂಸ್ಥೆ ವತಿಯಿಂದ ಅಗತ್ಯ ನೆರವು ನೀಡಲಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಎಸ್‌ಬಿಐ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರೋಹಿತ್, ಸಿಡಾಕ್ ಸಂಸ್ಥೆ ಸಲಹೆಗಾರ ಎಂ.ಎಸ್.ಮಧು, ತರಬೇತುದಾರ ಅರುಣ್ ಕುಮಾರ್, ಸಂಪನ್ಮೂಲ ವ್ಯಕ್ತಿಕೃಷ್ಣಮೂರ್ತಿ, ರವಿ ಯಶಸ್ವಿ ಉದ್ಯಮಶೀಲರು ಹಾಗೂ ಅಂತಾರಾಷ್ಟ್ರೀಯ ಮಾನವ ಮತ್ತು ಏಳಿಗೆ ಸಂಸ್ಥೆ ಸಿಬ್ಬಂದಿ ಇದ್ದರು.