ತಾಂತ್ರಿಕ ಬೆಂಬಲ ಸಂಸ್ಥೆಯ ಸಂಯೋಜಕರು ಮತ್ತು ರಾಜ್ಯ ಮಟ್ಟದ ತಾಂತ್ರಿಕ ಸಮಿತಿ ಸದಸ್ಯೆ ಡಾ.ಛಾಯಾ ದೇಗಾಂವಕರ್ ಮಾತನಾಡಿ, ಜಿಲ್ಲೆಯಲ್ಲಿ 2030ರ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು 5ನೇ ಮಾನವ ಅಭಿವೃದ್ಧಿ ವರದಿಯನ್ನು ಅಂತಿಮಗೊಳಿಸಲಾಗುತ್ತಿದ್ದು, ಇದನ್ನು ಗ್ರಾಮ ಪಂಚಾಯತ್ ಮಟ್ಟದ ಯೋಜನೆಗಳಿಗೂ ಅನ್ವಯಿಸಲಾಗುವುದು. ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಜಾರಿಗೆ ತಂದಿರುವ ಪಂಚಾಯತ್ ಮಟ್ಟದ ಸುಸ್ಥಿರ ಸೂಚ್ಯಂಕದ ಪ್ರಕಾರ, ಸರ್ಕಾರದ ಗುಣಮಟ್ಟದ ಶಿಕ್ಷಣ ವಿಭಾಗದಲ್ಲಿ ಕಲಬುರಗಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿ ಐತಿಹಾಸಿಕ ಸಾಧನೆ ಮಾಡಿದೆ ಎಂದು ಹೇಳಿದರು.ಈ ವರದಿಯು ಕೇವಲ ತಲಾ ಆರ್ಥಿಕ ಆದಾಯವನ್ನಷ್ಟೇ ಪರಿಗಣಿಸದೆ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟ ಸುಧಾರಣ ಹೀಗೆ ವಿವಿಧ ಅಂಶಗಳನ್ನು ಪರಿಗಣಿಸಿ ರೂಪಿಸಿದೆ. ಹೆಣ್ಣುಮಕ್ಕಳ ಶಾಲಾ ಡ್ರಾಪ್‌ಔಟ್ ತಡೆಗಟ್ಟುವುದು, ತಾಯಂದಿರ ಮತ್ತು ಮಕ್ಕಳ ಮರಣ ಪ್ರಮಾಣ ತಗ್ಗಿಸುವುದು ಹಾಗೂ ಸ್ವಯಂ ಉದ್ಯೋಗದ ಮೂಲಕ ತಲಾ ಆದಾಯ ಹೆಚ್ಚಿಸುವುದು ಪ್ರಮುಖ ಗುರಿಯಾಗಿದೆ. ಪರಿಸರ ಅಸಮತೋಲನದಿಂದ ಉಂಟಾಗುವ ಬರಗಾಲ ಎದುರಿಸಲು 17 ಸುಸ್ಥಿರ ಗುರಿಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಈ ವರದಿಯನ್ನು ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.