ಗೌರಿಬಿದನೂರಿನ ಎಸ್ಎಸ್ಇಎ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾ ಹಾಗೂ ಶಿಕ್ಷಕರ ದಿನಾಚರಣೆ ಕ್ರೀಡಾಕೂಟಕ್ಕೆ ತಹಸೀಲ್ದಾರ್ ಕೆ.ಎಂ.ಅರವಿಂದ್ ಚಾಲನೆ ನೀಡಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್.ಮಂಜುನಾಥ್ ಇತರರು ಇದ್ದರು.
ಶಿಕ್ಷಕರ ಬದುಕು ಬೋಧನೆಗೆ ಸೀಮಿತವಾಗಿಲ್ಲ, ಸಮಾಜ ಕಟ್ಟುವ ಹಾಗೂ ಪ್ರಜೆಗಳನ್ನು ರೂಪಿಸುವ ಶಿಕ್ಷಕರು ಒತ್ತಡರಹಿತ ಜೀವನ ನಡೆಸಬೇಕು ಎಂದು ತಹಸೀಲ್ದಾರ್ ಕೆ.ಎಂ.ಅರವಿಂದ್ ತಿಳಿಸಿದರು.
ನಗರದ ಎಸ್ಎಸ್ಇಎ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಹಾಗೂ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ತಾಲೂಕು ಘಟಕದಿಂದ ರಾಷ್ಟ್ರೀಯ ಕ್ರೀಡಾ ಹಾಗೂ ಶಿಕ್ಷಕರ ದಿನಾಚರಣೆಯಡಿ ಹಮ್ಮಿಕೊಂಡಿದ್ದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಮಾತನಾಡಿ, ಸ್ಪರ್ಧೆಗಳು ಶಿಕ್ಷಕರ ದಿನನಿತ್ಯದ ಚಟುವಟಿಕೆಗಳಿಗೆ ಉತ್ಸಾಹ, ಪ್ರೇರಣೆ ನೀಡುತ್ತವೆ. ಶಿಕ್ಷಕರು ಮಕ್ಕಳ ಕಲಿಕೆ ಜತೆ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಭೆ ಪ್ರದರ್ಶಿಸಬಹುದು ಎಂದರು.
ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಆರ್.ಮಂಜುನಾಥ್ ಮಾತನಾಡಿ, ಜನರಲ್ಲಿ ದೈಹಿಕ ಕಸರತ್ತು ಕಡಿಮೆಯಾಗುತ್ತಿದ್ದು, ನಾನಾ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮೂಲಕ ದೈಹಿಕ ಸದೃಢತೆ ಹೊಂದಬೇಕು, ಶಿಕ್ಷಕರು ವರ್ಷಕ್ಕೊಮ್ಮೆ ನಡೆಯುವ ಕ್ರೀಡಾಕೂಟದಲ್ಲಿ ಮಾತ್ರ ಪಾಲ್ಗೊಳ್ಳದೆ ನಿತ್ಯ ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿಂಹಾದ್ರಿ ಮಾತನಾಡಿ, ಕ್ರೀಡಾಕೂಟದಲ್ಲಿ ಪ್ರತಿಯೊಬ್ಬರು ಪ್ರತಿಷ್ಠೆ ಬದುಗಿಟ್ಟು ಪ್ರೀತಿಯಿಂದ ಕ್ರೀಡಾ ಮನೋಭಾವನೆ ಮೆರೆಯಬೇಕು ಎಂದರು.
ಪ್ರತಿಭೆ ಅನಾವರಣ: ತಾಲೂಕು ವ್ಯಾಪ್ತಿಯ ವಿವಿಧ ಶಾಲೆಗಳ ಶಿಕ್ಷಕರು ವಾಲಿಬಾಲ್, ಥ್ರೋಬಾಲ್, ಹಗ್ಗಜಗ್ಗಾಟ, ಸಂಗೀತ ಕುರ್ಚಿ, ಶಾಟ್ಪುಟ್, ಭಾವಗೀತೆ, ಜಾನಪದ ಗೀತೆ, ಸಮೂಹ ನೃತ್ಯ, ಭರತನಾಟ್ಯ, ಛದ್ಮವೇಷ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಪ್ರತಿಭೆ ಪ್ರದರ್ಶಿಸಿ ಗಮನ ಸೆಳೆದರು.
ಪೌರಾಯುಕ್ತ ಕೆ.ಜೆ.ರಮೇಶ್, ನೌಕರರ ಸಂಘದ ಕಾರ್ಯದರ್ಶಿ ಡಿ.ಶಂಕರ್, ಶಿಕ್ಷಕರ ಸಂಘದ ಕಾರ್ಯದರ್ಶಿ ಎಚ್.ಟಿ.ಶ್ರೀಧರ್, ಖಜಾಂಚಿ ಮುನಿರಾಜು, ಬಾಲಪ್ಪ, ಕೃಷ್ಣಪ್ಪ, ಬಡ್ತಿ ಮುಖ್ಯಶಿಕ್ಷಕರ ಸಂಘದ ಕೃಷ್ಣ ಮೂರ್ತಿ, ಉಪಾಧ್ಯಕ್ಷ ಅಂಬಿಕಾ, ಚಂದ್ರಕಲಾ, ಮಂಜುಳಾ ಇದ್ದರು.