

ಹೊಸಕೋಟೆ :
ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಲು ಹಣ ಮುಖ್ಯವಲ್ಲ. ಕಲಿಯುವ ಮನಸ್ಸು, ದೃಢ ಸಂಕಲ್ಪ ಮುಖ್ಯ. ಹಣವಿಲ್ಲದ ಕಾರಣಕ್ಕೆ ಕನಸುಗಳನ್ನು ಕೈಬಿಡಬಾರದು ಎಂದು ವಿದ್ಯಾವನ ಕಾಲೇಜು ಅಧ್ಯಕ್ಷ ಭೈರಾರೆಡ್ಡಿ ಹೇಳಿದರು.
ತಾಲೂಕಿನ ತಿರುಮಲಶೆಟ್ಟಿಹಳ್ಳಿ ಕ್ರಾಸ್ನಲ್ಲಿರುವ ವಿದ್ಯಾವನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಪದವಿ ಪ್ರಧಾನ ಹಾಗೂ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಜೀವನವೇ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ಅವರು ಇಂಜಿನಿಯರಿಂಗ್ ಸೇರ್ಪಡೆಯಾದಾಗ ಶುಲ್ಕ ಕಟ್ಟಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿತ್ತು. ಆಗ ಅವರ ಅಕ್ಕ ಆಭರಣಗಳನ್ನು ಅಡವಿಟ್ಟು ಕಾಲೇಜು ಶುಲ್ಕ ಪಾವತಿಸಿದರು. ಆ ಅವಕಾಶವನ್ನು ಬಳಸಿಕೊಂಡ ಕಲಾಂ ಅವರು ಮುಂದೆ ದೇಶದ ಹೆಮ್ಮೆಯ ವಿಜ್ಞಾನಿಯಾಗಿ, ರಾಷ್ಟ್ರಪತಿಯಾಗಿ ಬೆಳೆದರು. ಆದ್ದರಿಂದ ಹಣದ ಕೊರತೆ ಕಾರಣವನ್ನಾಗಿ ಮಾಡಿಕೊಳ್ಳದೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಉನ್ನತ ಹುದ್ದೆ ಅಲಂಕರಿಸಿರುವ ಕನಸನ್ನು ಹೊಂದಿ, ಗುರಿ ಸಾಧಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ರಾಜಣ್ಣ ಹರಳೂರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಗುರಿ ಹೊಂದಿ ಶ್ರಮಿಸಿದರೆ ಯಾವುದೇ ಸಾಧನೆ ಅಸಾಧ್ಯವಲ್ಲ. ಜೀವನದಲ್ಲಿ ಎಷ್ಟೇ ಸಮಸ್ಯೆಗಳು ಬಂದರೂ ಕೆಟ್ಟ ದಾರಿ ಹಿಡಿಯಬಾರದು. ಕುಟುಂಬ, ಶಾಲೆ, ಸಮಾಜದ ಕುರಿತು ಜವಾಬ್ದಾರಿಯಿಂದ ನಡೆದುಕೊಂಡು ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಶಿಸ್ತು, ಪರಿಶ್ರಮ, ಆತ್ಮವಿಶ್ವಾಸ ಜೀವನದ ಮೌಲ್ಯಗಳನ್ನಾಗಿ ಮಾಡಿಕೊಂಡರೆ ಯಶಸ್ಸು ಸಾಧ್ಯ ಎಂದರು.