ಮೊದಲಿಗೆ ಮಕ್ಕಳೊಂದಿಗೆ ವೀಡಿಯೋ ಸಂವಾದ ನಡೆಸಿದ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಮಕ್ಕಳು ಮಂಡಿಸಿದ ಬೇಡಿಕೆಗಳು, ಸಮಸ್ಯೆಗಳನ್ನು ಆಲಿಸಿದರು. ಸ್ಥಳೀಯ ಭಾಗದ ತಮ್ಮ ಶಾಲೆಯಲ್ಲಿ ಅಕ್ಷರ ದಾಸೋಹ ಕೊಠಡಿ, ಬೋಜನಾಲಯ ನಿರ್ಮಾಣ, ಆಟದ ಮೈದಾನ, ಕ್ರೀಡಾ ಸಾಮಗ್ರಿ ಕಿಟ್, ಶೌಚಗೃಹ, ಕುಡಿಯುವ ನೀರು, ಶಾಲೆಯ ಮುಂದೆ ಚರಂಡಿ ನೀರು ಹರಿಯದಿರುವುದು, ಗ್ರಾಮದ ರಸ್ತೆಗಳನ್ನು ಸುಸಜ್ಜಿತಗೊಳಿಸುವುದು, ಕಾಡುಪ್ರಾಣಿಗಳ ಹಾವಳಿ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಮಕ್ಕಳು ಸಚಿವರ ಗಮನಕ್ಕೆ ತಂದರು.
ಶಾಲಾ ಮಕ್ಕಳೊಂದಿಗೆ ಮಾತನಾಡಿದ ಸಚಿವರು ಮುಂದೆ ಏನಾಗಬೇಕೆಂದು ಬಯಸಿದ್ದೀರಿ? ಕಲಿಕೆಗೆ ಇನ್ನೂ ಯಾವ ಸೌಲಭ್ಯಗಳು ನಿಮಗೆ ಅಗತ್ಯವಿದೆ ಎಂದು ಪ್ರಶ್ನಿಸಿದರು. ವೈದ್ಯರು, ಜಿಲ್ಲಾಧಿಕಾರಿ, ಐಎಎಸ್‌ನಂತಹ ಹುದ್ದೆಗಳನ್ನು ಅಲಂಕರಿಸುವ ಅಭಿಲಾಷೆ ವ್ಯಕ್ತಪಡಿಸಿದ ವಿದ್ಯಾರ್ಥಿಗಳಿಗೆ ಈಗಿನಿಂದಲೇ ಚೆನ್ನಾಗಿ ಓದಬೇಕು. ಜಿಲ್ಲೆಯಲ್ಲಿರುವ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್ಲರು ಮಹಿಳೆಯರೇ ಆಗಿದ್ದಾರೆ. ನಿಮಗೆ ಇವರೇ ಸ್ಫೂರ್ತಿಯಾಗಿದ್ದಾರೆ ಎಂದರು. ಹಿರಿಯ ಅಧಿಕಾರಿಗಳ ಜತೆ ವಿದ್ಯಾರ್ಥಿಗಳನ್ನು ಮಾತನಾಡಿಸಿ ಹುರಿದುಂಬಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವರಾದ ಪ್ರಿಯಾಂಕ್ ಖರ್ಗೆ, ಪಂಚಾಯತ್ ರಾಜ್ ಇಲಾಖೆ ಮುಖಾಂತರ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಏರ್ಪಾಡಾಗಿರುವ ಮಕ್ಕಳ ವಿಶೇಷ ಗ್ರಾಮಸಭೆ ಮಾದರಿಯಾಗಿದೆ. ತಂತ್ರಜ್ಞಾನವನ್ನು ಬಳಸಿಕೊಂಡು ಪಾರದರ್ಶಕತೆ ಹಾಗೂ ಜನಸ್ನೇಹಿ ಆಡಳಿತವನ್ನು ನೀಡುವ ಉದ್ದೇಶ ಕಾರ್ಯಕ್ರಮದ್ದಾಗಿದೆ ಎಂದರು.