ಲಿಂಗಸುಗೂರು:ಪಟ್ಟಣದ ಬಸ್ ಡಿಪೋದಿಂದ ಸಂಚರಿಸುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ವ್ಯವಸ್ಥೆ ಗುರುವಾರದಿಂದ ಆರಂಭಗೊಂಡಿದ್ದು, ಪ್ರಯಾಣಿಕರು ಆನ್‌ಲೈನ್ ಮೂಲಕ ಹಣ ಪಾವತಿಸಿ ಪ್ರಯಾಣಿಸಬಹುದಾಗಿದೆ.
ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣಿಸಬೇಕಾದರೆ ಈ ಮೊದಲು ನಗದು ಇಟ್ಟುಕೊಳ್ಳಬೇಕಾಗಿತ್ತು. ಚಿಲ್ಲರೆ ಹಣದ ಕೊರತೆಯಿಂದ ಸಾಕಷ್ಟು ಬಾರಿ ನಿರ್ವಾಹಕರು, ಪ್ರಯಾಣಿಕರೊಂದಿಗೆ ಜಗಳಕ್ಕಿಳಿಯುತ್ತಿದ್ದರು.
ನಿರ್ವಾಹಕರು ಚಿಲ್ಲರೆ ಕೊಡಲು ಸಾಧ್ಯವಾಗದೇ ಇದ್ದದ್ದರಿಂದ ಟಿಕೆಟ್ ಹಿಂದುಗಡೆ ಪೆನ್ನಿನಿಂದ ಬರೆದು ಕೊಡುತ್ತಿದ್ದು, ಬಸ್ ಇಳಿಯುವಾಗ ಪಡೆಯಬೇಕಾಗುತ್ತಿತ್ತು.
ಆದರೆ ಈಗ ಫೋನ್ ಪೇ, ಗೂಗಲ್ ಪೇ ಮೂಲಕ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸಿ ಟಿಕೆಟ್ ಪಡೆಯುವ ವ್ಯವಸ್ಥೆ ಜಾರಿಮಾಡಲಾಗಿದೆ.
ಡಿಜಿಟಲ್ ಯಂತ್ರ: ಕೆಕೆಆರ್‌ಟಿಸಿಯು ಒಟಿಪಿಎಲ್ ಕಂಪನಿಯಿಂದ ಡಿಜಿಟಲ್ ಪೇಮೆಂಟ್ ಯಂತ್ರಗಳನ್ನು ಪಡೆದಿದ್ದು, ಈ ಯಂತ್ರಗಳು ಆನ್‌ಲೈನ್ ಪಾವತಿ ಪ್ರಕ್ರಿಯೆಯಲ್ಲಿ ಕೆಲಸ ಮಾಡುತ್ತವೆ.
ಡಿಜಿಟಲ್ ಪೇಮೆಂಟ್ ಸೌಲಭ್ಯ ಕಲ್ಪಿಸಲು ಎಸ್‌ಬಿಐ ಬ್ಯಾಂಕಿನ ಜತೆ ಒಪ್ಪಂದ ಮಾಡಿಕೊಂಡಿದ್ದು, ಬ್ಯಾಂಕ್ ಮೂಲಕ ಹಣದ ವರ್ಗಾವಣೆಯಾಗುತ್ತದೆ.
ಈಡೇರಿದ ಬೇಡಿಕೆ
ಸಾರಿಗೆ ಬಸ್‌ಗಳಲ್ಲಿ ಯುಪಿಐ ಸೇವೆ ಬೇಕು ಎಂಬುದು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿತ್ತು. ಲಿಂಗಸುಗೂರು ಡಿಪೋದಲ್ಲಿ 129 ರೂಟ್‌ಗಳ ಮೂಲಕ 136 ಬಸ್‌ಗಳು ಓಡಾಡುತ್ತವೆ. ಎಲ್ಲ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ಸೌಕರ್ಯ ಆರಂಭಿಸಲಾಗಿದೆ.
ಲಿಂಗಸುಗೂರು ಬಸ್ ಡಿಪೋದಲ್ಲಿರುವ ಎಲ್ಲ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ಮಾಡಬಹುದು. ಚಿಲ್ಲರೆ ಸಮಸ್ಯೆ ಉಂಟಾಗುವುದಿಲ್ಲ. ನಿರ್ವಾಹಕರು ಬೇರೆ ಬೇರೆ ಊರುಗಳಲ್ಲಿ ರಾತ್ರಿ ಬಸ್ ನಿಲುಗಡೆ ಮಾಡಿದಾಗ ಆರಾಮವಾಗಿ ನಿದ್ದೆ ಮಾಡುತ್ತಾರೆ. ಕಳ್ಳರ ಹಾವಳಿಯೂ ಇರುವುದಿಲ್ಲ.
— ವಿ.ಲಕ್ಷ್ಮಣ ಡಿಪೋ ವ್ಯವಸ್ಥಾಪಕ, ಲಿಂಗಸುಗೂರು
ಲಿಂಗಸುಗೂರು ಬಸ್ ಡಿಪೋದಿಂದ ಸಂಚರಿಸುವ ಬಸ್‌ಗಳಲ್ಲಿ ಡಿಜಿಟಲ್ ಪಾವತಿ ಮಾಡುವ ಸೌಲಭ್ಯದಿಂದ ಪ್ರಯಾಣಿಕರಿಗೆ ತುಂಬಾ ಅನುಕೂಲವಿದೆ. ಫೋನ್‌ಪೇ ಮೂಲಕ ಹಣ ಪಾವತಿ ಮಾಡುವುದರಿಂದ ಚಿಲ್ಲರೆ ಸಮಸ್ಯೆ ಇರುವುದಿಲ್ಲ.