ಭಕ್ತರ ದೇಣಿಗೆಯಿಂದ ಬನಶಂಕರಿದೇವಿಗೆ ಬೆಳ್ಳಿರಥ

ಬಾದಾಮಿ ಸಮೀಪದ ಬನಶಂಕರಿ ದೇವಸ್ಥಾನದಲ್ಲಿ ನೂತನ ಬೆಳ್ಳಿರಥ ಸಮರ್ಪಣೆ ಮಾಡಿದ ಚಿತ್ರ.
ಬಾದಾಮಿ ಸಮೀಪದ ಬನಶಂಕರಿ ದೇವಸ್ಥಾನದಲ್ಲಿ ನೂತನ ಬೆಳ್ಳಿರಥ ಸಮರ್ಪಣೆ ಮಾಡಿದ ಚಿತ್ರ.
Published on

ಪ್ರಮುಖ ಮುಖ್ಯಾಂಶಗಳು

  • 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
  • ಸಿಂಹದ ಲಾಂಛನ, ಅಷ್ಟ ಲಕ್ಷ್ಮಿಯರ ಆಕರ್ಷಕ ಅಲಂಕಾರ
ಬಾದಾಮಿ: ಸಮೀಪದ ಪ್ರಸಿದ್ಧ ಬನಶಂಕರಿ ದೇವಸ್ಥಾನದಲ್ಲಿ ಬುಧವಾರ 106 ಕೆಜಿ ಶುದ್ಧ ಬೆಳ್ಳಿಯಿಂದ ನಿರ್ಮಿತ ನೂತನ ರಥವನ್ನು ಭಕ್ತರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ಸಮರ್ಪಿಸಲಾಯಿತು.
ದೇವಸ್ಥಾನದ ಭಕ್ತರು ಹಾಗೂ ಅರ್ಚಕರ ಬಹುಕಾಲದ ಆಶಯದಂತೆ, ಭಕ್ತರ ದೇಣಿಗೆಯಿಂದ ನಿರ್ಮಿಸಲಾದ ಈ ರಥವನ್ನು ನಿಪ್ಪಾಣಿಯ ಸುರೇಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಲಾಗಿದೆ. ಕುಮಟಾದಲ್ಲಿ ಸಾಗವಾನಿ ಮರದಿಂದ ರಥದ ಮೂಲ ರಚನೆ ಮಾಡಲಾಗಿದ್ದು, ಅದಕ್ಕೆ ಬೆಳ್ಳಿ ಲೇಪನ ನೀಡಲಾಗಿದೆ.
ಸುಮಾರು 5ರಿಂದ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಈ ರಥದಲ್ಲಿ ಸಿಂಹದ ಲಾಂಛನ ಮತ್ತು ಅಷ್ಟ ಲಕ್ಷ್ಮಿಯರ ಆಕರ್ಷಕ ಅಲಂಕಾರಗಳನ್ನು ಮಾಡಲಾಗಿದೆ. ರಥದಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಬೆಳಗ್ಗೆಯಿಂದ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ನಡೆದ ಬಳಿಕ ಮಧ್ಯಾಹ್ನ 12.45ಕ್ಕೆ ಸಂಗೀತ ವಾದ್ಯಗಳೊಂದಿಗೆ ರಥ ಸಮರ್ಪಣೆ ಕಾರ್ಯಕ್ರಮ ಜರುಗಿತು. ಸಾವಿರಾರು ಭಕ್ತರು ಭಾಗವಹಿಸಿ ದರ್ಶನ ಪಡೆದುಕೊಂಡರು.
ಮುಖಂಡ ಶೇಖರಗೌಡ ಪಾಟೀಲ, ಹನಮಂತ ಮಾವಿನಮರದ, ಬನಶಂಕರಿ ದೇವಸ್ಥಾನ ಟ್ರಸ್ಟ್ ಕಮಿಟಿ ಚೇರ್ಮನ್ ವೆಂಕಟೇಶ ಪೂಜಾರ, ಮಹೇಶ, ಮಹಾಂತೇಶ, ವಿದ್ಯಾನಂದ, ಶಂಕರ, ಲಕ್ಷ್ಮಣ, ಚಿದಂಬರ, ಕಿರಣ, ರಮೇಶ, ಶ್ರೀನಿವಾಸ, ಶ್ರೀರಂಗ, ಉದಯ ಸೇರಿ ಸಹಸ್ರಾರು ಜನ ಭಕ್ತರು ಇತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net