ಬಾಹ್ಯಾಕಾಶ ರಂಗದಲ್ಲಿ ಹೊಸ ಇತಿಹಾಸ ಬರೆದ ಖಾಸಗಿ ರಾಕೆಟ್!... ಯಶಸ್ಸಿನ ಹಿಂದಿದೆ ರಾಣೆಬೆನ್ನೂರಿನ ಇಂಜಿನಿಯರ್ ‘ಸಂಜಯ್’ ಕೈಚಳಕ | Vikram 1

Vikram 1 > ಬಾಹ್ಯಾಕಾಶ ರಂಗದಲ್ಲಿ ಹೊಸ ಇತಿಹಾಸ ಬರೆದ ಖಾಸಗಿ ರಾಕೆಟ್!... ಯಶಸ್ಸಿನ ಹಿಂದಿದೆ ರಾಣೆಬೆನ್ನೂರಿನ ಇಂಜಿನಿಯರ್ ‘ಸಂಜಯ್’ ಕೈಚಳಕ
Vikram 1 > ಬಾಹ್ಯಾಕಾಶ ರಂಗದಲ್ಲಿ ಹೊಸ ಇತಿಹಾಸ ಬರೆದ ಖಾಸಗಿ ರಾಕೆಟ್!... ಯಶಸ್ಸಿನ ಹಿಂದಿದೆ ರಾಣೆಬೆನ್ನೂರಿನ ಇಂಜಿನಿಯರ್ ‘ಸಂಜಯ್’ ಕೈಚಳಕ
Published on
ಹಾವೇರಿ: ಇಷ್ಟು ದಿನಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮೂಲಕ ಉಡಾವಣೆಗೊಳ್ಳುತ್ತಿದ್ದ ರಾಕೆಟ್‌ಗಳನ್ನು ನೋಡಿ ಕಣ್ತುಂಬಿಕೊಂಡಿದ್ದ ದೇಶದ ಜನತೆಗೆ, ಇದೀಗ ಖಾಸಗಿ ಕಂಪನಿಯೊಂದು ಹೊಸ ಇತಿಹಾಸ ಸೃಷ್ಟಿಸಿ ಗಮನ ಸೆಳೆದಿದೆ. ಈ ಐತಿಹಾಸಿಕ ರಾಕೆಟ್ ಉಡಾವಣಾ ತಂತ್ರಜ್ಞರ ತಂಡದಲ್ಲಿ ರಾಣೆಬೆನ್ನೂರಿನ ಇಂಜಿನಿಯರ್ ಒಬ್ಬರು ಪ್ರಮುಖ ಪಾತ್ರ ವಹಿಸಿರುವುದು ಇಡೀ ಕರ್ನಾಟಕ ಹೆಮ್ಮೆ ಪಡುವ ಸಂಗತಿಯಾಗಿದೆ.
ಖಾಸಗಿ ಬಾಹ್ಯಾಕಾಶ ಸಂಸ್ಥೆಯಾದ ಸ್ಕೈರೂಟ್ ಏರೋಸ್ಪೇಸ್ ಶನಿವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭಾರತದ ಮೊದಲ ಖಾಸಗಿ ಕಕ್ಷೀಯ ರಾಕೆಟ್ ವಿಕ್ರಮ್-೧ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಐತಿಹಾಸಿಕ ಯಶಸ್ಸಿನ ಸ್ಮರಣಾರ್ಥ ರಾಕೆಟ್ ಲಾಂಚ್ ತಂಡದ ಎಲ್ಲಾ ಇಂಜಿನಿಯರ್‌ಗಳು ಅದರ ಮೇಲೆ ಆಟೋಗ್ರಾಫ್ (ಸಹಿ) ಹಾಕಿ ಸಂಭ್ರಮಿಸಿರುವುದು ವಿಶೇಷವಾಗಿತ್ತು.

ತಾಂತ್ರಿಕ ತಂಡ ಮುನ್ನಡೆಸಿದ ಹೆಮ್ಮೆಯ ಕನ್ನಡಿಗ!

ಈ ಹೆಮ್ಮೆಯ ರಾಕೆಟ್ ಲಾಂಚ್ ತಂಡದಲ್ಲಿ ದೇಶ-ವಿದೇಶಗಳ ಖ್ಯಾತ ಇಂಜಿನಿಯರ್‌ಗಳ ಜೊತೆಗೆ ಕರ್ನಾಟಕದ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಿವಾಸಿಯಾದ ಇಂಜಿನಿಯರ್ ಸಂಜಯ್ ಲಿಂಗರಾಜ್ ಜಂಬಗಿ ಅವರು ವೆಹಿಕಲ್ ಇಂಜಿನಿಯರಿಂಗ್ ಲೀಡ್ ಆಗಿ ಕರ್ತವ್ಯ ನಿರ್ವಹಿಸಿ ಈ ಮಹತ್ವದ ಯಶಸ್ಸಿಗೆ ಕಾರಣರಾಗಿದ್ದಾರೆ.

ಶೈಕ್ಷಣಿಕ ಹಿನ್ನೆಲೆ ಮತ್ತು ವೃತ್ತಿಜೀವನ

ಸಂಜಯ್ ಅವರು ತಮ್ಮ ಪ್ರಾಥಮಿಕ ಹಾಗೂ ಪಿಯುಸಿ ಶಿಕ್ಷಣವನ್ನು ರಾಣೆಬೆನ್ನೂರಿನ ರೋಟರಿ ಶಾಲೆಯಲ್ಲಿ ಪೂರೈಸಿದ್ದರು. ಬಳಿಕ ರಾಣೆಬೆನ್ನೂರಿನ ತರಳಬಾಳು ತಾಂತ್ರಿಕ ವಿದ್ಯಾಲಯದಲ್ಲಿ ಬಿಇ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿ, ಬೆಂಗಳೂರಿನ ಎಂ.ವಿ.ಜೆ. ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಏರೋನಾಟಿಕಲ್ ವಿಷಯದಲ್ಲಿ ಎಂಟೆಕ್ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಂಟೆಕ್ ಪದವಿ ಮುಗಿದ ನಂತರ, ಸುಮಾರು ಎಂಟು ವರ್ಷಗಳ ಹಿಂದೆ ಆಗಷ್ಟೇ ಆರಂಭವಾಗಿದ್ದ ಸ್ಕೈರೂಟ್ ಏರೋಸ್ಪೇಸ್ ಖಾಸಗಿ ಸಂಸ್ಥೆಯನ್ನು ವೆಹಿಕಲ್ ಇಂಜಿನಿಯರ್ ಆಗಿ ಸೇರಿಕೊಂಡಿದ್ದರು. ಕಂಪನಿಯ ಆರಂಭದ ದಿನಗಳಿಂದಲೂ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಅವರು, ಇದೀಗ ದೇಶವೇ ತಿರುಗಿ ನೋಡುವಂತೆ ಮಾಡಿದ ವಿಕ್ರಮ್-೧ ರಾಕೆಟ್ ಉಡಾವಣೆಯಲ್ಲಿ ಇಂಜಿನಿಯರಿಂಗ್ ಲೀಡ್ ಆಗಿ ಕರ್ತವ್ಯ ನಿರ್ವಹಿಸಿ ಮಹತ್ವದ ಸಾಧನೆಗೈದಿದ್ದಾರೆ. ಇವರ ಈ ಅಪೂರ್ವ ಸಾಧನೆಗೆ ನಾಡಿನಾದ್ಯಂತ ಸಾರ್ವಜನಿಕರಿಂದ ಹಾಗೂ ಗಣ್ಯರಿಂದ ವ್ಯಾಪಕ ಪ್ರಶಂಸೆ ಮತ್ತು ಸಂತಸ ವ್ಯಕ್ತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net