

ದೊಡ್ಡಬಳ್ಳಾಪುರ :
ಹಿಂದುಳಿದ ವರ್ಗಗಳ ಸಮಗ್ರ ಅಭ್ಯುದಯದ ಆಶಯ ಬಿತ್ತುವ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತಂದ ಕೀರ್ತಿ ಡಿ.ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದು ಶ್ರೀ ದೇವರಾಜ ಅರಸು ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ.ರಾಜೇಂದ್ರ ಹೇಳಿದರು.
ತಾಲೂಕಿನ ಆರ್.ಎಲ್.ಜಾಲಪ್ಪ ಸಮೂಹ ಶಿಕ್ಷಣ ಸಂಸ್ಥೆಗಳ ಆರ್ಎಲ್ಜೆ ಐಟಿ ಆವರಣದಲ್ಲಿ ಗುರುವಾರ ಅರಸು ಹಾಗೂ ಮಾಜಿ ಪ್ರಧಾನಿ ರಾಜೀವ್ಗಾಂಧಿ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಸದ್ಭಾವನಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅರಸು ಹಾಗೂ ರಾಜೀವ್ಗಾಂಧಿ ಅವರು ತಮ್ಮತಮ್ಮ ಕಾರ್ಯವ್ಯಾಪ್ತಿ ಮತ್ತು ಆಲೋಚನಾ ಬದ್ಧತೆಯಿಂದ ದೇಶದ ಭವಿಷ್ಯವನ್ನು ಸದೃಢಗೊಳಿಸಿದ್ದಾರೆ. ತಾಂತ್ರಿಕ ಅಭಿವೃದ್ಧಿ, ಯುವಜನರ ಆಶೋತ್ತರಗಳನ್ನು ಅನುಷ್ಠಾನಗೊಳಿಸುವ ಬದ್ಧತೆ ಹೊಂದಿದ್ದರು. ಜಾಲಪ್ಪ ಅವರ ರಾಜಕಾರಣದ ಹಾದಿಯನ್ನು ಸ್ಪಷ್ಟಗೊಳಿಸಿದ್ದೂ ಸಹ ಅರಸು. ಹಾಗಾಗಿ ಅವರ ಹೆಸರನ್ನೇ ವಿದ್ಯಾಸಂಸ್ಥೆಗೆ ಇಡಲಾಗಿದೆ ಎಂದರು.
ಅರಸು ಮುಖ್ಯಮಂತ್ರಿಯಾಗಿದ್ದಾಗ "ಉಳುವವನೇ ಭೂಮಿಯ ಒಡೆಯ' ೂಷವಾಕ್ಯದಡಿ ಭೂ ಒಡೆತನವನ್ನು ಶೋಷಿತವರ್ಗಗಳಿಗೆ ನೀಡಿದರು. ಎಲ್.ಜಿ.ಹಾವನೂರ್ ಅವರ ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ರಚಿಸಿ, ಪ್ರಬಲ ಸಮುದಾಯಗಳ ನಡುವೆ ಹಿಂದುಳಿದ ವರ್ಗಗಳಿಗೂ ಅವಕಾಶ ಮತ್ತು ಸಮಾನತೆ ಒದಗಿಸುವ ಸಂಕಲ್ಪ ಮಾಡಿದರು. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಿದ ಹೆಗ್ಗಳಿಕೆ ಸಹ ಅವರದೇ. ಅದೇ ರೀತಿ ಯುವಜನರ ಶಕ್ತಿಯಾಗಿದ್ದ ರಾಜೀವ್ ಗಾಂಧಿ ಡಿಜಿಟಲ್ ಇಂಡಿಯಾದ ಪರಿಕಲ್ಪನೆಯನ್ನು ಜಾರಿಗೆ ತಂದರು. ಆರಂಭಿಕ ಕಾಲಟ್ಟದಲ್ಲಿ ದೂರ ಸಂಪರ್ಕ ಕ್ರಾಂತಿಗೆ ಮುನ್ನುಡಿ ಬರೆದ ಅವರು, ಮತದಾನದ ಹಕ್ಕು ವಯೋಮಿತಿಯನ್ನು 18 ವರ್ಷಕ್ಕೆ ಇಳಿಸುವ ಮೂಲಕ ಯುವಶಕ್ತಿಯ ಪ್ರೇರಕರಾದರು ಎಂದು ಪ್ರಾಧ್ಯಾಪಕ ಕೆ.ಆರ್.ರವಿಕಿರಣ್ ತಿಳಿಸಿದರು. ಸದ್ಭಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಲಾಯಿತು.