ಅಂಬೇಡ್ಕರ್ ನಮಗೆ ಆದರ್ಶ ಎಂದು ಹೇಳುತ್ತ, ಅಂಬೇಡ್ಕರ್ ಅವರ ಪ್ರಗತಿಪರ ವಿಚಾರ, ಸಿದ್ಧಾಂತದ ವಿರುದ್ದವಾಗಿ ನಡೆಯುತ್ತಿರುವ ವಿದ್ಯಮಾನಗಳು ತಲ್ಲಣವುಂಟುಮಾಡುತ್ತಿವೆ. ವಿಮೋಚನೆಯ ದಿಕ್ಕುಗಳನ್ನು ತೋರುವಂತಹ ವಿಚಾರಧಾರೆಗಳೇ ಇಲ್ಲಿ ಮುಖ್ಯವೆನಿಸುತ್ತವೆ. ಗಾಂಧಿ-ಅಂಬೇಡ್ಕರ್ ವಿಚಾರಧಾರೆಗಳೇ ವರ್ತಮಾನದ ದಿಕ್ಕು-ದೆಸೆಗಳಾಗಬೇಕಿದೆ ಎಂಬ ಮೌಲಿಕ ವಿಚಾರಗಳು ಈ ಪ್ರೊ.ಪೋತೆ ಕೃತಿಗಳಲ್ಲಿ ಮೂಡಿಬಂದಿವೆ. ಪ್ರತಿಮೆ, ರೂಪಕಗಳನ್ನು ಕಲಾತ್ಮಕವಾಗಿ ವಿವೇಚನೆಯಿಂದ ದುಡಿಸಿಕೊಂಡಿದ್ದಾರೆ. ಜ್ಯೋತಿಬಾ ಫುಲೆ-ಸಾವಿತ್ರಿಬಾಯಿ ಫುಲೆ, ಶಾಹೂ-ನಾಲ್ವಡಿ, ಅಂಬೇಡ್ಕರ್ ಅವರ ಶಿಕ್ಷಣ ಕುರಿತಾದ ಚಿಂತನೆಗಳು ಶೂದ್ರ-ಅತಿಶೂದ್ರರಿಗೆ ಶಕ್ತಿಯೆಂಬುದು ಪೋತೆಯವರ ಸಾಹಿತ್ಯದಲ್ಲಿ ಹೆಪ್ಪುಗಟ್ಟಿದೆ. ಅವ್ಯಾಜ್ಯ ಅಂತ-ಕರಣದ ಮೂಲಕ ಅನ್ಯಾಯ, ಅಸಮಾನತೆ, ಅವ್ಯವಸ್ಥೆ ಪ್ರಶ್ನಿಸುವ ಚಿಕಿತ್ಸಕ ಮನೋಭಾವ ವ್ಯಕ್ತಗೊಂಡಿದೆ ಎಂದು ಪ್ರತಿಪಾದಿಸಿದರು.