ಮಾಜಿ ಪ್ರಧಾನಮಂತ್ರಿ ಎಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರ ಅಗಲಿಕೆಯನ್ನೂ ಉಲ್ಲೇಖಿಸಿದ ಮುಖ್ಯಮಂತ್ರಿ, ಒಂದು ಕುಟುಂಬದ ದುಃಖವು ಕೇವಲ ಆ ಕುಟುಂಬದ್ದಲ್ಲ, ಸಮಾಜದ ನೋವೂ ಹೌದು ಎಂಬ ಭಾವನೆಯನ್ನು ವ್ಯಕ್ತಪಡಿಸಿದರು. ರಾಜಕೀಯ ಭಿನ್ನಾಭಿಪ್ರಾಯಗಳಾಚೆಗೆ ಮಾನವೀಯ ಸಂಬಂಧಗಳು ದೊಡ್ಡವು ಎಂಬ ಸಂದೇಶ ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಮೂಡಿಬಂತು. ಸದನದಲ್ಲಿ ಮಾತನಾಡಿದ ಡಿಸಿಎಂ ಡಾ.ಜಿ.ಪರಮೇಶ್ವರ, ಸಚಿವರಾದ ಬಾಲಕೃಷ್ಣ, ಕೆ.ಎಂ.ಶಿವಲಿಂಗೇಗೌಡ ಅವರಿಂದ ಹಿಡಿದು ವಿಪಕ್ಷ ನಾಯಕ ಅಶೋಕ್, ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್‌ನ ಜಿ.ಟಿ.ದೇವೇಗೌಡರ ತನಕ ಮಾತನಾಡಿದವರೆಲ್ಲರೂ ಚೆನ್ನಮ್ಮ ಅವರೊಂದಿಗಿನ ಒಡನಾಟ, ಮನೆಯಲ್ಲಿ ನೀಡಿದ ಆತಿಥ್ಯ, ಕಜ್ಜಾಯ ತಿಂದ ಸವಿನೆನಪು ಮೆಲುಕು ಹಾಕಿದ್ದಲ್ಲದೆ, ರಾಜಕೀಯ ಹೊರತಾದ ಭಾವನೆಗಳನ್ನು ಹೊಂದಿದ ನಿಜವಾದ ಅನ್ನಪೂರ್ಣೆ ಎಂದು ಗುಣಗಾನ ಮಾಡಿದರು.