

ಪ್ರಮುಖ ಮುಖ್ಯಾಂಶಗಳು
ಶ್ರೀ ಸಿದ್ಧೇಶ್ವರ ಸಂಸ್ಥೆಯಿಂದ ಖಾಸಗಿ ವೈದ್ಯಕೀಯ ಕಾಲೇಜ್ ಸ್ಥಾಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. 2028 ಅಷ್ಟರಲ್ಲಿ ಮೊದಲ ಬ್ಯಾಚ್ ಆರಂಭಿಸುವ ನಿಟ್ಟಿನಲ್ಲಿ ತಯಾರಿ ಭರದಿಂದ ಸಾಗಿದ್ದು, ಖಾಸಗಿ ವೈದ್ಯಕೀಯ ಕಾಲೇಜಿಗೆ ಬೇಕಾದ ಅಗತ್ಯ ಸೌಲಭ್ಯ, ಆಸ್ಪತ್ರೆ ಎಲ್ಲವೂ ಲಭ್ಯವಿವೆ. ಹೆಚ್ಚುವರಿಯಾಗಿ ಎಲ್.ಎಚ್. ಬಿದರಿ ಅವರ ಆಸ್ಪತ್ರೆ ಸಹ ನಮಗೆ ಪೂರಕ ಸೇವೆ ಒದಗಿಸುವ ನಿಟ್ಟಿನಲ್ಲಿ ಒಡಂಬಡಿಕೆ ಮಾಡಿಕೊಂಡಿದೆ. ಹೀಗಾಗಿ, ಶೀಘ್ರದಲ್ಲೇ ವೈದ್ಯಕೀಯ ಕಾಲೇಜ್ ಆರಂಭಿಸಲಾಗುವುದು ಎಂದು ಯತ್ನಾಳ ಘೋಷಿಸಿದರು. ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸರ್ಕಾರ ಮಾಡಲ್ಲ. ಪಿಪಿಪಿ ಮಾದರಿಯಿಂದ ನಮಗೆ ಲಾಭ ಇಲ್ಲ. ಆದರೂ, ಉದ್ದೇಶ ಪೂರ್ವಕವಾಗಿ ಅಪಪ್ರಚಾರ ಮಾಡಲಾಯಿತು. ನಮ್ಮದೇ ಸ್ವಂತ ಕಾಲೇಜು ಮಾಡಿದರೆ, ನಮಗೆ ಹೆಚ್ಚು ಅನುಕೂಲವಾಗಲಿದ್ದು, ಪಿಪಿಪಿ ಮಾದರಿಯಾದರೆ ಸರ್ಕಾರ ಹೇಳಿದಂತೆ ನಾವು ಕೇಳಬೇಕಾಗುತ್ತದೆ. ಹೀಗಾಗಿ 2028ಕ್ಕೆ ಮೊದಲ ಬ್ಯಾಚ್ ಆರಂಭಿಸಲು ಉದ್ದೇಶಿಸಲಾಗಿದೆ. ಪ್ರಸ್ತುತ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು. 500 ಕೋಟಿ ರೂ. ವೆಚ್ಚದಲ್ಲಿ ಎಲ್ಲ ಸೌಲಭ್ಯಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ಬಸನಗೌಡ ಪಾಟೀಲ ಯತ್ನಾಳ ವಿವರಿಸಿದರು.
ಸಾಮಾಜಿಕ ಸೇವೆ ಸಹ ಗಮನದಲ್ಲಿರಿಸಿಕೊಂಡು ಹಲವು ರೀತಿಯ ಸೌಲಭ್ಯಗಳನ್ನು ಆಸ್ಪತ್ರೆಯಿಂದ ಒದಗಿಸಲಾಗುತ್ತಿದೆ. ಶ್ರೀ ಸಿದ್ಧೇಶ್ವರ ಲೋಕ ಕಲ್ಯಾಣ ಟ್ರಸ್ಟ್ ಸಹಯೋಗದಲ್ಲಿ ಲಕ್ಷ್ಮೀಪುತ್ರಿ ಸುರಕ್ಷಾ ಯೋಜನೆಯನ್ನು ಆಸ್ಪತ್ರೆಯಲ್ಲಿ ಅನುಷ್ಠಾನಗೊಳಿಸಿದ್ದು, ಹೆಣ್ಣು ಮಗು ಜನಿಸಿದವರಿಗೆ ಉಚಿತ ಆಸ್ಪತ್ರೆ ಸೇವೆಗಳು, ಅಗತ್ಯ ಔಷಧಗಳು ಸೇರಿ ವಿವಿಧ ತಪಾಸಣೆಗಳನ್ನು ಸಹ ಉಚಿತವಾಗಿ ಕೈಗೊಳ್ಳಲಾಗುತ್ತಿದೆ ಎಂದರು.