ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ ಉದ್ಘಾಟಿಸಿದರು. ಅಣ್ಣೇಶ್ವರ ಗ್ರಾಪಂ ಅಧ್ಯಕ್ಷೆ ಉಮಾ ಜಿ. ಮುನಿರಾಜು, ಉಪಾಧ್ಯಕ್ಷ ಎನ್.ಮುನಿರಾಜಪ್ಪ, ಸದಸ್ಯರಾದ ಎ.ಚಂದ್ರಶೇಖರ್, ಎನ್.ಮಂಜುಳಾ, ವೆಂಕಟೇಶ್ ಇದ್ದರು.
ದೇವನಹಳ್ಳಿ : ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಮೂಲಕ ದೇಶಕ್ಕೆ ಮಾದರಿಯಾಗಿದೆ ಎಂದು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಸಿ.ಜಗನ್ನಾಥ್ ಹೇಳಿದರು.
ದೇವನಹಳ್ಳಿ ತಾಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಹಮ್ಮಿಕೊಂಡಿದ್ದ ಗ್ಯಾರಂಟಿ ಯೋಜನೆಗಳ ಕುಂದುಕೊರತೆ ಸಭೆ ಹಾಗೂ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಅನೇಕ ಟೀಕೆಗಳು ಎದುರಾದವು. ಆದರೆ, ಕಾಂಗ್ರೆಸ್ ಯಾವುದಕ್ಕೂ ಕಿವಿಗೊಡದೆ ಯೋಜನೆ ಜಾರಿಗೊಳಿಸಿ ಬಡವರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿ, ಸಮಾಜದ ಮುಖ್ಯವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದೆ ಎಂದರು.
ತಾಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಾಥ್ಗೌಡ ಮಾತನಾಡಿ, ಅಧಿಕಾರಿಗಳು ಜನಸಾಮಾನ್ಯರಿಗೆ ಯೋಜನೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಯೋಜನೆಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಶೀಘ್ರ ಸರಿಪಡಿಸಲಾಗುವುದು. ಪ್ರತಿಯೊಬ್ಬರಿಗೂ ಯೇಜನೆ ಲಾಭ ಸಿಗುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಯೋಜನೆಗಳ ಸದ್ಬಳಕೆಯಾಗಬೇಕು ಹಾಗೂ ಸೌಲಭ್ಯ ವಂಚಿತರು ಯೋಜನಾ ಸೌಲಭ್ಯ ಪಡೆಯಲು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಮಕ್ಕಳ ಗ್ರಾಮಸಭೆಯಲ್ಲಿ ಹಲವು ಸಮಸ್ಯೆಗಳು ಅನಾವರಣಗೊಂಡವು. ಯರ್ತಿಗಾನಹಳ್ಳಿ ಶಾಲೆ ಸೋರುವುದು ಸೇರಿ ಹಲವು ಶಾಲೆಗಳ ಕುಂದುಕೊರತೆಗಳ ಬಗ್ಗೆ ಮಕ್ಕಳು ಧ್ವನಿ ಎತ್ತಿದರು. ಸಮಸ್ಯೆ ಆಲಿಸಿದ ಪಿಡಿಒ ಗಂಗರಾಜು ಶಾಲೆ ಮೂಲ ಸಮಸ್ಯೆಗಳನ್ನು ಗ್ರಾಪಂನಿಂದ ಬಗೆಹರಿಸುವುದಾಗಿ ಭರವಸೆ ನೀಡಿದರು.
ರುಕ್ಮಿಣಮ್ಮ, ಮುನಿಲಕ್ಷ$್ಮಮ್ಮ, ನಾರಾಯಣಸ್ವಾಮಿ, ಅಶೋಕ್, ವೇಣುಗೋಪಾಲ್, ಮುಕುಂದ, ವಾಣಿಶ್ರೀ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಎಸ್.ಗಂಗರಾಜು, ಕಾರ್ಯದರ್ಶಿ ಎಸ್.ಕೃಷ್ಣಮೂರ್ತಿ, ದ್ವೀತಿಯ ದರ್ಜೆ ಲೆಕ್ಕ ಸಹಾಯಕಿ ಎಂ. ನಂದಿನಿ ಇದ್ದರು.