ಜೋಕರಗಳ ಲೋಕಕ್ಕೆ ಕಲ್ಯಾಣದ ನೆಲ ಸಾಕ್ಷಿ

ಕಲಬುರಗಿ ರಂಗಾಯಣದಲ್ಲಿ ನಾಟಕೋತ್ಸವದ ಅಂಗವಾಗಿ ಮಂಗಳವಾರ ನಡೆದ ಜಾಬ್​ ಲೆಸ್​ ಜಾಬ್​ ಮೌನ ನಾಟಕದ ಒಂದು ಮನಮೋಹಕ ದೃಶ್ಯ.
ಕಲಬುರಗಿ ರಂಗಾಯಣದಲ್ಲಿ ನಾಟಕೋತ್ಸವದ ಅಂಗವಾಗಿ ಮಂಗಳವಾರ ನಡೆದ ಜಾಬ್​ ಲೆಸ್​ ಜಾಬ್​ ಮೌನ ನಾಟಕದ ಒಂದು ಮನಮೋಹಕ ದೃಶ್ಯ.
Published on

ಪ್ರಮುಖ ಮುಖ್ಯಾಂಶಗಳು

  • ಮಕ್ಕಳಿಗಾಗಿ ಮೌನ ನಾಟಕದ ರಂಗಿನಾಟ
ಕಲಬುರಗಿ: ನಗರದ ರಂಗಾಯಣದಲ್ಲಿ ನಾಟಕೋತ್ಸವದ ಅಂಗವಾಗಿ ಜಾಬ್​ ಲೆಸ್​ ಜಾಬ್​ ಎಂಬ ಮಾತಿಲ್ಲದ ಮೌನ ನಾಟಕ ಪ್ರದರ್ಶನ ಮಂಗಳವಾರ ಯಶಸ್ವಿಯಾಗಿ ನಡೆಯಿತು.
ಈ ನಾಟಕವನ್ನು ಮುಂಬೈನ ರೆಡ್​ ಥ್ರೆಡ್​ ಎಂಟರ್​ಟೈನ್​ಮೆಂಟ್​ ತಂಡವು ನಿರ್ಮಿಸಿದ್ದು, ಸಾಗರ ಭೋಜಿರ್​ ಮುತ್ತು ಶ್ರೀರಾಮ ಚೌಧರಿ ಪ್ರದರ್ಶನ ಮಾಡಿದ್ದಾರೆ.
ಜಾಬ್​ ಲೆಸ್​ ಜಾಬ್​ ನಾಟಕವು ಕೇವಲ ಮನರಂಜನೆಯಲ್ಲ, ಅದು ಮನುಷ್ಯನ ಅಂತರಾಳದ ಮುಗ್ಧತೆ ಬಡಿತಗೊಳಿಸುವ ಒಂದು ಭಾವನಾತ್ಮಕ ಪಯಣ. ಈ ನಾಟಕಕ್ಕೆ ಯಾವುದೇ ರ್ನಿದಿಷ್ಟ ಭಾಷೆಯ ಹಂಗಿಲ್ಲ. ಮಾತುಗಳಿಲ್ಲದೆಯೇ ಕೇವಲ ಶಾರೀರಿಕ ಅಭಿನಯ ಮುಖಭಾವ ಮತ್ತು ಆಂಗಿಕ ಚಲನೆಗಳ ಮೂಲಕ ಕಥೆ ಹೇಳಲಾಗುತ್ತದೆ. ಮಕ್ಕಳಲ್ಲಿ ರಂಗಭೂಮಿ ಕುರಿತು ಆಸಕ್ತಿ ಮೂಡಿಸಲು, ಅವರಿಗೆ ಮನರಂಜನೆಯ ಜತೆಗೆ ಜೀವನದ ಮೌಲ್ಯ ತಿಳಿಸಿಕೊಡುವುದು ಈ ಪ್ರದರ್ಶನದ ಆಶಯ.
ಮಾನವೀಯ ಸಂಬಂಧಗಳ ಮಾಸುತ್ತಲಿರುವ ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಜೊತೆಯಾಗಿ ನಗುವುದು ಮತ್ತು ಸಂತೋಷ ಹಂಚಿಕೊಳ್ಳುವುದರಲ್ಲೇ ನಿಜವಾದ ಸುಖವಿದೆ ಎಂಬ ಸಂದೇಶವನ್ನು ಈ ನಾಟಕ ಸಾರುತ್ತದೆ. ಇಬ್ಬರು ಜೋಕರ್​ಗಳ ಸುತ್ತ ಈ ಕಥೆ ಸಾಗುತ್ತದೆ. ಕೇವಲ ಒಂದು ಪತ್ರದಿಂದ ಇಬ್ಬರ ನಡುವೆ ಶುರುವಾಗುವ ತಮಾಷೆಯ ಜಗಳಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದವು.
ಈ ಕಾಲ್ಪನಿಕ ಲೋಕದಲ್ಲಿ ಪ್ರತಿಯೊಂದು ವಸ್ತುವೂ ಮ್ಯಾಜಿಕ್​ ಮತ್ತು ಕುತೂಹಲದಿಂದ ಕೂಡಿದ್ದು, ಮುಂದೇನು ಸಂಭವಿಸಬಹುದು ಎಂಬ ಅಚ್ಚರಿಯೇ ಈ ನಾಟಕದ ಜೀವಾಳ. ಜೋಕರ್​ಗಳು ಅಥವಾ ಕ್ಲೌನ್​ ಪಾತ್ರಗಳು ಲೋಕದ ದೃಷ್ಟಿಯಲ್ಲಿ ದಡ್ಡರಂತೆ ಕಂಡರೂ, ಅವರಲ್ಲಿನ ಮುಗ್ಧತೆ ಮತ್ತು ನಗಿಸುವ ಗುಣವು ಕಠಿಣ ಮನಸ್ಸನ್ನೂ ಕರಗಿಸುವ ಶಕ್ತಿ ಹೊಂದಿದೆ. ಸಣ್ಣ ಪುಟ್ಟ ವಿಷಯಗಳಿಗೆ ಕಿತ್ತಾಡುವುದು ಮತ್ತು ಮರುಕ್ಷಣವೇ ಒಂದಾಗುವ ಅವರ ಗುಣ ಮಕ್ಕಳ ಸಹಜ ಸ್ವಭಾವ ನೆನಪಿಸುತ್ತದೆ.
ಈ ನಾಟಕವು ಸಂತೋಷ ಎಂಬುದು ದೊಡ್ಡ ಸಾಧನೆಗಳಲ್ಲಿ ಇಲ್ಲ, ಬದಲಿಗೆ ಪರಸ್ಪರರ ಜತೆಯಲ್ಲಿ ನಗುವ ಸಣ್ಣ ಕ್ಷಣಗಳಲ್ಲಿದೆ ಎಂಬ ಸುಂದರ ಭಾವನೆ ಪ್ರೇಕ್ಷಕರಲ್ಲಿ ಬಿತ್ತುತ್ತದೆ. ಇದು ಮಕ್ಕಳಿಂದ ಹಿಡಿದು ಹಿರಿಯರವರೆಗೆ ಸುಲಭವಾಗಿ ಅರ್ಥವಾಗುವಂತೆ ಮತ್ತು ನೇರವಾಗಿ ಹೃದಯಕ್ಕೆ ತಲುಪುವಂತೆ ವಿನ್ಯಾಸಗೊಳಿಸಲಾಗಿದೆ.
ರಂಗಾಯಣದ ತಾಂತ್ರಿಕ ಸಿಬ್ಬಂದಿ ರಾಜಕುಮಾರ ಎಸ್​.ಕೆ., ಶ್ರೀನಿವಾಸ ದೋರನಳ್ಳಿ ಸೇರಿ ವಿವಿಧ ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net