ಕನಕಾಂಬರ ಹೂವಿಗೆ ಮದಿರೆಯ ಕಿಕ್​

ಕನಕಾಂಬರ
ಕನಕಾಂಬರ
Published on

| ಕೆ.ಕೆಂಚಪ್ಪ, ಮೊಳಕಾಲ್ಮೂರು

ಬೆಳೆಗಳ ರಕ್ಷಣೆ ಹಾಗೂ ಹೆಚ್ಚಿನ ಇಳುವರಿಗಾಗಿ ರೈತರು ಕೀಟನಾಶಕಗಳ ಜತೆಗೆ ಮಜ್ಜಿಗೆ, ನಿಂಬುರಸ, ಗೋಕೃಪಾಮೃತ ಸಿಂಪಡಿಸುವುದನ್ನು ಕೇಳಿದ್ದೇವೆ. ಆದರೆ ಮದ್ಯವನ್ನು ಕೀಟನಾಶಕದ ಜತೆಗೆ ಮಿಶ್ರಣ ಮಾಡಿ ಸಿಂಪಡಿಸಿ ಅಧಿಕ ಇಳುವರಿಯೊಂದಿಗೆ ಉತ್ಕೃಷ್ಟ ಕನಕಾಂಬರ ಬೆಳೆಯುತ್ತಿರುವ ಈ ಪ್ರಯೋಗ ಅಚ್ಚರಿ ಮೂಡಿಸಿದೆ.

ತಾಲೂಕಿನ ಅನೇಕ ಕನಕಾಂಬರ ಹೂವು ಬೆಳೆಗಾರರು ದುಬಾರಿ ಮೊತ್ತದ ಔಷಧಗಳನ್ನು ಸಿಂಪಡಿಸಿದರೂ ನಿರೀಕ್ಷಿತ ಬೆಳೆ ಬಂದಿರಲಿಲ್ಲ. ಒಮ್ಮೆ ಪ್ರಯೋಗ ಮಾಡಿ ನೋಡೋಣ ಎಂದು ಕೆಲ ರೈತರು ಡಿಕೆ ಡಬಲ್ ನೀಟ್ ವಿಸ್ಕಿ, ಹೈವಾರ್ಡ್ಸ್ ಅಥವಾ ಬೆಂಗಳೂರು ಸೇರಿ ಕಡಿಮೆ ದರದ ಒಂದು ಕ್ವಾರ್ಟರ್ ಮದ್ಯವನ್ನು ಔಷಧದ ಜತೆಗೆ 15 ಲೀಟರ್​ಗೆ ಮಿಶ್ರಣ ಮಾಡಿ ಸಿಂಪಡಿಸಿದ್ದಾರೆ. ಉತ್ತಮ ಇಳುವರಿ ಬಂದ ಹಿನ್ನೆಲೆಯಲ್ಲಿ ಬಾಯಿಂದ ಬಾಯಿಗೆ ಪ್ರಚಾರವಾಗಿ ಈಗ ಎಲ್ಲರೂ ಮದ್ಯ ಬಳಸುವ ಪ್ರಯೋಗಕ್ಕೆ ಮುಂದಾಗಿದ್ದಾರೆ. ಐದಾರು ತಿಂಗಳಿಂದ ಈ ಪ್ರಯೋಗ ನಡೆದಿದೆ.

ಕುಡಿತದ ಚಟ ಇಲ್ಲದವರೂ ಬಾರ್​ಗೆ ಹೋಗಿ 5-10 ಪ್ಯಾಕೇಟ್ ಮದ್ಯ ಖರೀದಿ ಮಾಡುತ್ತಿದ್ದಾರೆ. ಮದ್ಯದಂಗಡಿ ವ್ಯಾಪಾರಸ್ಥರು ನೀನ್ಯಾವಾಗಪ್ಪ ಕುಡಿಯೋದು ಕಲಿತೆ ಎಂದು ಕೇಳಿದರೆ, ನನಗಲ್ಲಪ್ಪ ಕನಕಾಂಬರ ಬೆಳೆಗೆ ಎನ್ನುವ ಕಾರಣ ನೀಡುತ್ತಿದ್ದಾರೆ ರೈತರು. ಅರ್ಧ ಎಕರೆ ಹೂವು ಬೆಳೆಗೆ 10 ಕ್ವಾರ್ಟರ್ ಬೇಕಾಗುತ್ತೆ. ಒಂದೆರಡು ಬಾರಿ ಸಿಂಪಡಿಸಿದರೆ ಸಾಕು. ಇದೊಂದು ಹೊಸ ಪ್ರಯೋಗ ಎಂದು ಖುಷಿಯಿಂದಲೇ ಹೇಳುತ್ತಾರೆ ರೈತರು. ಹೂವಿಗೆ ಮದ್ಯ ಸಿಂಪಡಿಸುವ ವಿಧಾನವನ್ನು ಯಾರು ಕಂಡು ಹಿಡಿದನೋ ಗೊತ್ತಿಲ್ಲ. ಹೂವಿಗೂ ಬಳಕೆಯಾದರೆ ಕಂಪನಿಗೂ ಡಿಮಾಂಡ್ ಬರುವ ಸಾಧ್ಯತೆ ಇದೆ. ಕೃಷಿಗೂ ಮದ್ಯ ಬಳಸುವ ಈ ಪ್ರಯೋಗ ಅಧ್ಯಯನ ವಿಷಯವಾಗಿದೆ.

"

ತರಹೇವಾರಿ ಬೆಳೆಗಳ ಕೀಟ ಬಾಧೆ ಹಾಗೂ ರೋಗ ನಿವಾರಣೆಗೆ ಹೊಸ ಹೊಸ ಔಷಧಗಳನ್ನು ಆವಿಷ್ಕರಿಸಿದರೂ ಹತೋಟಿಗೆ ಬರುತ್ತಿಲ್ಲ. ಮದ್ಯ ಮಿಶ್ರಣ ಮಾಡಿದರೆ ಉತ್ತಮ ಇಳುವರಿ ಬರುತ್ತದೆ ಎಂಬ ರೈತರ ಪ್ರಯೋಗ ಒಳ್ಳೆಯ ಬೆಳವಣಿಗೆಯಲ್ಲ. ಮದ್ಯದಲ್ಲಿ ಆಲ್ಕೋಹಾಲ್ ಬಿಟ್ಟರೆ ಬೇರೇನೂ ಇರುವುದಿಲ್ಲ. ಕನಕಾಂಬರ ಗಿಡಗಳ ಬೆಳವಣಿಗೆ ಕ್ರಮೇಣ ಕುಂಠಿತವಾಗಲಿವೆ. ಇದು ತಪ್ಪು ಕಲ್ಪನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net