ಬೋನಿಗೆ ಬಿದ್ದ ಹೆಣ್ಣು ಹುಲಿ

 ತಾಲೂಕಿನ ದೇಪಾಪುರ ಸಮೀಪ ಗುರುವಾರ ಬೋನಿಗೆ ಬಿದ್ದ ನಾಲ್ಕು ವರ್ಷದ ಹೆಣ್ಣುಹುಲಿ
ತಾಲೂಕಿನ ದೇಪಾಪುರ ಸಮೀಪ ಗುರುವಾರ ಬೋನಿಗೆ ಬಿದ್ದ ನಾಲ್ಕು ವರ್ಷದ ಹೆಣ್ಣುಹುಲಿ
Published on
ಗುಂಡ್ಲುಪೇಟೆ: ತಾಲೂಕಿನ ದೇಪಾಪುರ ಸಮೀಪ ಗುರುವಾರ ಬೋನಿಗೆ ಬಿದ್ದ ನಾಲ್ಕು ವರ್ಷದ ಹೆಣ್ಣುಹುಲಿಯನ್ನು ಅರಣ್ಯ ಇಲಾಖೆ ಮೈಸೂರಿನ ಮೃಗಾಲಯಕ್ಕೆ ಸುರಕ್ಷಿತವಾಗಿ ಕಳುಹಿಸಿದೆ.

ಇತ್ತೀಚೆಗೆ ಗ್ರಾಮದ ವೀರಭದ್ರಪ್ಪ ಅವರ ಜಮೀನಿನಲ್ಲಿ ಮೇಯುತ್ತಿದ್ದ ಹಸುವನ್ನು ಕೊಂದುಹಾಕಿದ್ದ ಹುಲಿ ಸೆರೆಗೆ ಅರಣ್ಯ ಇಲಾಖೆ ತುಮಕೂರು ಮಾದರಿಯ ಬೋನನ್ನು ಅಳವಡಿಸಿ ಒಳಗೆ ಕರುವನ್ನು ಕಟ್ಟಿಹಾಕಿತ್ತು. ಎಂದಿನಂತೆ ಅರಣ್ಯ ಸಿಬ್ಬಂದಿ ಕರುವಿಗೆ ಮೇವು ಹಾಗೂ ನೀರು ಸರಬರಾಜು ಮಾಡಲು ಹೋಗಿದ್ದಾಗ ಬೋನಿನಲ್ಲಿ ಹುಲಿ ಸೆರೆಯಾಗಿರುವುದು ಕಂಡುಬಂತು.

ಹುಲಿ ನೋಡಲು ಮುಗಿಬಿದ್ದ ಗ್ರಾಮಸ್ಥರು: ತಮ್ಮ ಗ್ರಾಮದಲ್ಲಿ ಹಲವು ಜಾನುವಾರುಗಳನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿ ನೋಡಲು ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಗಳ ಜನರು ಭಾರಿ ಸಂಖ್ಯೆಯಲ್ಲಿ ಆಗಮಿಸಿದರು. ಜನರು ಬೋನಿನ ಹತ್ತಿರ ಹೋಗಲು ಮುಂದಾಗುತ್ತಿದ್ದಂತೆ ಹುಲಿ ಜೋರಾಗಿ ಘರ್ಜಿಸುತ್ತಿತ್ತು. ಬಂಧನದಿಂದ ಪಾರಾಗಲು ಮೇಲೆ ಎಗರಿ ಕೆಳಗೆ ಬೀಳುತ್ತಿದ್ದ ಹುಲಿ ಎಲ್ಲಿ ಬೋನಿನಿಂದ ಹೊರಬರುತ್ತದೋ ಎಂಬ ಆತಂಕ ಸೃಷ್ಟಿಸಿತ್ತು. ಕೂಡಲೇ ಸ್ಥಳಕ್ಕೆ ಆಗಮಿಸಿದ ತೆರಕಣಾಂಬಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಕೆ.ಎಂ.ಮಹೇಶ್, ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಜನರು ಬೋನಿನ ಹತ್ತಿರ ಹೋಗದಂತೆ ನಿಯಂತ್ರಿಸಿದರು.

ಸ್ವಲ್ಪ ಹೊತ್ತಿಗೆ ಲಾರಿ ಹಾಗೂ ಹೆಚ್ಚಿನ ಸಿಬ್ಬಂದಿ ಜತೆಗೆ ಸ್ಥಳಕ್ಕಾಗಮಿಸಿದ ಬಂಡೀಪುರ ಹುಲಿ ಯೋಜನೆಯ ಕ್ಷೇತ್ರ ನಿರ್ದೇಶಕ ಹಾಗೂ ಪಶುವೈದ್ಯ ಡಾ.ಆದರ್ಶ್ ಹುಲಿಗೆ ಅರಿವಳಿಕೆ ನೀಡಿದರು. ನಂತರ ಪ್ರಜ್ಞೆ ಕಳೆದುಕೊಂಡ ಹುಲಿಯನ್ನು ಲಾರಿಯಲ್ಲಿದ್ದ ಬೋನಿಗೆ ಸ್ಥಳಾಂತರಿಸಲಾಯಿತು.

ತಮ್ಮ ಗ್ರಾಮದ ಹತ್ತಾರು ಜಾನುವಾರುಗಳನ್ನು ಬಲಿ ಪಡೆದ ಹುಲಿಯನ್ನು ತಮಗೆ ತೋರಿಸಬೇಕು ಎಂದು ಗ್ರಾಮಸ್ಥರು ಪಟ್ಟುಹಿಡಿದರು. ಸಾರ್ವಜನಿಕರ ಒತ್ತಾಯಕ್ಕೆ ಮಣಿದ ಅರಣ್ಯ ಇಲಾಖೆ ಒಬ್ಬೊಬ್ಬರಾಗಿ ಲಾರಿಯ ಮೇಲೆ ಹತ್ತಿ ಬೋನಿನೊಳಗಿದ್ದ ಹುಲಿಯನ್ನು ನೋಡಲು ಅವಕಾಶ ಮಾಡಿಕೊಟ್ಟರು. ಹುಲಿಯು ಆರೋಗ್ಯವಾಗಿದ್ದು ಇದನ್ನು ಮೈಸೂರಿನ ಮೃಗಾಲಯಕ್ಕೆ ಕಳಿಸಲಾಗಿದೆ. ಅದರ ಆರೋಗ್ಯ ಪರಿಶೀಲನೆ ನಂತರ ಅಧಿಕಾರಿಗಳು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಎಸ್.ಪ್ರಭಾಕರನ್ ವಿಜಯವಾಣಿಗೆ ತಿಳಿಸಿದರು.

ಇದೇ ಭಾಗದಲ್ಲಿ ಇನ್ನೂ ಎರಡು ಹುಲಿಗಳಿದ್ದು ಅವುಗಳನ್ನು ಸಹ ಸೆರೆಹಿಡಿಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಕಳೆದ ವಾರ ಬೊಮ್ಮಲಾಪುರದಲ್ಲಿ ಕಾರ್ಯಾಚರಣೆ ನಡೆಸಿ ಹುಲಿ ಸೆರೆಹಿಡಿದಿದ್ದರೂ ಮತ್ತೊಂದು ಅಲ್ಲಿಗೆ ಬಂದಿದೆ. ಅದನ್ನು ಸೆರೆಹಿಡಿಯಲು ಕ್ರಮಕೈಗೊಳ್ಳಿ ಎಂದು ವಡೆಯನಪುರ ಗ್ರಾಮದ ವಿ.ಎಸ್.ವಿಶ್ವಾಸ್ ಎಂಬುವರು ಪ್ರಭಾಕರನ್ ಅವರಿಗೆ ಮನವಿ ಮಾಡಿದರು.

ನಾವೇನೋ ಜನವಸತಿ ಪ್ರದೇಶಗಳಲ್ಲಿರುವ ಹುಲಿಗಳನ್ನು ಹಿಡಿಯಲು ಸಿದ್ಧ. ಆದರೆ ನೀರಾವರಿ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯಿತಿಗಳು ಕೆರೆಯಂಗಳ ಹಾಗೂ ಜಮೀನುಗಳಲ್ಲಿ ಬೆಳೆದಿರುವ ಪೊದೆಗಳನ್ನು ತೆರವು ಮಾಡಿದರೆ ಮಾತ್ರ ಹುಲಿಗಳು ಗ್ರಾಮಗಳ ಬಳಿ ಬರದಂತೆ ತಡೆಗಟ್ಟಬಹುದು. ಆದ್ದರಿಂದ ನೀವು ಸಹಾ ನಿಮ್ಮ ವ್ಯಾಪ್ತಿಯ ಗ್ರಾಮಪಂಚಾಯಿತಿಗಳ ಮೂಲಕ ಪೊದೆಗಳನ್ನು ತೆರವುಗೊಳಿಸಲು ಒತ್ತಾಯಿಸಿ ಎಂದು ಸಲಹೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net