ಫಾರ್ಚೂನರ್ ಕಾರು... ಕೈಯಲ್ಲಿ ಪೊರಕೆ! ಬಂಟ್ವಾಳದ ಸೇಸಪ್ಪನ ಬದುಕಿಗೆ ನೆಟ್ಟಿಗರ ಸಲಾಂ | Civil servant coming in Fortuner

ಫಾರ್ಚೂನರ್ ಕಾರಿನಲ್ಲಿ ಬಂದು ಕಸ ಗುಡಿಸುವ ಪೌರಕಾರ್ಮಿಕ
ಫಾರ್ಚೂನರ್ ಕಾರಿನಲ್ಲಿ ಬಂದು ಕಸ ಗುಡಿಸುವ ಪೌರಕಾರ್ಮಿಕ
Published on

ಪ್ರಮುಖ ಮುಖ್ಯಾಂಶಗಳು

  • ಫಾರ್ಚೂನರ್ ಕಾರಿನಲ್ಲಿ ಬಂದು ಕಸ ಗುಡಿಸುವ ಪೌರಕಾರ್ಮಿಕ
  • ಬಂಟ್ವಾಳದ ಸೇಸಪ್ಪನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್
  • ಯಾವ ಕೆಲಸವೂ ಕೀಳಲ್ಲ ಎನ್ನುವ ಪೌರಕಾರ್ಮಿಕ ಸೇಸಪ್ಪ
ದಕ್ಷಿಣ ಕನ್ನಡ: ಪೌರಕಾರ್ಮಿಕರೊಬ್ಬರು ಐಷಾರಾಮಿ ಫಾರ್ಚೂನರ್ ಕಾರಿನಲ್ಲಿ ಕಸ ಗುಡಿಸುತ್ತಾರೆ. ಅಂದರೆ ನೀವು ನಂಬುತ್ತಿರಾ? ಇದು ಬಂಟ್ವಾಳದ ಪೌರಕಾರ್ಮಿಕ ಸೇಸಪ್ಪ ಅವರ ದಿನಚರಿ. ಇದೀಗ ಅವರ ಬದುಕಿನ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮುಂಜಾನೆ ಫಾರ್ಚೂನರ್ ಕಾರಿನಲ್ಲಿ ಕೆಲಸಕ್ಕೆ ಬರುವ ಸೇಸಪ್ಪ ಕಾರನ್ನು ಸದ್ತೆ ಪಕ್ಕದಲ್ಲಿ ನಿಲ್ಲಿಸಿ, ಪೊರಕೆ ಹಿಡಿದು ತಮ್ಮ ಕಾಯಕವನ್ನು ಶುರುಮಾಡುತ್ತಾರೆ. ನಾವೂರು ಮೂಲದ ಸೇಸಪ್ಪ ಕೇವಲ 3ನೇ ತರಗತಿಯವರೆಗೆ ಓದಿದ್ದಾರೆ. 1996ರಲ್ಲಿ ದಿನಕ್ಕೆ ಕೇವಲ 50 ರೂಪಾಯಿ ಕೂಲಿಗೆ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿದ್ದರು. ಬದುಕಿನಲ್ಲಿ ಹಲವು ಕಷ್ಟಗಳನ್ನು ಎದುರಿಸಿದ್ದ ಅವರು ಒಂದು ಹಂತದಲ್ಲಿ ತಂದೆಯ ಅಂತ್ಯಕ್ರಿಯೆಗೂ ಹಣವಿಲ್ಲದಂತ ಪರಿಸ್ಥಿತಿಗೆ ಸಿಲುಕಿದ್ದರು. ಕುಡಿತದ ಚಟವೂ ಅವರನ್ನು ಕಾಡಿತ್ತು.

2005ರಲ್ಲಿ ಬದಲಾದ ಜೀವನ

2005ರಲ್ಲಿ ಅಂದಿನ ಬಂಟ್ವಾಳದ ಸಬ್‌ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ ಅವರ ಮಾರ್ಗದರ್ಶನ ಸೇಸಪ್ಪನ ಬಾಳಿಗೆ ಹೊಸ ತಿರುವು ನೀಡಿತು. ಕುಡಿತದ ಚಟದಿಂದ ಸಂಪೂರ್ಣ ಹೊರಬಂದು, ದುಡಿಮೆಯತ್ತ ಗಮನ ಹರಿಸಿದರು. ಬಳಿಕ ಅವರ ಪೌರಕಾರ್ಮಿಕ ಕೆಲಸವೂ ಖಾಯಂ ಆಯಿತು.
ಪೌರಕಾರ್ಮಿಕ ಕೆಲಸದ ಜೊತೆಗೆ ಹೈನುಗಾರಿಕೆ
ಸೇಸಪ್ಪ ಪೌರಕಾರ್ಮಿಕ ವೃತ್ತಿಯೊಂದನ್ನೇ ಅವಲಂಬಿಸಿಲ್ಲ. ಕೃಷಿ, ಹೈನುಗಾರಿಕೆ ಹಾಗೂ ಇತರ ಕೂಲಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಹೈನುಗಾರಿಕೆಯಿಂದಲೇ ತಿಂಗಳಿಗೆ ಸುಮಾರು 40 ಸಾವಿರದವರೆಗೆ ಆದಾಯ ಗಳಿಸುತ್ತಿದ್ದಾರೆ. ಅವರ ಕುಟುಂಬವು ಸಾಂಪ್ರದಾಯಿಕ ದೈವಾರಾಧನೆ ಸೇವೆಯನ್ನೂ ಮಾಡುತ್ತದೆ.

ಕಾರುಗಳೆಂದರೆ ಸೇಸಪ್ಪಗೆ ಎಲ್ಲಿಲ್ಲದ ಕ್ರೇಜ್

ಸೇಸಪ್ಪ ಅವರಿಗೆ ಮೊದಲಿನಿಂದಲೂ ಕಾರುಗಳ ಮೇಲೆ ವಿಶೇಷ ಪ್ರೀತಿ. ಅವರ ಬಳಿ ಮಾರುತಿ 800, ಆಲ್ಟೊ, ಓಮ್ನಿ, ಸ್ಕಾರ್ಪಿಯೋ, ರಿಟ್ಜ್ ಸೇರಿದಂತೆ ಹಲವು ಕಾರುಗಳಿದ್ದವು. ಇದೀಗ ಹಳೆಯ ಕಾರುಗಳನ್ನು ಮಾರಾಟ ಮಾಡಿ, ಸ್ವಲ್ಪ ಸಾಲ ಮಾಡಿ ಸೆಕೆಂಡ್‌ಹ್ಯಾಂಡ್ ಟೊಯೋಟಾ ಫಾರ್ಚೂನರ್ ಖರೀದಿಸಿದ್ದಾರೆ. ಆದರೆ ಕಾರು ಎಷ್ಟೇ ದುಬಾರಿಯಾಗಿದ್ದರೂ, ಅವರ ಕೆಲಸಕ್ಕೆ ಅದು ಅಡ್ಡಿಯಾಗಿಲ್ಲ. ಪ್ರತಿದಿನ ಬೆಳಗ್ಗೆ ಸುಮಾರು 5 ಗಂಟೆಗೆ ಫಾರ್ಚೂನರ್‌ನಲ್ಲಿ ಕೆಲಸದ ಸ್ಥಳಕ್ಕೆ ಬರುತ್ತಾರೆ. ಕಾರನ್ನು ಪಕ್ಕಕ್ಕೆ ನಿಲ್ಲಿಸಿ ಪೊರಕೆ ಹಿಡಿದು ರಸ್ತೆ ಸ್ವಚ್ಛಗೊಳಿಸುತ್ತಾರೆ.

ಯಾವ ಕೆಲಸವೂ ಕೀಳಲ್ಲ’ ಎನ್ನುವ ಸೇಸಪ್ಪ

ತಮ್ಮ ಕೆಲಸದ ಬಗ್ಗೆ ಹೆಮ್ಮೆಪಡುವ ಸೇಸಪ್ಪನ ಜೀವನದ ಸಂದೇಶ ಸರಳವಾಗಿದೆ. ‘ಯಾವ ಕೆಲಸವೂ ಕೀಳಲ್ಲ. ಪ್ರಾಮಾಣಿಕವಾಗಿ ದುಡಿದರೆ ಪ್ರತಿಯೊಂದು ಕೆಲಸಕ್ಕೂ ಗೌರವವಿದೆ’. ಐಷಾರಾಮಿ ಕಾರಿನಲ್ಲಿ ಬಂದು ಸಾಮಾನ್ಯ ಪೌರಕಾರ್ಮಿಕನಂತೆ ಕೆಲಸ ಮಾಡುವ ಸೇಸಪ್ಪ ಯಶೋಗಾದೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
ತನ್ನ ಬಳಿ ಐಷಾರಾಮಿ ಫಾರ್ಚೂನರ್ ಕಾರಿದ್ದರೂ, ಬದುಕಿನ ನಿಜವಾದ ‘ಸ್ಟೇಟಸ್’ ಹಣದಲ್ಲಲ್ಲ, ಪ್ರಾಮಾಣಿಕ ದುಡಿಮೆಯಲ್ಲಿದೆ ಎಂಬುದನ್ನು ಸೇಸಪ್ಪ ತೋರಿಸಿಕೊಟ್ಟಿದ್ದಾರೆ. ತಮ್ಮ ಕೆಲಸದ ಬಗ್ಗೆ ಕೀಳರಿಮೆ ಪಡುವವರಿಗೆ, ಯಾವುದೇ ಕೆಲಸವೂ ಚಿಕ್ಕದಲ್ಲ ಎಂಬುದನ್ನು ತಮ್ಮ ಬದುಕಿನ ಮೂಲಕವೇ ತಳಿಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net