ಮಕ್ಕಳಿಗೆ ವರದಾನ ಮುಕ್ತ ಶಾಲೆ

NIOS
NIOS
Published on
ವಿ. ಸ್ವಾಮಿನಾಥನ್
ನಾನಾ ಕಾರಣಗಳಿಂದ ಶಿಕ್ಷಣ ಮುಂದುವರಿಸಲು ಸಾಧ್ಯವಾಗದ ಮಕ್ಕಳಿಗೆ ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಲು ದಿನದ ಬಹುಪಾಲು ಸಮಯವನ್ನು ಮೈದಾನದಲ್ಲೇ ಕಳೆಯುವ ಉದಯೋನ್ಮುಖ ಪ್ರತಿಭೆಗಳ ಪಾಲಿಗೆ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ಮುಕ್ತ ಶಾಲಾ ವ್ಯವಸ್ಥೆಯು ಅಕ್ಷರಶಃ ಸಂಜೀವಿನಿ, ಕೇಂದ್ರ ಶಿಕ್ಷಣ ಸಚಿವಾಲಯದಡಿ ಬರುವ ಈ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಸಾಂಪ್ರದಾಯಿಕ ಶಾಲಾ ವ್ಯವಸ್ಥೆಗೆ ಅತ್ಯುತ್ತಮ ಪರ್ಯಾಯವಾಗಿ ಬೆಳೆದಿದೆ.
ಇತ್ತೀಚೆಗೆ 15 ವರ್ಷದ ವೈಭವ್ ಸೂರ್ಯವಂಶಿ ಮತ್ತು ನಿಕಿ ಪ್ರಸಾದ್ ಅವರಂತಹ ಯುವ ಕ್ರೀಡಾತಾರೆಗಳ ಯಶಸ್ಸು, ಈ ಮುಕ್ತ ಶಾಲಾ ಶಿಕ್ಷಣದ ಮಹತ್ವವನ್ನು ಇಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಟ್ಟಿದೆ. ಕ್ರೀಡಾ ಕಟ್ಟುಪಾಡುಗಳ ನಡುವೆ ಓದು ಮತ್ತು ತರಬೇತಿಯನ್ನು ಸರಿದೂಗಿಸಲು ಈ ವ್ಯವಸ್ಥೆ ಭದ್ರವಾದ ವೇದಿಕೆ.
ಗ್ರಾಮೀಣ ಭಾಗದವರು, ಆರ್ಥಿಕವಾಗಿ ಹಿಂದುಳಿದವರು, ಅರ್ಧಕ್ಕೆ ಶಿಕ್ಷಣ ಮೊಟಕುಗೊಳಿಸಿದವರು ಹಾಗೂ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಪ್ರೌಢಶಾಲೆ ಹಾಗೂ ಪಿಯುಸಿ ಶಿಕ್ಷಣಪಡೆಯಲು ಸಮಾನ ಅವಕಾಶ ಕಲ್ಪಿಸುವುದು ಈ ಸಂಸ್ಥೆಯ ಮುಖ್ಯ ಉದ್ದೇಶ ಎನ್ನುತ್ತಾರೆ ಎನ್‌ಐಒಎಸ್ ಕರ್ನಾಟಕ ಪ್ರಾದೇಶಿಕ ನಿರ್ದೇಶಕ ವಿ. ಸ್ವಾಮಿನಾಥನ್. ಇದರ ಪಠ್ಯಕ್ರಮ 2025ರ ನ್ಯಾಷನಲ್ ಕರಿಕ್ಯುಲಮ್ ಪ್ರೇಮ್‌ವರ್ಕ್ (ಎನ್‌ಸಿಎಫ್) ಅಡಿಯಲ್ಲಿ ರೂಪುಗೊಂಡಿದ್ದು, ಸಿಬಿಎಸ್‌ಇಯ 9 ಮತ್ತು 10ನೇ ತರಗತಿಯ ಇಯ 11 ಮತ್ತು 12ನೇ ತರಗತಿಯ ಪಠ್ಯಕ್ರಮ ಇಲ್ಲಿ 12ನೇ ತರಗತಿಯಲ್ಲಿದೆ. 10ನೇ ತರಗತಿಗೆ ಕನಿಷ್ಠ 14 ವರ್ಷ ಪೂರೈಸಿದ ಮತ್ತು 12ನೇ ತರಗತಿಗೆ 15 ವರ್ಷ ಪೂರೈಸಿದವರು ಇಲ್ಲಿ ಪ್ರವೇಶ ಪಡೆಯಬಹುದು. ಒಮ್ಮೆ ದಾಖಲಾತಿ ಪಡೆದರೆ ಅದು 5 ವರ್ಷಗಳ ಕಾಲ ಮಾನ್ಯತೆ ಹೊಂದಿರುತ್ತದೆ. ಉತ್ತೀರ್ಣರಾಗಲು ಒಟ್ಟು 9 ಬಾರಿ ಪರೀಕ್ಷೆ ಬರೆಯುವ ಪ್ಲೆಕ್ಸಿಬಿಲಿಟಿ ಇರುತ್ತದೆ.
ದಾಖಲಾತಿ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್ ಆಗಿದ್ದು, ವರ್ಷದಲ್ಲಿ ಎರಡು ಅವಧಿಗಳಲ್ಲಿ www.nios.ac.in ಮೂಲಕ ಅರ್ಜಿ ಸಲ್ಲಿಸಬಹುದು. ಸ್ವಯಂಕಲಿಕೆಗೆ ಪೂರಕವಾದ ಇಲ್ಲಿನ ಸರಳ ಪಠ್ಯಪುಸ್ತಕಗಳು ಕನ್ನಡದಲ್ಲೂ ಲಭ್ಯವಿದ್ದು, ವಿದ್ಯಾರ್ಥಿಗಳ ಮನೆ ವಿಳಾಸಕ್ಕೆ ಉಚಿತವಾಗಿ ತಲುಪಿಸಲಾಗುತ್ತದೆ. ಇದರೊಂದಿಗೆ ವಾರಾಂತ್ಯದ ಸಂಪರ್ಕ ತರಗತಿಗಳು, ಪ್ರಾಯೋಗಿಕ ತರಬೇತಿ ಹಾಗೂ 'ಸ್ವಯಂ ಪ್ರಭಾ' ಟಿವಿ ಚಾನೆಲ್ ಮತ್ತು ಯೂಟ್ಯೂಬ್ ಲೈವ್ ಮೂಲಕ ಡಿಜಿಟಲ್ ಮಾರ್ಗದರ್ಶನ ನೀಡಲಾಗುತ್ತದೆ. ವಿಶೇಷವಾಗಿ ದೈಹಿಕ, ಬುದ್ದಿಮಾಂದ್ಯ ಹಾಗೂ ಕಲಿಕಾ ನ್ಯೂನತೆ ಹೊಂದಿರುವ ಮಕ್ಕಳಿಗೆ ಉಚಿತ ಸೈಬ್ (ಬರಹಗಾರರ) ವ್ಯವಸ್ಥೆ, ಕಂಪ್ಯೂಟರ್ ಬಳಕೆ ಅಥವಾ ಪೋಷಕರೇ ಪರೀಕ್ಷೆ ಬರೆಯುವ ವಿಶೇಷ ರಿಯಾಯಿತಿಗಳನ್ನು ಇಲ್ಲಿ ನೀಡಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಗಳ ಪ್ರಕಾರ ಎನ್‌ಐಒಎಸ್ ಪ್ರಮಾಣಪತ್ರ ಸಂಪೂರ್ಣ ಮಾನ್ಯತೆ ಪಡೆದಿದ್ದು, ಸರ್ಕಾರಿ ಉದ್ಯೋಗಗಳು, ಐಟಿ ವಲಯ, ಸಶಸ್ತ್ರ ಪಡೆಗಳ ನೇಮಕಾತಿ ಹಾಗೂ ಉನ್ನತ ವ್ಯಾಸಂಗದಲ್ಲಿ ಇತರ ರೆಗ್ಯುಲರ್ ಮಂಡಳಿಗಳ ವಿದ್ಯಾರ್ಥಿಗಳಂತೆಯೇ ಸಮಾನ ಮಾನ್ಯತೆ ಹೊಂದಿದೆ. ಇತ್ತೀಚೆಗೆ ಕರ್ನಾಟಕ ಸರ್ಕಾರವೂ ಇದಕ್ಕೆ ಅಧಿಕೃತ ಮಾನ್ಯತೆ ನೀಡಿದೆ.
ಕರ್ನಾಟಕದಲ್ಲಿ ಕಳೆದ ಮೂರೂವರೆ ವರ್ಷಗಳಲ್ಲಿ ಎನ್‌ಐಒಎಸ್ ವ್ಯಾಪಕ ಜನಪ್ರಿಯತೆ ಗಳಿಸಿದೆ. ರಾಜ್ಯ ಸರ್ಕಾರದ ಪಂಚಾಯತ್ ರಾಜ್ ಇಲಾಖೆ ಸೇರಿದಂತೆ ಮೂರು ಪ್ರಮುಖ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಹಯೋಗದಿಂದ ದಾಖಲಾತಿಯಲ್ಲಿ ಶೇಕಡಾ 120ರಷ್ಟು ಗಮನಾರ್ಹ ಪ್ರಗತಿ ಕಂಡುಬಂದಿದೆ. ಪ್ರಸ್ತುತ ಸಾಲಿನಲ್ಲಿ ದಾಖಲಾತಿ ಸಂಖ್ಯೆ 5ರಿಂದ 6 ಸಾವಿರಕ್ಕೆ ತಲುಪುವ ನಿರೀಕ್ಷೆಯಿದೆ. ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದಿರುವ ಯಾದಗಿರಿ ಜಿಲ್ಲೆಯಲ್ಲಿ ಈಗಾಗಲೇ ಹೊಸ ಕೇಂದ್ರವನ್ನು ತೆರೆಯಲಾಗಿದ್ದು, 'ಎನ್‌ಐಒಎಸ್ ಮಿತ್ರ' ಯೋಜನೆ ಹಾಗೂ ವಿಶೇಷ ಕ್ಯಾಂಪೇನ್ ಮೂಲಕ ದಾಖಲಾತಿ ಹೆಚ್ಚಿಸಲು ಸಂಸ್ಥೆ ಶ್ರಮಿಸುತ್ತಿದೆ. ಆರಂಭದಲ್ಲಿ 1979ರಲ್ಲಿ ಸಿಬಿಎಸ್‌ಇ ಅಡಿಯಲ್ಲಿ ಆರಂಭವಾದ ಈ ಯೋಜನೆ, ಇಂದು ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾಗುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net