ಮಾಣೆಕ್ ಷಾ ಪರೇಡ್‌ನಲ್ಲಿ 77ನೇ ಗಣರಾಜ್ಯೋತ್ಸವ: ಶಿಸ್ತುಬದ್ಧ ಪಥ ಸಂಚಲನ, ಪೊಲೀಸ್ ಬ್ಯಾಂಡ್‌ನ ಸಂಗೀತದ ಇಂಪು
ಫೀಲ್ಡ್ ಮಾರ್ಷಲ್ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಸೇನೆ, ಕೆಎಸ್‌ಆರ್‌ಪಿ, ಪೊಲೀಸ್, ಸ್ಕೌಟ್ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳ ಸೇರಿ ತಮಿಳುನಾಡು ಪೊಲೀಸ್ ತಂಡ ಸೇರಿ ವಿವಿಧ ತಂಡಗಳು ಪಥಸಂಚಲದ
ಗ್ರಾಮೀಣ ಸೊಗಡನ್ನು ಸಾರುವ ಸಂಕ್ರಾಂತಿ ಹಬ್ಬದ ಆಚರಣೆ
ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತ ಎರಡೂ ನುಡಿಸುವುದಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕ ರಾಜ್ಯ ಪೊಲೀಸ್ ಬ್ಯಾಂಡ್
ಬೆಂಗಳೂರು: ದೇಶಭಕ್ತಿ ಸಾರುವ ಗೀತೆಗಳು, ಭಾರತ್ ಮಾತಾಕಿ ಜೈ ೋಷಣೆಗಳು, ಮಹಾತ್ಮ ಗಾಂಧಿ, ಅಂಬೇಡ್ಕರ್ ಸ್ಮರಿಸುವ ನೃತ್ಯ ರೂಪಕಗಳು, ಗ್ರಾಮೀಣ ಸೊಗಡನ್ನು ಸಾರುವ ಸಂಕ್ರಾಂತಿ ಹಬ್ಬದ ಆಚರಣೆ, ಶಿಸ್ತುಬದ್ಧ ಪಥ ಸಂಚಲನ ಹಾಗೂ 150 ವರ್ಷಗಳ ಇತಿಹಾಸವಿರುವ ಪೊಲೀಸ್ ಬ್ಯಾಂಡ್‌ಗಳಿಂದ ಸಂಗೀತ....
- ಇದು ಪೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ಮತ್ತು ಜಿಬಿಎ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ವಿವಿಧ ತಂಡಗಳಿಂದ ಪರೇಡ್ ಗೌರವ ವಂದನೆ ಸ್ವೀಕರಿಸಿ ರಾಜ್ಯಕ್ಕೆ ಗಣರಾಜ್ಯೋತ್ಸವದ ಸಂದೇಶ ಸಾರಿದರು.
ಆ ನಂತರ ಸೇನೆ, ಕೆಎಸ್‌ಆರ್‌ಪಿ, ಪೊಲೀಸ್, ಸ್ಕೌಟ್ ಮತ್ತು ಗೈಡ್ಸ್, ಎನ್‌ಸಿಸಿ, ಸೇವಾದಳ ಸೇರಿ ತಮಿಳುನಾಡು ಪೊಲೀಸ್ ತಂಡ ಸೇರಿ ವಿವಿಧ ತಂಡಗಳು ಪಥಸಂಚಲದ ಮೂಲಕ ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಿದವು. ಶಾಲೆಯ ಮಕ್ಕಳ ತಂಡ ಸೇರಿ ಒಟ್ಟು ಅಂದಾಜು 38 ತಂಡಗಳು ಕವಾಯತಿನಲ್ಲಿ ಪಾಲ್ಗೊಂಡಿದ್ದವು.
ಬಳಿಕ ಆಕರ್ಷಕ ಪಥ ಸಂಚಲನ ನಡೆಸಿದ ತಂಡದ ಮುಖ್ಯಸ್ಥರಿಗೆ ಮತ್ತು ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ತಂಗಾಳಿಯಲ್ಲಿ ಪೊಲೀಸ್ ಬ್ಯಾಂಡ್ ಸಂಗೀತದ ಇಂಪು
ಸೋಮವಾರ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿತ್ತು. ತಣ್ಣನೆಯ ತಂಗಾಳಿಯಲ್ಲಿ ಪೊಲೀಸ್ ಬ್ಯಾಂಡ್ ನುಡಿಸಿದ ಸಂಗೀತ ಕೇಳುಗರಿಗೆ ಇಂಪು ನೀಡಿದವು.
ಕನ್ನಡ ಮತ್ತು ಇಂಗ್ಲಿಷ್ ಗೀತೆಗಳ ಸಮ್ಮಿಶ್ರದ ಗೀತೆಗಳು ಖುಷಿ ನೀಡಿದವು. ಇತ್ತೀಚಿನ ದಿನಗಳಲ್ಲಿ ಕಡೆಗಣನೆಯಾಗಿದ್ದ ‘ೈರ್ ಬ್ಯಾಂಡ್; ಗಮನ ಸೆಳೆಯಿತು.
ಶಾಸ್ತ್ರೀಯ ಮತ್ತು ಪಾಶ್ಚಾತ್ಯ ಸಂಗೀತ ಎರಡೂ ನುಡಿಸುವುದಕ್ಕೆ ಹೆಸರುವಾಸಿಯಾಗಿರುವ ಕರ್ನಾಟಕ ರಾಜ್ಯ ಪೊಲೀಸ್ ಬ್ಯಾಂಡ್ ತಂಡಕ್ಕೆ ಸುದೀರ್ಘ 150 ವರ್ಷಗಳ ಇತಿಹಾಸವಿದೆ.
ಮೈಸೂರು ಸಂಸ್ಥಾನದ ಮಹಾರಾಜ ಚಾಮರಾಜೇಂದ್ರ ಒಡೆಯರ್ ಅವರು 1868ರಲ್ಲಿ ಸ್ಥಾಪಿಸಿದರು. ಬಳಿಕ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇಂಡಿಯನ್ ಆರ್ಕಾ ಮತ್ತು ಇಂಗ್ಲಿಷ್ ಬ್ಯಾಂಡ್ ಆಗಿ ಪರಿವರ್ತಿಸಿದರು.
ಪೊಲೀಸ್ ಬ್ಯಾಂಡ್ ತಂಡವು ಮೈಸೂರು ದಸರಾ, ಕನ್ನಡ ರಾಜ್ಯೋತ್ಸವ ಹಾಗೂ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಮೂಹ ವಾದ್ಯಮೇಳ ಪ್ರದರ್ಶನವು ಗಮನ ಸೆಳೆದಿದೆ.
ಭಾರತ ಏಕೀಕರಣ, ನವಭಾರತ ಸಂದೇಶ ಸಾರಿದ ಮಕ್ಕಳು
ಬಾಗಲಗುಂಟೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡವು ‘ಭಾರತದ ಏಕೀಕರಣ ಮತ್ತು ನವಭಾರತ’ ಎಂಬ ನೃತ್ಯರೂಪಕವನ್ನು ಪ್ರದರ್ಶಿಸಿದರು.
ದೇಶವು ಸ್ವಾತಂತ್ರ್ಯ ಪಡೆದ ಬಳಿಕ ಅಂದಿನ ಜನಪ್ರತಿನಿಧಿಗಳು ದೇಶದ ಏಕೀಕರಣಕ್ಕೆ ಶ್ರಮಿಸಿದ ದೃಶ್ಯಗಳನ್ನು ಮನಮುಟ್ಟುವಂತೆ ಪ್ರದರ್ಶಿಸಿದರು. ಹೈದರಾಬಾದ್ ಪ್ರಾಂತ್ಯವನ್ನು ವಶಪಡಿಸಿಕೊಳ್ಳುವುದು ಹಾಗೂ ಆಪರೇಷನ್ ಪೋಲೋ ಮೂಲಕ 1950ರ ವೇಳೆಗೆ ಸಂಪೂರ್ಣ ಏಕೀಕರಣ ಭಾರತವಾಯಿತು ಎಂದು ಪ್ರದರ್ಶಿಸಿದರು.
ಸಂಕ್ರಾಂತಿ ಸಂಭ್ರಮದಲ್ಲಿ ತಲ್ಲೀನರಾದ ವಿದ್ಯಾರ್ಥಿಗಳು
ಹೇರೋಹಳ್ಳಿಯ ನಗರ ಪಾಲಿಕೆ ಸಂಯುಕ್ತ ಪದವಿ ಪೂರ್ವ ಕಾಲೇಜಿನ 650 ವಿದ್ಯಾರ್ಥಿಗಳ ತಂಡವು ‘ಸಂಕ್ರಾಂತಿ ಸಂಭ್ರಮ’ ನೃತ್ಯರೂಪಕದ ಮೂಲಕ ನಾಡಿನ ಆಚಾರ-ವಿಚಾರ, ಎಳ್ಳು-ಬೆಲ್ಲ ಬೀರುವುದು ಹಾಗೂ ಮಕ್ಕಳಿಗೆ ಗಾಳಿಪಟ ಹಾರಿಡುವುದು, ಬಂಡಿ ಬಿಡುವ ಆಟದ ಸುಗ್ಗಿಯ ಸಂಭ್ರಮವನ್ನು ಆನಂದಿಸಿದರು.
ಸೂರ್ಯ ದಕ್ಷಿಣದಿಂದ ಉತ್ತರದ ಕಡೆ ಪಥ ಬದಲಾಯಿಸುತ್ತಿದ್ದಂತೆ ಕತ್ತಲೆಯಿಂದ ಬೆಳಕಿನತ್ತ ಸಾಗುವ ಆಧ್ಯಾತ್ಮಿಕ ಪರಿವರ್ತನೆಯನ್ನು ಈ ಹಬ್ಬ ಸಾರುತ್ತದೆ. ರೈತರ ಶ್ರಮಕ್ಕೆ ಮೌಲ್ಯ ನೀಡುವುದು ಮತ್ತು ಸೌಹಾರ್ದತೆಯನ್ನು ಬೆಳೆಸುವುದು ಈ ಹಬ್ಬದ ವಿಶೇಷತೆ. ಹೀಗಾಗಿ, ಮಕರ ಸಂಕ್ರಾಂತಿ ನಾಡಿನ ಸಂಸ್ಕೃತಿ, ಜೀವನ ಮೌಲ್ಯಗಳನ್ನು ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಮಹತ್ವದ ಹಬ್ಬವಾಗಿದೆ ಎಂದು ಸಾರಿದರು.