6 ವರ್ಷಗಳಲ್ಲಿ ರಾಜ್ಯದಲ್ಲಿ 72,000 ಮಹಿಳೆಯರು ನಾಪತ್ತೆ! ಮೂರು ಸಾವಿರ ಜನರು ಇನ್ನೂ ಸಿಕ್ಕಿಲ್ಲ, High court ಕಳವಳ

AI ಚಿತ್ರ
AI ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • 13ರಿಂದ 18 ವರ್ಷದ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣ ಹೆಚ್ಚಳ
  • ತನಿಖಾ ಮಾರ್ಗಸೂಚಿ ಪಾಲಿಸಲು ಸರ್ಕಾರಕ್ಕೆ ನಿರ್ದೇಶನ
  • ಮಾನವ ಕಳ್ಳಸಾಗಣೆ ಜಾಲದ ಬಗ್ಗೆ ಎಚ್ಚರ ಎಂದ ಕೋರ್ಟ್​
ಶ್ರವಣ್​ ನೀರಬಿದಿರೆ ಬೆಂಗಳೂರು
ನಾಪತ್ತೆ ಪ್ರಕರಣವೊಂದರ ವಿಚಾರಣೆ ವೇಳೆ ರಾಜ್ಯ ಸರ್ಕಾರವು ಹೈಕೋರ್ಟ್​ಗೆ ಸಲ್ಲಿಸಿರುವ ದಾಖಲೆಯು, ರಾಜ್ಯದಲ್ಲಿ ಕಳೆದ ಆರು ವರ್ಷಗಳಲ್ಲಿ ನಾಪತ್ತೆಯಾದ ಹೆಣ್ಮಕ್ಕಳ ಅಂಕಿ-ಅಂಶಗಳನ್ನು ತೆರೆದಿಟ್ಟಿದೆ. ಈ ರೀತಿ ನಾಪತ್ತೆ ಆಗುತ್ತಿರುವವರಲ್ಲಿ 13ರಿಂದ 18 ವರ್ಷದೊಳಗಿನವರೇ ಹೆಚ್ಚಾಗಿರುವುದು ಕಳವಳ ಮೂಡಿಸಿದೆ. 
ಸರ್ಕಾರದ ಅಂಕಿ-ಅಂಶಗಳ ಪ್ರಕಾರ 2020ರಿಂದ 2025ರ ವರೆಗಿನ ಅವಧಿಯಲ್ಲಿ ಹಸುಗೂಸಿನಿಂದ ಹಿಡಿದು 18 ವರ್ಷದೊಳಗಿನ ಒಟ್ಟು 16,106 ಮಕ್ಕಳು (ಗಂಡು ಮತ್ತು ಹೆಣ್ಣು ಸೇರಿ)ನಾಪತ್ತೆಯಾಗಿದ್ದಾರೆ. ಇವರಲ್ಲಿ 14,089 ಮಂದಿಯನ್ನು ಪತ್ತೆಹಚ್ಚಲಾಗಿದ್ದು, 2,017 ಮಕ್ಕಳ ಸುಳಿವು ಸಿಕ್ಕಿಲ್ಲ. ಇದೇ ಅವಧಿಯಲ್ಲಿ 71,699 ಮಹಿಳೆಯರು ನಾಪತ್ತೆಯಾಗಿದ್ದು, 68,718 ಮಂದಿಯನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಅದೇ ರೀತಿ 38,073 ಪುರುಷರು ಕಾಣೆಯಾಗಿದ್ದು, ಇದರಲ್ಲಿ 31,603 ಮಂದಿ ಪತ್ತೆಯಾಗಿದ್ದಾರೆ. ಉಳಿದವರು ಏನಾದರೆಂಬ ಮಾಹಿತಿ ಈವರೆಗೂ ದೊರೆತಿಲ್ಲ. 
ಈ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಪತ್ತೆಯಾಗಿರುವುದು 13ರಿಂದ 17ರೊಳಗಿನ ಹೆಣ್ಣು ಮಕ್ಕಳು. ಈ ವಯೋಮಾನದ 11,202 ಮಂದಿ ನಾಪತ್ತೆಯಾಗಿದ್ದು, 10,431 ಮಂದಿಯನ್ನು ಸುರಕ್ಷಿತವಾಗಿ ಪತ್ತೆಹಚ್ಚಲಾಗಿದೆ. ಆದರೆ, 910 ಹೆಣ್ಣು ಮಕ್ಕಳು ಇಂದಿಗೂ ಪತ್ತೆಯಾಗದೆ ಉಳಿದಿದ್ದಾರೆ. ವಯಸ್ಕರ ದತ್ತಾಂಶಗಳನ್ನು ಪರಿಶೀಲಿಸಿದರೆ ಕಾಣೆಯಾದ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಆದರೆ, ಸರಾಸರಿಯಾಗಿ ಪತ್ತೆಯಾಗದೆ ಉಳಿದ ಪುರುಷರ ಸಂಖ್ಯೆ ಹೆಚ್ಚಿದೆ.
ಈ ಅಂಕಿ-ಅಂಶಗಳ ಬಗ್ಗೆ ನ್ಯಾಯಾಲಯ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ನಾಪತ್ತೆಯಾಗುವ ವ್ಯಕ್ತಿಗಳ ಪತ್ತೆಗಾಗಿ ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ಪೊಲೀಸ್​ ಇಲಾಖೆಯು ಜ. 29ರಂದು ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಮತ್ತು ಅದರ ಪ್ರಗತಿಯ ಬಗ್ಗೆ ನಿರಂತರ ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದೆ. 
ಅಪ್ರಾಪ್ತರು ಮತ್ತು ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಿರುವುದರ ಹಿಂದೆ ಮಾನವ ಕಳ್ಳಸಾಗಾಣಿಕೆಯ ಜಾಲವೂ ಇರಬಹುದು ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿರುವ ನ್ಯಾಯಾಲಯವು ಪೊಲೀಸರು ಈ ಬಗ್ಗೆಯೂ ತನಿಖೆಯಲ್ಲಿ ಗಮನಹರಿಸಬೇಕು ಎಂದು ಹೇಳಿದೆ.  

ಏನಿದು ಪ್ರಕರಣ? 

ಸಂಬಂಧಿಕರೊಬ್ಬರು ನಾಪತ್ತೆಯಾಗಿ ನಾಲ್ಕು ವರ್ಷ ಕಳೆದರೂ ಪತ್ತೆಯಾಗದ ಹಿನ್ನಲೆಯಲ್ಲಿ ಬೆಂಗಳೂರಿನ ವಿಜಯನಗರದ ನಿವಾಸಿ ಮಹೇಶ್​ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜ್​ ಅವರಿದ್ದ ಏಕಸದಸ್ಯ ನ್ಯಾಯಪೀಠವು ನಾಪತ್ತೆ ಪ್ರಕರಣಗಳನ್ನು ನಿಷ್ಕಿಯ ಎಂದು ಪರಿಗಣಿಸಿ ತನಿಖೆಯನ್ನು ಅರ್ಧಕ್ಕೆ ನಿಲ್ಲಿಸಬಾರದು ಎಂದು ಆದೇಶಿಸಿದೆ.

ಅನುಷ್ಠಾನದ ವರದಿ ಸಲ್ಲಿಸಿ

ನಾಪತ್ತೆ ಪ್ರಕರಣಗಳ ತನಿಖೆಗಾಗಿ ಮಾರ್ಗಸೂಚಿಗಳು ರಾಜ್ಯದ ಎಲ್ಲ ಠಾಣೆಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನವಾಗಿದೆಯೇ ಎಂಬುದನ್ನು ರಾಜ್ಯ ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಈ ಸಂಬಂಧ ಸಮಗ್ರ ಅನುಸರಣಾ ವರದಿಯನ್ನು ಏ. 10ರಂದು ಸಲ್ಲಿಸಬೇಕು. ನಾಗರಿಕರ ರಕ್ಷಣೆ ಸರ್ಕಾರದ ಕರ್ತವ್ಯವಾಗಿದ್ದು, ನಾಪತ್ತೆ ಪ್ರಕರಣಗಳ ತನಿಖೆಯಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ಹೈಕೋರ್ಟ್​ ಆದೇಶದಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net