ನ್ಯಾಯಮೂರ್ತಿಗಳು, ಶೇ.63 ಭ್ರಷ್ಟಾಚಾರ ವಿಷಯ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ. ಈಗಲಾದರೂ, ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಸರ್ಕಾರದ ವಿರುದ್ಧ ಶೇ.40 ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈಗ ಮಾಡುತ್ತಿರುವುದು ಏನು? ಎಂದು ಪ್ರಶ್ನಿಸಿದರು.
ಕಮಿಷನ್ ಬಗ್ಗೆ ತನಿಖೆ ಮಾಡಲು ವಿಶೇಷ ತನಿಖಾ ದಳ (ಎಸ್‌ಐಟಿ) ಮಾಡಿದ್ದೀರಲ್ಲವೇ? ಈಗ ಶೇ.63 ಭ್ರಷ್ಟಾಚಾರ ಸಂಬಂಧ ಯಾವ ಎಸ್‌ಐಟಿ ಮಾಡುತ್ತೀರಿ? ನಿಮಗೆ ಧೈರ್ಯ ಇದ್ದರೆ ಸಿಬಿಐ ತನಿಖೆ ಮಾಡಿ ಎಂದು ಅವರು ಒತ್ತಾಯಿಸಿದರು.
ಬೋವಿ ನಿಗಮದ ಅಧ್ಯಕ್ಷರೇ ಎಕರೆಗೆ 25 ಲಕ್ಷ ಕಮಿಷನ್ ಪಡೆಯುತ್ತಿದ್ದರು. ವಾಲ್ಮೀಕಿ ನಿಗಮದಡಿ 187 ಕೋಟಿ ಸುಮಾರು 700 ಖಾತೆಗೆ ವರ್ಗಾಯಿಸಲಾಗಿತ್ತು. ಅದನ್ನು ಬಳ್ಳಾರಿ ಚುನಾವಣೆಗೆ ಬಳಸಿದ್ದು, ತನಿಖೆ ನಡೆಯುತ್ತಿದೆ. ಸಚಿವರೂ ರಾಜೀನಾಮೆ ನೀಡಿದ್ದಾರೆ. ಮುಡಾ ಹಗರಣದಲ್ಲಿ 14 ನಿವೇಶನ ಲೂಟಿ ಹೊಡೆದು ಅದನ್ನು ವಾಪಸ್ ಕೊಟ್ಟಿದ್ದೀರಿ ಎಂದು ಆರೋಪಿಸಿದರು.
ಬಾರ್ ಲೈಸನ್ಸ್‌ಗೆ 20 ಲಕ್ಷ ಎಂಬುದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಟ್ರಾನ್ಸ್‌ಫಾರ್ಮರ್‌ನಲ್ಲಿ 90 ಕೋಟಿ ಹಗರಣ ನಡೆಯುತ್ತಿದೆ. 98 ಲಕ್ಷದ ಕಸದ ಯಂತ್ರಕ್ಕೆ 2.5 ಕೋಟಿ ಕೊಟ್ಟು ಬಾಡಿಗೆಗೆ ಪಡೆಯುತ್ತಿದ್ದೀರಿ. ಇದಕ್ಕಿಂತ ಸಾಕ್ಷಿ ಬೇಕಾ ಎಂದು ಕೇಳಿದರು.
ಕರ್ನಾಟಕವು ಹೈಕಮಾಂಡಿನ ಎಟಿಎಂ ಆಗಿದೆ. ಸೋನಿಯಾ, ರಾಹುಲ್ ಗಾಂಧಿಯವರಿಗೆ ದುಡ್ಡು ಕೊಡುವವರಿಗಷ್ಟೇ ಇಲ್ಲಿ ಅಧಿಕಾರ ಎಂದು ಆರ್.ಅಶೋಕ್ ದೂರಿದರು.
ಬಿಹಾರ ಚುನಾವಣೆಗೆ ಕರ್ನಾಟಕದಿಂದ ಸುಮಾರು 300 ಕೋಟಿ ಹಣ ಹೋಗಿದೆ. ಎಲ್ಲ ಸಚಿವರ ಬ್ರೇಕ್ ಫಾಸ್ಟ್ ಸಭೆ ನಡೆಸಿ 300 ಕೋಟಿ ಸಂಗ್ರಹಿಸಿ ಕೊಟ್ಟಿದ್ದಾರೆ. ಶಾಸಕ ಪಪ್ಪಿ 50 ಕೆಜಿ ಚಿನ್ನ ಇಟ್ಟಿದ್ದರು. ಅವರು ಇನ್ನೂ ಜೈಲಲ್ಲೇ ಇದ್ದಾರೆ ಎಂದರು.
ಮುಡಾ 3 ಸಾವಿರ ಕೋಟಿ ಹಗರಣ ಮತ್ತು ವಾಲ್ಮೀಕಿ ನಿಗಮದ ಹಗರಣ ನಡೆದಾಗ ದೊಡ್ಡ ಹೋರಾಟವನ್ನು ಮಾಡಿದ್ದೆವು. ಆ ಸಂದರ್ಭದಲ್ಲಿ ಸಿಎಂ, ಭ್ರಷ್ಟಾಚಾರಕ್ಕೆ ಸಾಕ್ಷಿ ಕೊಡಿ ಎಂದು ಕೇಳುತ್ತಿದ್ದರು. ಈ ಸರ್ಕಾರ ಶೇ.63ರಷ್ಟು ಭ್ರಷ್ಟಾಚಾರ ಮಾಡುವ ಅಲಿಬಾಬಾ ಮತ್ತು 34 ಜನ ಕಳ್ಳರ ಸರ್ಕಾರ ಎಂದು ಹಾಲಿ ಉಪ ಲೋಕಾಯುಕ್ತರೇ ಹೇಳಿದ್ದಾರೆ ಎಂದರು.
ಈ ಸರ್ಕಾರದಿಂದ ನೇಮಕಗೊಂಡ ಉಪ ಲೋಕಾಯುಕ್ತ ನ್ಯಾಯಾಧೀಶರು, ಎಲ್ಲಾ ನ್ಯಾಯಮೂರ್ತಿಗಳು, ನ್ಯಾಯವಾದಿಗಳು ವೇದಿಕೆಯಲ್ಲಿದ್ದಾಗ ಹೇಳಿದ್ದಾರೆ. ಕಮಿಷನ್ ಕೊಡದೇ ಇಲ್ಲೇನೂ ನಡೆಯುವುದಿಲ್ಲ. ಭ್ರಷ್ಟಾಚಾರದಲ್ಲಿ ರಾಜ್ಯ 5ನೇ ಸ್ಥಾನದಲ್ಲಿದೆ ಎಂದಿದ್ದಾರೆ. ಇದು ಇವರಿಗೆ ಸರ್ಟಿಫಿಕೇಟ್ ಇದ್ದಂತೆ ಎಂದರು.
*ಬಿಹಾರ ಚುನಾವಣೆಗೆ ಕರ್ನಾಟಕದಿಂದ ಸುಮಾರು 300 ಕೋಟಿ ಹಣ ಹೋಗಿದೆ. ಎಲ್ಲ ಸಚಿವರ ಬ್ರೇಕ್ ಫಾಸ್ಟ್ ಸಭೆ ನಡೆಸಿ 300 ಕೋಟಿ ಸಂಗ್ರಹಿಸಿ ಕೊಟ್ಟಿದ್ದಾರೆ.-ಆರ್.ಅಶೋಕ್, ವಿರೋಧ ಪಕ್ಷದನಾಯಕರು