ಟ್ಯಾಂಕ್​ಗೆ ಬಿದ್ದು ಮೃತಪಟ್ಟ ಮಗುವಿನ ಕುಟುಂಬಕ್ಕೆ 6.20 ಲಕ್ಷ ರೂ. ಪರಿಹಾರ| High court

High court
High court
Published on
ಬೆಂಗಳೂರು: ಕಟ್ಟಡ ನಿರ್ಮಾಣ ಜಾಗದಲ್ಲಿದ್ದ ನೀರಿನ ಟ್ಯಾಂಕ್​ಗೆ ಬಿದ್ದು ಎರಡೂವರೆ ವರ್ಷದ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವೀಯ ನೆಲೆಯಲ್ಲಿ ತೀರ್ಪು ನೀಡಿರುವ ಹೈಕೋರ್ಟ್​, ಮೃತ ಮಗುವಿನ ಬಡ ಪಾಲಕರು ಮತ್ತು ಅವರ ಇನ್ನಿಬ್ಬರು ಮಕ್ಕಳ ಸುರತ ಭವಿಷ್ಯಕ್ಕಾಗಿ 6.20 ಲಕ್ಷ ಪರಿಹಾರದ ಯೋಜನೆಯೊಂದನ್ನು ರೂಪಿಸಿ ಪ್ರಕರಣ ರದ್ದುಪಡಿಸಿದೆ.
ನಿರ್ಲಕ್ಷ್ಯದ ಕಾರಣ ಮಗುವಿನ ಸಾವಿನ ಸಾವಿಗೆ ಕಾರಣವಾದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಜಾಗದ ಮಾಲೀಕರಾದ ವೇಲು, ಅಭಿಷೇಕ್​ ಸುರಾನಾ ಮತ್ತು ಅಲೋಕ್​ ಎಸ್​. ಸುಂದರ್​ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಮೃತಪಟ್ಟ ಮಗುವಿನ ತಂದೆ ಸೋನು ಮಾಚ್ವರ್​ ದಿನಗೂಲಿ ಕೆಲಸಗಾರನಾಗಿದ್ದು, ಇಬ್ಬರು ಸಣ್ಣ ಮಕ್ಕಳನ್ನು ಸಾಕುವ ಜವಾಬ್ದಾರಿ ಹೊಂದಿದ್ದಾರೆ. ಇಂತಹ ಬಡ ಕುಟುಂಬಕ್ಕೆ ಒಟ್ಟಿಗೆ ದೊಡ್ಡ ಮೊತ್ತದ ಹಣವನ್ನು ನೀಡಿದರೆ, ಅದು ದೈನಂದಿನ ತುರ್ತು ಅಗತ್ಯಗಳಿಗೆ ರ್ಖಚಾಗಿ ಹೋಗಿ ಮಕ್ಕಳ ದೀರ್ಘಕಾಲೀನ ಭವಿಷ್ಯಕ್ಕೆ ತೊಂದರೆಯಾಗಬಹುದು ಎಂದು ಯೋಚಿಸಿದ ನ್ಯಾಯಪೀಠ, ಈ ಹಣದ ಸಂರಕ್ಷಣೆಗಾಗಿ ವಿಶೇಷ ಹೂಡಿಕೆ ಯೋಜನೆಯೊಂದನ್ನು ರೂಪಿಸಿದೆ. 

ಅಂಚೆ ಕಚೇರಿಯಲ್ಲಿ ಹೂಡಿಕೆ:

ಪ್ರಕರಣದ ಆರೋಪಿಗಳು ಒದಗಿಸುವ 5 ಲಕ್ಷ ರೂಪಾಯಿ ಮೊತ್ತದ ಡಿಮ್ಯಾಂಡ್​ ಡ್ರಾಫ್ಟ್ ಅನ್ನು ಮಗುವಿನ ತಂದೆಯ ಹೆಸರಿನಲ್ಲಿ ಅಂಚೆ ಇಲಾಖೆಯ ಮಾಸಿಕ ಆದಾಯ ಖಾತೆ ಯೋಜನೆಯಲ್ಲಿ (ಎಂಐಎಸ್​) ಹೂಡಿಕೆ ಮಾಡಲು ನ್ಯಾಯಾಲಯ ನಿರ್ದೇಶಿಸಿದೆ. ಈ ಯೋಜನೆಯಿಂದ ಬರುವ ಮಾಸಿಕ ಬಡ್ಡಿಯನ್ನು ಕಡ್ಡಾಯವಾಗಿ ನೊಂದ ಕುಟುಂಬದ ಉಳಿದ ಇಬ್ಬರು ಮಕ್ಕಳ ಕಲ್ಯಾಣ ಮತ್ತು ಶಿಕ್ಷಣಕ್ಕೆ ಮಾತ್ರ ಬಳಸಬೇಕು. ಮಗಳು ಪ್ರಾಪ್ತ ವಯಸ್ಕಳಾದ ನಂತರವಷ್ಟೇ ಈ ಹೂಡಿಕೆಯನ್ನು ಹಿಂಪಡೆಯಲು ಅವರಿಗೆ ಅವಕಾಶ ನೀಡಲಾಗಿದೆ. ಉಳಿದ 1.2 ಲಕ್ಷ ರೂ. ಹಣವನ್ನು ಅರ್ಜಿದಾರರು ಮುಂದಿನ 12 ತಿಂಗಳುಗಳ ಕಾಲ ಪ್ರತಿ ತಿಂಗಳು ತಲಾ 10 ಸಾವಿರದಂತೆ ಪಾವತಿಸಬೇಕು ಎಂಬ ಷರತ್ತನ್ನು ಪ್ರಕರಣ ವಿಧಿಸಲಾಗಿದೆ. 
ℹ️

ಪ್ರಕರಣದ ಹಿನ್ನಲೆ

ಬೆಂಗಳೂರಿನ ರಾಜರಾಜೇಶ್ವರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಜಾಗವೊಂದರಲ್ಲಿ ಕಟ್ಟಡ ನಿಮಾರ್ಣ ಕೆಲಸಗಳಿಗಾಗಿ ನೀರಿನ ಟ್ಯಾಂಕ್​ ನಿರ್ಮಿಸಲಾಗಿತ್ತು. ಅಲ್ಲಿಗೆ ಆಟವಾಡುತ್ತಾ ಬಂದ ಪಕ್ಕದ ಮನೆಯ ಎರಡೂವರೆ ವರ್ಷದ ಬಾಲಕ ಆಕಸ್ಮಿಕವಾಗಿ ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟಿದ್ದ. ಈ ಸಂಬಂಧ ಜಾಗದ ಮಾಲೀಕರ ಮೇಲೆ ಮೇ 27ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುತ್ತೇವೆ ಎಂದು ಹೈಕೋರ್ಟ್​ ಮೆಟಿಲೇರಿದ್ದ ಅರ್ಜಿದಾರರು 2 ಲಕ್ಷ ರೂ. ಪರಿಹಾರ ನೀಡುತ್ತೇವೆ ಎಂದು ತಿಳಿಸಿದ್ದರು. ಆದರೆ, ಈ ಪ್ರಸ್ತಾವನೆ ತಿರಸ್ಕರಿಸಿದ್ದ ನ್ಯಾಯಪೀಠ, ಇದು ಅತ್ಯಂತ ಕಡಿಮೆ ಪರಿಹಾರ ಎಂದಿತ್ತು. ಆ ನಂತರ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಪರಿಹಾರದ ಮೊತ್ತವನ್ನು 6.2 ಲಕ್ಷ ರೂ. ಗೆ ಏರಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net