ರಾಜ್ಯಪಠ್ಯಕ್ರಮ ಶಾಲೆಗಳ ಒಂದನೇ ತರಗತಿ ಪ್ರವೇಶಕ್ಕೆ 6 ವರ್ಷ ಫಿಕ್ಸ್
ರಾಜ್ಯಪಠ್ಯಕ್ರಮ ಶಾಲೆಗಳ ಒಂದನೇ ತರಗತಿ ಪ್ರವೇಶ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ರಾಜ್ಯ ಪಠ್ಯಕ್ರಮ ಶಾಲೆಗಳಲ್ಲಿ ಒಂದನೇ ತರಗತಿ ಪ್ರವೇಶಾತಿ ವಯೋಮಿತಿ ವಿಚಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಈ ಬಾರಿ ತೆರೆ
ವಯೋಮಿತಿ ವಿಚಾರವನ್ನು ಹಿಂದಿನ ವರ್ಷವೇ ಇಲಾಖೆಯು ಸ್ಪಷ್ಟಪಡಿಸಿದ್ದ ಕಾರಣ ಪಾಲಕರು ಈ ವರ್ಷ ಯಾವುದೇ ಸಬೂಬು ಹೇಳುವಂತಿಲ್ಲ.
2025-26ನೇ ಸಾಲಿನಲ್ಲಿ 6 ವರ್ಷಗಳ ಕನಿಷ್ಠ ವಯೋಮಿತಿಯನ್ನು 5.5 ವರ್ಷಕ್ಕೆ ಇಳಿಸಿತ್ತು.
ಎನ್.ಎಲ್. ಶಿವಮಾದು
ಬೆಂಗಳೂರು: ರಾಜ್ಯ ಪಠ್ಯಕ್ರಮ ಶಾಲೆಗಳಲ್ಲಿ ಒಂದನೇ ತರಗತಿ ಪ್ರವೇಶಾತಿ ವಯೋಮಿತಿ ವಿಚಾರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಈ ಬಾರಿ ತೆರೆ ಬೀಳಲಿದೆ. 2026-27ನೇ ಸಾಲಿನಲ್ಲಿ ಒಂದನೇ ತರಗತಿ ವ್ಯಾಸಂಗಕ್ಕೆ ದಾಖಲಾಗುವ ಮಗುವಿಗೆ ಜೂನ್ ಒಂದನೇ ತಾರೀಖಿಗೆ ಅನ್ವಯವಾಗುವಂತೆ 6 ವರ್ಷ ಪೂರೈಸಿರಬೇಕು ಎಂದು ಶಿಕ್ಷಣ ಇಲಾಖೆಯು ಸ್ಪಷ್ಟಪಡಿಸಿದೆ.
ವಯೋಮಿತಿ ವಿಚಾರವನ್ನು ಹಿಂದಿನ ವರ್ಷವೇ ಇಲಾಖೆಯು ಸ್ಪಷ್ಟಪಡಿಸಿದ್ದ ಕಾರಣ ಪಾಲಕರು ಈ ವರ್ಷ ಯಾವುದೇ ಸಬೂಬು ಹೇಳುವಂತಿಲ್ಲ.
ಹೀಗಾಗಿ, ಈ ವರ್ಷ ಒಂದನೇ ತರಗತಿ ವಯೋಮಿತಿಯು 4 ವರ್ಷಗಳ ಹಿಂದಿನ ಆದೇಶದಂತೆಯೇ ಅನ್ವಯವಾಗಲಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ವಿಕಾಸ್ ಕಿಶೋರ್ ಸೂರಲ್ಕರ್ ಖಚಿತಪಡಿಸಿದ್ದಾರೆ.
ಈಗಾಗಲೇ ಕೇಂದ್ರ ಪಠ್ಯಕ್ರಮ ಶಾಲೆಗಳಲ್ಲಿ 2022ನೇ ಸಾಲಿನಿಂದಲೇ 6 ವರ್ಷ ನಿಯಮ ಅಳವಡಿಸಿಕೊಂಡು ಜಾರಿಗೊಳಿಸಲಾಗಿದೆ. ಆದರೆ, ರಾಜ್ಯ ಸರ್ಕಾರವು 2022ರಲ್ಲಿ ಎರಡು ವರ್ಷಗಳ ನಿಯಮವನ್ನು ನಡಿಲಿಸಿತ್ತು. ಕಳೆದ ವರ್ಷ ಸರ್ಕಾರವು ಒಂದು ವರ್ಷಗಳ ಅವಧಿ ಸಡಿಲಿಸಿ ತಾತ್ಕಾಲಿಕ ಪರಿಹಾರ ನೀಡಿತ್ತು. ಆದರೆ, ಈ ವರ್ಷ ಅಂತಹ ಯಾವುದೇ ಅವಕಾಶಗಳಿಲ್ಲ. ನಿಯಮಾನುಸಾರ 6 ವರ್ಷ ನಿಯಮ ಪಾಲಿಸಲೇಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ತಿಳಿಸಿದೆ.
ಕಳೆದ ವರ್ಷ 5.5 ವರ್ಷಕ್ಕೆ ನಿಗದಿ:
ರಾಜ್ಯದಲ್ಲಿ 2025-26ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ವ್ಯಾಸಂಗ ಮಾಡುವ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ವಯೋಮಿತಿ ಸಡಿಲಿಸಿ ಅನುಕೂಲ ಮಾಡಿಕೊಟ್ಟಿತ್ತು. 6 ವರ್ಷಗಳ ಕನಿಷ್ಠ ವಯೋಮಿತಿಯನ್ನು 5.5 ವರ್ಷಕ್ಕೆ ಇಳಿಸಿತ್ತು. ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಅಭಿಪ್ರಾಯ ಹಾಗೂ ಇಲಾಖೆ ಅಧಿಕಾರಿಗಳ ಹಂತದಲ್ಲಿ ಚರ್ಚಿಸಿ ನಿಯಮ ಸಡಿಲಗೊಳಿಸಲಾಗಿದೆ. 2026-27ನೇ ಸಾಲಿನಲ್ಲಿ ಕೂಡ ಯಾವ ನಿಯಮವನ್ನು ಪಾಲನೆ ಮಾಡಬೇಕೆಂಬುದನ್ನು ಎಸ್‌ಇಪಿ ತಿಳಿಸಲಿದೆ. ಅದರ ಪ್ರಕಾರವೇ ಪಾಲನೆ ಮಾಡಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದರು.
ಮಕ್ಕಳಿಗೆ ತೊಂದರೆ: ಪಾಲಕರ ಆರೋಪ
ಜೂನ್ ಒಂದಕ್ಕೆ ಸರಿಯಾಗಿ ಆರು ವರ್ಷ ತುಂಬಿರಬೇಕು ಎಂಬ ನಿಯಮವು ಮಕ್ಕಳಿಗೆ ತೊಂದರೆಯಾಗಲಿದೆ. ಕನಿಷ್ಠ ಜು.31ರೊಳಗೆ ಜನ್ಮತಾಳಿರುವ ಮಕ್ಕಳಿಗೆ ಅನುಕೂಲವಾಗುವಂತಹ ನಿಯಮಗಳನ್ನು ಸರ್ಕಾರ ರೂಪಿಸಬೇಕು. ಜೂ.2 ಮತ್ತು 3ರಂದು ಜನಿಸಿದ್ದರೂ ಮತ್ತೊಂದು ವರ್ಷ ವ್ಯರ್ಥವಾಗಿ ಕಾಯಬೇಕು. ಈ ನಿಯಮವು ಮಕ್ಕಳ ದೃಷ್ಟಿಯಿಂದಲೂ ಅವೈಜ್ಞಾನಿಕವಾಗಿದೆ ಎನ್ನುತ್ತಾರೆ ಪೋಷಕ ಸಂಘಟನೆ ಅಧ್ಯಕ್ಷ ಬಿ.ಎನ್. ಯೋಗಾನಂದ.
ಕಳೆದ ನಾಲ್ಕು ವರ್ಷಗಳ ಹಿಂದೆಯೇ ಸರ್ಕಾರ ಆದೇಶ ಹೊರಡಿಸಿತ್ತು ಮತ್ತು ವಿದ್ಯಾರ್ಥಿಗಳ ದೃಷ್ಟಿಯಿಂದ ಈಗಾಗಲೇ ಮೂರು ವರ್ಷ ನಿಯಮ ಸಡಿಲಿಸಲಾಗಿತ್ತು. ಈ ವರ್ಷ ಒಂದನೇ ತರಗತಿಗೆ ದಾಖಲಾಗುವ ಮಗುವಿನ ವಯಸ್ಸು ಜೂನ್ 1ಕ್ಕೆ 6 ವರ್ಷ ತುಂಬಿರಬೇಕು.