water ಬೇತಮಂಗಲದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕಿ ರೂಪಕಲಾ ಚಾಲನೆ ನೀಡಿದರು. ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಹಿರಿಯ ಮುಖಂಡ ಕವರಗನಹಳ್ಳಿ ಕೃಷ್ಣಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಪ್ರಸನ್ನ, ಹಂಗಳ ರಮೇಶ್, ವಿಶ್ವನಾಥ್, ರಮಣರೆಡ್ಡಿ, ಸತೀಶ್ ಇದ್ದರು.
ಬೇತಮಂಗಲ: ಬೇಸಿಗೆಯ ಪ್ರಖರ ಬಿಸಿಲಿನಿಂದ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಕೆಜಿಎಫ್ Water ಗ್ರಾಮೀಣ ಭಾಗದ ಜನರಿಗೆ ಶಾಸಕಿ ರೂಪಕಲಾ ಸಿಹಿ ಸುದ್ದಿ ನೀಡಿದ್ದು, ಶನಿವಾರ ಒಂದೇ ದಿನ ಕ್ಷೇತ್ರದ 6 ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದ್ದಾರೆ.
ಸಾಮಾನ್ಯವಾಗಿ ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ನೀರಿನ ಅಭಾವ ತಲೆದೋರುತ್ತದೆ. ಇದನ್ನು ಮನಗಂಡ ಶಾಸಕರು, ಗಡಿ ಭಾಗದ ಜನರಿಗೆ ನೀರಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಘಟಕಗಳನ್ನು ಕಾರ್ಯಗತಗೊಳಿಸಿದ್ದಾರೆ.
ಯಾವ ಯಾವ ಗ್ರಾಮಗಳು?:
ಆಂಧ್ರ ಗಡಿ ಭಾಗದ ವೆಂಗಸಂದ್ರ ಪಂಚಾಯಿತಿ ವ್ಯಾಪ್ತಿಯ ಕೊಡಗೇನಹಳ್ಳಿ, ಸೀತಿಪಲ್ಲಿ, ಹುಲ್ಲೂರು ಪಂಚಾಯಿತಿಯ ದೊಡ್ಡಕಾರ್ಲಿ, ಟಿ.ಗೊಲ್ಲಹಳ್ಳಿ ಪಂಚಾಯಿತಿ ವ್ಯಾಪ್ತಿಯ ಬಡಮಕನಹಳ್ಳಿ, ಗಟ್ಟಮಾದಮಂಗಲ ಪಂಚಾಯಿತಿಯ ವಿರೂಪಾಕ್ಷಿಪುರ ಹಾಗೂ ಲಕ್ಷಿ$್ಮಸಾಗರ ಗ್ರಾಮಗಳಲ್ಲಿ ನೂತನ ಘಟಕಗಳಿಗೆ ಶಾಸಕರು ಚಾಲನೆ ನೀಡಿದರು. ಸ್ವತ ತಾವೇ ನೀರನ್ನು ಹಿಡಿಯುವ ಮೂಲಕ ಘಟಕಗಳನ್ನು ಲೋಕಾರ್ಪಣೆ ಮಾಡಿದರು.
ಶಾಸಕಿ ರೂಪಕಲಾ ಮಾತನಾಡಿ, ಮನುಷ್ಯನ ಜೀವನಕ್ಕೆ ಶುದ್ಧ ಕುಡಿಯುವ ನೀರು ಅತ್ಯಗತ್ಯ. ಬೇಸಿಗೆಯಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡಬಾರದು ಎಂಬ ಉದ್ದೇಶದಿಂದ ಈ ಘಟಕಗಳನ್ನು ಆದ್ಯತೆಯ ಮೇರೆಗೆ ಪ್ರಾರಂಭಿಸಲಾಗಿದೆ. ಗ್ರಾಮಸ್ಥರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳುವುದರ ಜತೆಗೆ, ಘಟಕಗಳು ಸುಸ್ಥಿತಿಯಲ್ಲಿರುವಂತೆ ಜವಾಬ್ದಾರಿಯಿಂದ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.