ಹೋಂಸ್ಟೇ ಮಾಲೀಕನಿಗೆ 5 ಲಕ್ಷ ರೂ. ಪರಿಹಾರ| High court

High court
High court
Published on
ಬೆಂಗಳೂರು: ಅಮೆರಿಕ ಮೂಲದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಡಗಿನ ಹೋಂಸ್ಟೇ ಮಾಲೀಕನನ್ನು ಪೊಲೀಸರು ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಹೈಕೋರ್ಟ್​ ಘೋಷಿಸಿದೆ. ಆದ್ದರಿಂದ ಆತನ ಹಕ್ಕುಗಳ ಉಲ್ಲಂನೆ ಮಾಡಿದ್ದಾಕ್ಕಾಗಿ 5 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ತನ್ನ ವಿರುದ್ಧ ದಾಖಲಾಗಿರುವ ಎ್​ಐಆರ್​ ರದ್ದುಗೊಳಿಸಬೇಕು ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಬಂಧಿಸಿದಕ್ಕಾಗಿ 15 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರಿ ಹೋಂಸ್ಟೇ ಮಾಲೀಕ ಪಾಲೇಕಂಡ ಪೊನ್ನಪ್ಪ ಅಲಿಯಾಸ್​ ವಿಶಾಲ್​ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ಈ ಆದೇಶ ನೀಡಿದೆ.
ಪ್ರಕರಣದ ತನಿಖಾ ಹಂತದಲ್ಲಿ ನ್ಯಾಯಾಲಯದ ಹಸ್ತಕ್ಷೇಪದ ಅಗತ್ಯವಿಲ್ಲ. ಆದ್ದರಿಂದ ಎಫ್​ಐಆರ್​ ರದ್ದುಪಡಿಸುವ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ಸಾಧ್ಯವಿಲ್ಲ. ಆದರೆ, ಅರ್ಜಿದಾರರ ಬಂಧನ ಕಾನೂನುಬಾಹಿರವಾಗಿದ್ದು, ಅದಕ್ಕಾಗಿ ಅವರು 5 ಲಕ್ಷ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ. ಸರ್ಕಾರವು ಈ ಹಣವನ್ನು ಆದೇಶದ ಪ್ರತಿ ಕೈಸೇರಿದ 4 ವಾರಗಳೊಳಗೆ ಪಾವತಿಸಬೇಕು ಎಂದು ನ್ಯಾಯಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ:

ಅಮೆರಿಕ ಪ್ರಜೆಯಾಗಿರುವ ಸಂತ್ರಸ್ತೆ ಏ. 12ರಂದು ಹೋಂಸ್ಟೇಗೆ ಬಂದಾಗ ಆಕೆಗೆ ನೀಡಲಾದ ವೆಲ್ಕಮ್​ ಡ್ರಿಂಕ್ಸ್​ನಲ್ಲಿ ಮಾದಕ ದ್ರವ್ಯ ಬೆರೆಸಲಾಗಿತ್ತು ಎಂದು ಆರೋಪಿಸಲಾಗಿದೆ. ಅದನ್ನು ಕುಡಿದು ಪ್ರಜ್ಞೆ ತಪ್ಪಿದಾಗ ಹೋಂಸ್ಟೇಯ ಹೌಸ್​ಕೀಪರ್​ ವೃಜೇಶ್​ (ಮೊದಲ ಆರೋಪಿ) ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಲಾಗಿದೆ. ಅಲ್ಲದೆ, ಮಾಲೀಕನು ಆಕೆಯನ್ನು ಹೆಚ್ಚಿನ ದಿನಗಳ ಕಾಲ ಅಲ್ಲಿಯೇ ಉಳಿಯುವಂತೆ ಒತ್ತಾಯಿಸಿದ್ದಲ್ಲದೆ, ಯಾರಿಗೂ ಕರೆ ಮಾಡದಂತೆ ತಡೆದು ಸಂಪರ್ಕಕ್ಕೆ ಅಡೆತಡೆ ಒಡ್ಡಿದ್ದಾನೆ ಎಂದು ಪ್ರಾಸಿಕ್ಯೂಷನ್​ ವಾದಿಸಿತ್ತು. ಆದರೆ, ಪೊಲೀಸರು ಸಲ್ಲಿಸಿರುವ ಅಂತಿಮ ಚಾರ್ಜ್​ಶೀಟ್​ನಲ್ಲಿ ಮಾಲೀಕನ ಮೇಲಿದ್ದ ಅತ್ಯಾಚಾರ ಮತ್ತು ಬೆದರಿಕೆ ಆರೋಪಗಳನ್ನು ಕೈಬಿಡಲಾಗಿತ್ತು. 
⚠️

ಅಣಬೆಗಳಂತೆ ಹೋಂಸ್ಟೇಗಳು

ರಾಜ್ಯದಲ್ಲಿ ಅಣಬೆಗಳಂತೆ ಹೋಂಸ್ಟೇಗಳು ಬೆಳೆಯುತ್ತಿವೆ. ಇಂತಹ ಹೋಂಸ್ಟೇಗಳು ಎಲ್ಲೆಲ್ಲಿವೆ, ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲದಂತಾಗಿದೆ ಎಂದು ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್​ ಮೌಖಿಕವಾಗಿ ಆತಂಕ ವ್ಯಕ್ತಪಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಇನ್ನೊಂದು ನ್ಯಾಯಪೀಠ, ರಾಜ್ಯದಲ್ಲಿ ಕಾರ್ಯಾಚರಿಸುತ್ತಿರುವ ಹೋಂಸ್ಟೇಗಳ ನಿಯಂತ್ರಣಕ್ಕಾಗಿ ಸಮಗ್ರ ನೀತಿಯನ್ನು ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಬಂಧನ ಕಾನೂನುಬಾಹಿರ ಯಾಕೆ?:
ಅತ್ಯಾಚಾರ ಆರೋಪ ಹೋಂಸ್ಟೇ ಸಿಬ್ಬಂದಿಯ ವಿರುದ್ಧ ಮಾತ್ರ ಇತ್ತು. ಮಾಲೀಕನ ವಿರುದ್ಧ ಯಾವುದೇ ನೇರ ಆರೋಪ ಅಥವಾ ಟನಾ ಸ್ಥಳದಲ್ಲಿದ್ದ ಬಗ್ಗೆ ಸಾಕ್ಷ್ಯ ಇರಲಿಲ್ಲ. ಅವರ ವಿರುದ್ಧ ಮಾಡಲಾಗಿದ್ದ ಆರೋಪಗಳಿಗೆ ಸಂಬಂಧಿಸಿ ಬಂಧನಕ್ಕೆ ಅವಕಾಶ ಇರಲಿಲ್ಲ. ಬಂಧನ ಯಾಕೆ ಅನಿವಾರ್ಯವಾಗಿತ್ತು ಎಂಬುದಕ್ಕೆ ಪೊಲೀಸರು ಸೂಕ್ತ ಸಮರ್ಥನೆ ನೀಡಿಲ್ಲ ಮತ್ತು ಬಂಧನಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್​ ಹೊರಡಿಸಿರುವ ಮಾರ್ಗಸೂಚಿಯನ್ನು ಪೊಲೀಸರು ಪಾಲಿಸಿಲ್ಲ ಎಂದು ನ್ಯಾಯಪೀಠ ತೀರ್ಪಿನಲ್ಲಿ ಅವಲೋಕನ ಮಾಡಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net