ವಚನ ಸಾಹಿತ್ಯ ಅನುವಾದಕ್ಕೆ 5 ಕೋಟಿ ರೂ. ಅನುದಾನ

ವಿಜಯಪುರ ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವ ವಿದ್ಯಾಲಯದಲ್ಲಿ ಡಾ. ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳನ್ನು ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಬಿಡುಗಡೆ ಮಾಡಿದರು. ಭಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು, ಮೈಸೂರು ಕುಂದೂರಿನ ಡಾ. ಶರತಚಂದ್ರ ಸ್ವಾಮಿಗಳು, ಸಚಿವ. ಎಂ. ಬಿ. ಪಾಟೀಲ, ಉಮಾದೇವಿ ಕಲಬುರ್ಗಿ ಇತರರಿದ್ದಾರೆ.
ವಿಜಯಪುರ ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವ ವಿದ್ಯಾಲಯದಲ್ಲಿ ಡಾ. ಎಂ.ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ 40 ಸಂಪುಟಗಳನ್ನು ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಬಿಡುಗಡೆ ಮಾಡಿದರು. ಭಾಲ್ಕಿಯ ಡಾ. ಬಸವಲಿಂಗ ಪಟ್ಟದೇವರು, ಮೈಸೂರು ಕುಂದೂರಿನ ಡಾ. ಶರತಚಂದ್ರ ಸ್ವಾಮಿಗಳು, ಸಚಿವ. ಎಂ. ಬಿ. ಪಾಟೀಲ, ಉಮಾದೇವಿ ಕಲಬುರ್ಗಿ ಇತರರಿದ್ದಾರೆ.
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಎಂ.ಬಿ. ಪಾಟೀಲ ಭರವಸೆ
  • ಡಾ. ಕಲಬುರ್ಗಿ ಸಮಗ್ರ ಸಾಹಿತ್ಯ ಸಂಪುಟಗಳ ಲೋಕಾರ್ಪಣೆ
ವಿಜಯಪುರ: ಬಸವಾದಿ ಶರಣರು ಮತ್ತು ಅವರ ವಚನ ಸಾಹಿತ್ಯವನ್ನು ವಿಶ್ವದ ನಾನಾ ಭಾಷೆಗಳಿಗೆ ಅನುವಾದಿಸಿ ಪ್ರಸಾರ ಮಾಡುವ ಯೋಜನೆ ಪೂರ್ಣಗೊಳಿಸಲು ರೂ. 5 ಕೋಟಿ ಅನುದಾನ ನೀಡುವುದಾಗಿ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಭರವಸೆ ನೀಡಿದರು.

ನಗರದ ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಗ್ರಂಥಾಲಯ ಸಭಾಂಗಣದಲ್ಲಿ ವಚನಪಿತಾಮಹ ಡಾ. ಘ. ಗು. ಹಳಕಟ್ಟಿ ಸಂಶೋಧನ ಕೇಂದ್ರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಡಾ. ಎಂ. ಎಂ. ಕಲಬುರ್ಗಿ ಸಮಗ್ರ ಸಾಹಿತ್ಯ- 40 ಸಂಪುಟಗಳ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ವಚನಪಿತಾಮಹ ಡಾ. ಘ. ಗು. ಹಳಕಟ್ಟಿ ಅವರು ಬಸವಾದಿ ಶರಣರನ್ನು ಬೆಳಕಿಗೆ ತಂದರೆ, ಕಲಬುರ್ಗಿಯವರು ಹಳಕಟ್ಟಿಯವರ ಸಮಗ್ರ ಸಾಹಿತ್ಯ ಸಂಪಾದಿಸುವ ಮೂಲಕ ಅವರ ಸಂಶೋಧನೆ ಮತ್ತು ಸಾಹಿತ್ಯವನ್ನು ಬೆಳಕಿಗೆ ತಂದಿದ್ದಾರೆ. ಅಲ್ಲದೆ, ಸಂಶೋಧನ ಕೇಂದ್ರದಿಂದ ಆದಿಲ್ ಶಾಹಿ ಅರಸರ ದಖನಿ, ಪಾರ್ಸಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದ ಮಾಡಿಸಲು ನೆರವಾಗಿದ್ದಾರೆ. ಸಂಶೋಧನ ಕೇಂದ್ರದಿಂದ ಬಸವಾದಿ ಶರಣರು ಮತ್ತು ಅವರ ಸಾಹಿತ್ಯವನ್ನು ವಿಶ್ವದ ನಾನಾ ಭಾಷೆಗಳಿಗೆ ಅನುವಾದಿಸುವ ಕೆಲಸ ಈ ಹಿಂದೆ ಪ್ರಾರಂಭಿಸಲಾಗಿತ್ತು. ಅದನ್ನು ಮುಂದುವರಿಸಿ ಪೂರ್ಣಗೊಳಿಸಲು ಒಟ್ಟು ರೂ. 5 ಕೋಟಿ ಅನುದಾನ ನೀಡುತ್ತೇನೆ. ಈ ಸಾಹಿತ್ಯ ಜಗತ್ತಿನ ವಿಶ್ವವಿದ್ಯಾಲಯಗಳು, ಗಣ್ಯರಿಗೆ ತಲುಪುವಂತೆ ಮಾಡುತ್ತೇವೆ. ಬಸವ ಧರ್ಮ ಜಾಗತಿಕ ಧರ್ಮ ಮತ್ತು ಬಸವ ಸಂಸ್ಕೃತಿ ಜಾಗತಿಕ ಸಂಸ್ಕೃತಿಯಾಗುವರೆಗೂ ಅವರು ಬದುಕಿರಬೇಕಿತ್ತು ಎಂದ ಎಂ. ಬಿ. ಪಾಟೀಲರು, ಭಾಲ್ಕಿ ಸ್ವಾಮೀಜಿಗಳ ಆಶಯದಂತೆ ಸರ್ಕಾರ ಬೀದರಿನಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸಲಿದೆ ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದೇವರು ಮಾತನಾಡಿ, ಹಳಕಟ್ಟಿ ಸಂಶೋಧನ ಕೇಂದ್ರ ಮತ್ತು ಸಚಿವ ಎಂ. ಬಿ. ಪಾಟೀಲರ ಕಾರ್ಯ ಸದಾ ಸ್ಮರಣೀಯವಾಗಿರಲಿದೆ. ನಾನು ಐದು ವರ್ಷದಲ್ಲಿ ಅತ್ಯುತ್ತಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆನಂದ ಕ್ಷಣ ಇದಾಗಿದೆ. ಕಲಬುರ್ಗಿಯವರ ಬಗ್ಗೆ ಮೂರು ತಿಂಗಳು ಓದಿದರೂ ತಿಳಿಯಲು ಸಾಧ್ಯವಾಗದ ವಿಷಯಗಳನ್ನು ಇಂದು ವಿಚಾರ ಸಂಕಿರಣದಲ್ಲಿ ತಿಳಿದುಕೊಂಡಿದ್ದೇನೆ. ಇಲ್ಲಿ ಕಲಬುರ್ಗಿಯವರ ನಿಜದರ್ಶನವಾಗಿದೆ ಎಂದರು.

ರಾಜಕೀಯ ನಾಯಕರು ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಆಸಕ್ತಿ ಹೊಂದುವುದು ಅಪರೂಪ. ಆದರೆ, ಎಂ. ಬಿ. ಪಾಟೀಲರ ಕಾರ್ಯ ಆದರ್ಶ ಮಾತ್ರವಲ್ಲ, ಅನುಕರಣೀಯವಾಗಿದೆ. ಕಲಬುರ್ಗಿಯವರೊಂದಿಗಿನ ಒಡನಾಟದಿಂದ ಎಂ. ಬಿ. ಪಾಟೀಲರು ಸತ್ಯ ಮತ್ತು ಸುಳ್ಳನ್ನು ದಿಟ್ಟವಾಗಿ ಹೇಳುವ ಗಟ್ಟಿತನ ಬೆಳೆಸಿಕೊಂಡಿದ್ದಾರೆ. ಎಲ್ಲ ವಿದ್ವಾಂಸರು ಒಗ್ಗೂಡಿ ಬಸವಣ್ಣನವರ ಜನ್ಮದಿನಾಂಕ ಮತ್ತು ವರ್ಷದ ಬಗ್ಗೆ ಸಂಶೋಧನೆ ಮಾಡಬೇಕು. ವಚನ ಸಾಹಿತ್ಯದ ಕೆಲಸ ಇನ್ನೂ ಬಹಳಷ್ಟಿದೆ. ಬಸವಣ್ಣನ ರಥ ಜಾಗತಿಕ ಮಟ್ಟಕ್ಕೆ ತಲುಪಿಸುವ ಕೆಲಸ ಮಾಡೋಣ ಎಂದು ಹೇಳಿದರು.

ಹಿರಿಯ ಸಾಹಿತಿ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಕಲಬುರ್ಗಿಯವರೊಂದಿಗೆ ತಾವು ಹೊಂದಿದ್ದ ಒಡನಾಟ, ಚರ್ಚಿಸುತ್ತಿದ್ದ ಕವನ, ಸಾಹಿತ್ಯ, ನಾಟಕ, ಸಂಶೋಧನೆ ಮತ್ತು ಸ್ನೇಹವವನ್ನು ಮೆಲುಕು ಹಾಕಿದರು. ಈಗ ಬಿಡುಗಡೆಯಾಗಿರುವ ಸಂಪುಟಗಳಲ್ಲಿ ಕಲಬುರ್ಗಿಯವರು ಮಹಾಯಾನದ ಕಥೆ ಸಂಪುಟಗಳಲ್ಲಿದೆ. ಎಲ್ಲ ವಿದ್ಯಾಸಂಸ್ಥೆಗಳಿಗೆ ಆದರ್ಶವಾಗುವ ಅಂಶಗಳಿವೆ. ಎಲ್ಲ ಸಾಹಿತಿಗಳಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.

ಮೈಸೂರು ಕುಂದೂರು ಮಠದ ಡಾ. ಶರತಚಂದ್ರ ಸ್ವಾಮೀಜಿ ಮಾತನಾಡಿದರು.

ಉಮಾದೇವಿ ಕಲಬುರ್ಗಿ, ಡಾ. ವೀರಣ್ಣ ರಾಜೂರ, ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ, ಡಾ. ವೀರಣ್ಣ ರಾಜೂರ, ಡಾ. ಎಂ. ಎಸ್. ಮದಭಾವಿ, ಡಾ. ವಿಜಯ ಕೋರಿಶೆಟ್ಡಿ, ಡಾ. ವೈ.ಎಂ. ಜಯರಾಜ, ಡಾ. ಆರ್.ವಿ. ಕುಲಕರ್ಣಿ, ಡಾ. ಎಂ.ಎಂ. ಕಲಬುರ್ಗಿ ಕುಟುಂಬ ಸದಸ್ಯರು, ನಾನಾ ಹಿರಿಯ ಸಾಹಿತಿಗಳು ಉಪಸ್ಥಿತರಿದ್ದರು.

ಡಾ. ಮಹಾಂತೇಶ ಬಿರಾದಾರ ಸ್ವಾಗತಿಸಿದರು. ಡಾ. ಸುಭಾಸ ಕನ್ನೂರ ಮತ್ತು ಉಷಾದೇವಿ ನಿರೂಪಿಸಿದರು. ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ಕೃಷ್ಣ ಕೊಲ್ಹಾರಕುಲಕರ್ಣಿ ವಂದಿಸಿದರು.
40 ಸಂಪುಟವನ್ನು ಸಂಪಾದಿಸಿದ 15 ಸಂಶೋಧಕರಾದ ಡಾ. ವೀರಣ್ಣ ರಾಜೂರ, ಡಾ. ಕೃಷ್ಣ ಕೊಲ್ಹಾರಕುಲಕರ್ಣಿ, ಪಿ. ಬಿ. ಶಿರೂರ, ಡಾ. ಎಸ್.ಕೆ. ಕೊಪ್ಪಾ, ಡಾ. ಗುರುಪಾದ ಮರಿಗುದ್ದಿ, ಡಾ. ಕೆ.ರವೀಂದ್ರನಾಥ, ಡಾ. ಎಂ.ಪಿ. ಹಳ್ಳಿಕೇರಿ, ಡಾ. ಮಲ್ಲಿಕಾರ್ಜುನ ಮೇತ್ರಿ, ಡಾ. ಪಿ.ಕೆ. ರಾಠೋಡ, ಡಾ. ಹಣಮಂತ ಮೇಲಿನಮನಿ, ಡಾ. ಎಸ್.ಎಸ್. ಭಗವತಿ, ಶ್ರೀಧರ ತೋಡಕರ ಹಾಗೂ ಡಾ. ಎಂ. ಎಂ. ಕಲಬುರ್ಗಿ ಅವರ ಪತ್ನಿ ಉಮಾದೇವಿ ಕಲಬುರ್ಗಿ, ಡಾ. ಹನುಮಾಕ್ಷಿ ಗೋಗಿ, ಸಂಪುಟ ಮುದ್ರಕ ಬಸವರಾಜ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net