ದಶಕದಲ್ಲಿ ಟಿಇಟಿ ಅರ್ಹತೆ 4.47 ಲಕ್ಷ, ಶಿಕ್ಷಕರ ನೇಮಕವಾದದ್ದು ಕೇವಲ 28 ಸಾವಿರ

ದಶಕದಲ್ಲಿ ಟಿಇಟಿ ಅರ್ಹತೆ
ದಶಕದಲ್ಲಿ ಟಿಇಟಿ ಅರ್ಹತೆ
Published on

ಪ್ರಮುಖ ಮುಖ್ಯಾಂಶಗಳು

  • 2025ರ ಟಿಇಟಿಯಲ್ಲಿ ದಾಖಲೆ ಮಟ್ಟದಲ್ಲಿ 97,383 ಅಭ್ಯರ್ಥಿಗಳು ಅರ್ಹತೆ
  • ರಾಜ್ಯದಲ್ಲಿ ಟಿಇಟಿ ಪರಿಚಯವಾದ 2014ರಿಂದ ಈವರೆಗೂ ಒಟ್ಟಾರೆ 4,47,251 ಮಂದಿ ಅರ್ಹತೆ
  • ರಾಜ್ಯ ಸರ್ಕಾರವು ಕಳೆದ ಒಂದು ದಶಕದಲ್ಲಿ 2014-15ರಿಂದ 2024-25ರ ಅವಧಿಯಲ್ಲಿ ಶಿಕ್ಷಕರ ನೇಮಕ ಮಾಡಿರುವುದು ಕೇವಲ 28,277 ಮಂದಿಯಷ್ಟೇ
ಎನ್.ಎಲ್. ಶಿವಮಾದು
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ದಾಖಲಾತಿ ಸಂಖ್ಯೆ ಕುಸಿಯುತ್ತಿದ್ದರೆ, ಆದರೂ ಸರ್ಕಾರವು ಶಿಕ್ಷಕರ ನೇಮಕಾತಿ ಆಸಕ್ತಿ ತೋರುತ್ತಿಲ್ಲ. ಕಳೆದ ಒಂದು ದಶಕದಲ್ಲಿ ಸರ್ಕಾರಿ ಶಾಲೆಗಳಿಗೆ ಕೇವಲ 28 ಸಾವಿರ ಶಿಕ್ಷಕರನ್ನಷ್ಟೇ ನೇಮಕ ಮಾಡಿದೆ. ಇದೇ ಅವಧಿಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅರ್ಹತೆ ಪಡೆದಿರುವವರ ಸಂಖ್ಯೆ 4 ಲಕ್ಷ ದಾಟಿದೆ.
2025ರ ಟಿಇಟಿಯಲ್ಲಿ ದಾಖಲೆ ಮಟ್ಟದಲ್ಲಿ 97,383 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಹಾಗೆಯೇ, ರಾಜ್ಯದಲ್ಲಿ ಟಿಇಟಿ ಪರಿಚಯವಾದ 2014ರಿಂದ ಈವರೆಗೂ ಪ್ರಾಥಮಿಕ ಶಾಲೆಗಳಿಗೆ ಬೋಧಿಸಲು ಅರ್ಹತೆ ಪಡೆಯುವ ಪತ್ರಿಕೆ-1ರಲ್ಲಿ 1,38,856 ಮಂದಿ ಅರ್ಹತೆ ಪಡೆದಿದ್ದಾರೆ. ಅದೇ ರೀತಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ 6ರಿಂದ 8ನೇ ತರಗತಿ ಬೋಧಿಸಲು ಅರ್ಹತೆ ಪಡೆದಿರುವವರ ಸಂಖ್ಯೆ 3,08,395 ಮಂದಿ ಇದ್ದಾರೆ. ಒಟ್ಟಾರೆ 4,47,251 ಮಂದಿ ಅರ್ಹತೆ ಪಡೆದಿದ್ದಾರೆ.

10 ವರ್ಷದಲ್ಲಿ 28 ಸಾವಿರ ನೇಮಕಾತಿ:

ರಾಜ್ಯ ಸರ್ಕಾರವು ಈ ಹಿಂದೆ ಪ್ರತಿ ವರ್ಷ ಕನಿಷ್ಠ 10 ಸಾವಿರ ಶಿಕ್ಷಕರನ್ನು ನೇಮಕ ಮಾಡುವುದಾಗಿ ೋಷಿಸಿತ್ತು. ಆದರೆ, ಕಳೆದ ಒಂದು ದಶಕದಲ್ಲಿ 2014-15ರಿಂದ 2024-25ರ ಅವಧಿಯಲ್ಲಿ ಶಿಕ್ಷಕರ ನೇಮಕ ಮಾಡಿರುವುದು ಕೇವಲ 28,277 ಮಂದಿಯಷ್ಟೇ. ಆದರೆ, ಸರ್ಕಾರಿ ಶಾಲೆಗಳಲ್ಲಿ ನಿವೃತ್ತಿ, ಮರಣ, ವಿಆರ್‌ಎಸ್ ಸೇರಿ ಹಲವು ಕಾರಣಗಳಿಗೆ ಶಿಕ್ಷಕರ ಸಂಖ್ಯೆ ಕಡಿಮೆಯಾಗುತ್ತಲೇ ಇದೆ.
ಪ್ರತಿ ಎರಡರಿಂದ ಮೂರು ವರ್ಷಗಳಿಗೊಮ್ಮೆ ನೇಮಕಾತಿ ನಡೆಸುತ್ತಿರುವುದರಿಂದ ನಿವೃತ್ತಿ ಶಿಕ್ಷಕರ ಹುದ್ದೆಗಳನ್ನೂ ಸಹ ಭರ್ತಿ ಮಾಡದಂತಾಗಿದೆ. ಅಲ್ಲದೆ, ಕೇವಲ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಮಾತ್ರ ನೇಮಕ ಮಾಡುತ್ತಿರುವುದರಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಅತಿಥಿ ಶಿಕ್ಷಕರನ್ನೇ ನೆಚ್ಚಿಕೊಂಡು ಬೋಧನಾ ಕಾರ್ಯ ಪೂರ್ಣಗೊಳಿಸಬೇಕಿದೆ.
ಕಳೆದ 10 ವರ್ಷದಲ್ಲಿ ಪ್ರಾಥಮಿಕ ಶಾಲೆಗಳಿಗೆ 1,929, ಹಿರಿಯ ಪ್ರಾಥಮಿಕ ಶಾಲೆಗಳಿಗೆ 24,711 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು (ಜಿಪಿಟಿ) ಮತ್ತು ಪ್ರೌಢಶಾಲೆಗಳಿಗೆ 1,637 ಸೇರಿ ಒಟ್ಟು 28,277 ಶಿಕ್ಷಕರನ್ನಷ್ಟೇ ನೇಮಕ ಮಾಡಲಾಗಿದೆ.

ಪ್ರತಿ ವರ್ಷ ನೇಮಕಾತಿಗೆ ಆಗ್ರಹ

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗುವವರು ಪದವಿ, ಬಿ.ಇಡಿ ಜತೆಗೆ ಟಿಇಟಿ ಕೂಡ ಅರ್ಹತೆ ಪಡೆದಿರಬೇಕೆಂದು ಕಳೆದ 11 ವರ್ಷಗಳಿಂದ ಟಿಇಟಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ, ಅಂದಿನಿಂದ ಈ ವರೆಗೆ ಕೇವಲ ನಾಲ್ಕು ಬಾರಿ ಮಾತ್ರ ನೇಮಕಾತಿ ಮಾಡಿದ್ದಾರೆ. ಇದರಿಂದ ಟಿಇಟಿ ಅರ್ಹ ಶಿಕ್ಷಕರು ನೇಮಕಾತಿ ಪ್ರಕ್ರಿಯೆಯನ್ನೇ ಎದುರು ನೋಡಬೇಕಿದೆ. ಆದ್ದರಿಂದ ಪ್ರತಿ ವರ್ಷ ಶಿಕ್ಷಕರ ನೇಮಕಾತಿಯಾದಲ್ಲಿ ಅನುಕೂಲವಾಗಲಿದೆ ಎಂದು ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಆಗ್ರಹಿಸಿದ್ದಾರೆ.
ಈಗಾಗಲೇ ಬಿ.ಇಡಿ ಪದವೀಧರರಿಗೆ ಟಿಇಟಿ ನಡೆಸುವುದರಿಂದ ಹೆಚ್ಚುವರಿ ಹೊರೆ ಎನಿಸಲಿದೆ ಖಾಸಗಿ ಶಾಲೆಗಳಲ್ಲಿಯೂ ಟಿಇಟಿ ಅರ್ಹತೆ ಕೇಳುತ್ತಿದ್ದಾರೆ. ಆದರೆ, ಪ್ರತಿ ವರ್ಷ ಟಿಇಟಿ ಪರೀಕ್ಷೆ ನಡೆಸಲಾಗುತ್ತಿದೆಯೇ ವಿನಾ ನೇಮಕಾತಿ ಪರೀಕ್ಷೆ ನಡೆಸುವ ಕಡೆ ಸರ್ಕಾರ ಗಮನ ಹರಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

61,525 ಸಾವಿರ ಶಿಕ್ಷಕರ ಹುದ್ದೆ ಖಾಲಿ

ರಾಜ್ಯದಲ್ಲಿ 41,905 ಪ್ರಾಥಮಿಕ ಮತ್ತು 4,871 ಪ್ರೌಢ ಶಾಲೆ ಸೇರಿ ಒಟ್ಟು 46,776 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪ್ರಾಥಮಿಕ ಶಾಲೆಗಳಿಗೆ 1,88,531 ಹುದ್ದೆಗಳು ಮಂಜೂರಾಗಿದ್ದು, 1,38,802 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 49,729 ಹುದ್ದೆಗಳು ಖಾಲಿ ಇವೆ. ಹಾಗೆಯೇ ಪ್ರೌಢ ಶಾಲೆ ವಿಭಾಗದಲ್ಲಿ 44,406 ಹುದ್ದೆಗಳು ಮಂಜೂರಾಗಿದ್ದು, 32,610 ಮಂದಿ ಕಾರ್ಯ ನಿರ್ವಹಿಸುತ್ತಿದ್ದು, 11,796 ಹುದ್ದೆಗಳು ಖಾಲಿ ಇವೆ. ಒಟ್ಟು 61,525 ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಕಾಯಂ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಶಿಕ್ಷಣ ಇಲಾಖೆಯು ಕಳೆದ ವರ್ಷ ಪ್ರಾಥಮಿಕ ಮತ್ತು ಪ್ರೌಢಶಾಲೆ ಸೇರಿ ಒಟ್ಟು 43 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿತ್ತು. ಅದರ ಹೊರತಾಗಿಯೂ ಸುಮಾರು 19 ಸಾವಿರ ಹುದ್ದೆಗಳು ಖಾಲಿ ಉಳಿದಿವೆ.
ಟಿಇಟಿ ಅರ್ಹತೆ ಪತ್ರಿಕೆ-1

1,28,856

ಟಿಇಟಿ ಅರ್ಹತೆ ಪತ್ರಿಕೆ-2

3,08,395

ಕಳೆದ 10 ವರ್ಷದಲ್ಲಿ ಶಿಕ್ಷಕರ ನೇಮಕ
ಪ್ರಾಥಮಿಕ ಶಾಲೆ
ವರ್ಷ ಭರ್ತಿಯಾದ ಹುದ್ದೆ
2015 1,929
ಜಿಪಿಟಿ ಶಿಕ್ಷಕರ ನೇಮಕ ಹಿರಿಯ ಪ್ರಾಥಮಿಕ ಶಾಲೆ
ವರ್ಷ ಭರ್ತಿಯಾದ ಹುದ್ದೆ
2015 5,976
2018 3,389
2020 1,994
2023 13,352
ಪ್ರೌಢಶಾಲೆ
ವರ್ಷ ಭರ್ತಿಯಾದ ಹುದ್ದೆ
2015 1,637
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net