ಕುಸುಬೆ ಖರೀದಿಗೆ 42 ಕೇಂದ್ರ ಸ್ಥಾಪನೆ

,
,
Published on

ಪ್ರಮುಖ ಮುಖ್ಯಾಂಶಗಳು

  • ಕಲಬುರಗಿಯಲ್ಲಿ 7,223 ಟನ್​ ಉತ್ಪಾದನೆ ನಿರೀಕ್ಷೆ
  • 9557.13 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆ
ಕಲಬುರಗಿ: ರಾಜ್ಯ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳ (ಕೆಒಎಫ್​) ಸಂಸ್ಥೆಯಡಿ ಜಿಲ್ಲೆಯಲ್ಲಿ ಕುಸುಬೆ ಖರೀದಿಗೆ 42 ಖರೀದಿ ಕೇಂದ್ರಗಳನ್ನು ತೆರೆಯಲು ಜಿಲ್ಲಾ ಟಾಸ್ಕ್​ ಫೋರ್ಸ್​ ಸಮಿತಿ ತೀರ್ಮಾನಿಸಿದೆ. ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿ ನಿರ್ವಹಿಸಲು ಮೇಲ್ವಿಚಾರಣೆಗಾಗಿ ಸೂಕ್ತ ನೋಡಲ್​ ಅಧಿಕಾರಿಗಳನ್ನು ನೇಮಿಸಲು ನಿರ್ಧರಿಸಿದೆ.
ಕಲಬುರಗಿ ತಾಲೂಕಿನ ಅವರಾದ (ಬಿ), ಫರಹತಾಬಾದ್​, ಮಿಣಜಗಿ, ಹೊನ್ನಕಿರಣಗಿ, ಫಿರೋಜಾಬಾದ್​, ಭೀಮಳ್ಳಿ, ಹರಸೂರ. ಸೇಡಂ ತಾಲೂಕಿನ ರಂಜೋಳಾ, ಕೋಡ್ಲಾ, ಮೋತಕಪಲ್ಲಿ, ಕೋಡ್ಲಾ, ಮುಧೋಳ, ಊಡಗಿ, ಕಾನಗಡ್ಡಾ. ಅಫಜಲಪುರ ತಾಲೂಕಿನ ಮಲ್ಲಾಬಾದ್​, ಕರಜಗಿ, ಆಳಂದ ತಾಲೂಕು ಖಜೂರಿ, ಕಡಗಂಚಿ, ಸರಸಂಬಾ. ಚಿಂಚೋಳಿ ತಾಲೂಕಿನ ಐನೋಳ್ಳಿ, ಚಿಮ್ಮನಚೂಡ, ಪೋಲಕಪಳ್ಳಿ, ಚಿಂಚೋಳಿ. ಚಿತ್ತಾಪುರ ತಾಲೂಕಿನ ಡೊಣಗಾಂವ್​, ನಾಲವಾರ, ಆಲೂರ(ಬಿ), ಜೇವರ್ಗಿ ತಾಲೂಕಿನಲ್ಲಿ ಗುಡೂರ ಎಸ್​ಐ, ನೆಲೋಗಿ, ಅಂಕಲಗಾ, ಆಂದೋಲಾ, ಕಮಲಾಪುರ ತಾಲೂಕಿನ ಕಮಲಾಪುರ, ಮಹಾಗಾಂವ್​, ಶಹಾಬಾದ್​ ತಾಲೂಕಿನ ಮರತೂರ, ಭಂಕೂರ, ಕಾಳಗಿ ತಾಲೂಕಿನ ಅರಣಕಲ್​, ಕಾಳಗಿ, ಕೋಡ್ಲಿ, ಹೆಬ್ಬಾಳ್​, ಯಡ್ರಾಮಿ ತಾಲೂಕಿನಲ್ಲಿ ಸುಂಬಡ, ಇಜೇರಿ, ಯಡ್ರಾಮಿ, ಆಲೂರುಗಳಲ್ಲಿ ಖರೀದಿ ಕೇಂದ್ರ ಸ್ಥಾಪಿಸಲಾಗುತ್ತಿದೆ.
ಜಿಲ್ಲೆಯಲ್ಲಿ 2025&26ನೇ ಸಾಲಿಗೆ 9557.13 ಹೆಕ್ಟೇರ್​ ಪ್ರದೇಶದಲ್ಲಿ ಕುಸುಬೆ ಬಿತ್ತನೆಯಾಗಿದ್ದು, ಈ ಪೈಕಿ ಅಫಜಲಪುರ 140.8, ಆಳಂದ 1915.9, ಚಿಂಚೋಳಿ 529.8, ಚಿತ್ತಾಪುರ 966.4, ಕಾಳಗಿ 626.2, ಕಲಬುರಗಿ 1802.2, ಕಮಲಾಪುರ 799.4, ಜೇವರ್ಗಿ 793.6, ಯಡ್ರಾಮಿ 18.4, ಸೇಡಂ 1338.7 ಹೆಕ್ಟೇರ್​ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಸುಮಾರು 7223 ಟನ್​ ಉತ್ಪಾದನೆ ನಿರೀಕ್ಷೆ ಇದೆ.
ರೈತರ ನೋಂದಣಿ ಕಾಲಾವಧಿಯನ್ನು 80 ದಿನ, ಖರೀದಿ ಅವಧಿ 90 ದಿನಗಳವರೆಗೆ ನಿಗದಿಪಡಿಸಿದೆ. ನೋಂದಣಿ ಪ್ರಕ್ರಿಯೆ ಈಗಾಗಲೇ ಶುರುವಾಗಿದೆ. ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್​ ಕುಸುಬೆಗೆ 6,540 ರೂ. ಬೆಂಬಲ ಬೆಲೆ ನಿಗದಿಪಡಿಸಿದೆ. ಗರಿಷ್ಠ 6923 ಮೆ.ಟನ್​ ಗುಣಮಟ್ಟದ ಕುಸುಬೆ ಉತ್ಪನ್ನ ಖರೀದಿಸುವುದು, ಪ್ರತಿ ಎಕರೆಗೆ 5 ಕ್ವಿಂಟಾಲ್​ನಂತೆ ಪ್ರತಿ ರೈತರಿಂದ ಗರಿಷ್ಠ ಪ್ರಮಾಣ 20 ಕ್ವಿಂಟಾಲ್​ ಖರೀದಿಸಲು ನಿಗದಿಪಡಿಸಲಾಗಿದೆ. ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿಯಂತೆ ರೈತರಿಗೆ ನಿಗದಿತ ಅವಧಿಯೊಳಗೆ ಖರೀದಿ ಪ್ರಮಾಣದ ಮೌಲ್ಯವನ್ನು ಆಧಾರ್​ ಜೋಡಣೆಯ ಬ್ಯಾಂಕ್​ ಖಾತೆಗೆ ಡಿಬಿಟಿ ಮೂಲಕ ಜಮೆ ಆಗುವಂತೆ ಪಾವತಿ ಮಾಡಬೇಕು. ಆವರ್ತ ನಿಧಿ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ.

ನೋಂದಣಿ ಜತೆಗೆ ಖರೀದಿ ಪ್ರಕ್ರಿಯೆಯೂ ಶುರುವಾಗಲಿದೆ. ಕುಸುಬೆ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಕುಸುಬೆ ಉತ್ಪನ್ನ ಖರೀದಿಸದಂತೆ, ಖರೀದಿ ಸಂಸ್ಥೆಗಳು ಯಾವುದೇ ರೀತಿಯ ದುರುಪಯೋಗ ಆಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net