2ನೇ ಪತ್ನಿ ಕೂಡ ಅಪಘಾತ ಪರಿಹಾರಕ್ಕೆ ಅರ್ಹ| High court

High court
High court
Published on
ಬೆಂಗಳೂರು: ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಅಪಘಾತ ಪರಿಹಾರವನ್ನು ನಿರ್ಧರಿಸುವಾಗ ಮೃತರ ಮೇಲಿನ ಆರ್ಥಿಕ ಅವಲಂಬನೆ ಮುಖ್ಯವಾಗುತ್ತದೆಯೇ ಹೊರತು ಕಾನೂನಾತ್ಮಕ ಸ್ಥಾನಮಾನವಲ್ಲ. ಆದ್ದರಿಂದ ಮೃತನ ಎರಡನೇ ಪತ್ನಿಗೆ ಅಪಘಾತ ಪರಿಹಾರ ಪಡೆಯುವ ಹಕ್ಕಿದೆ ಎಂದು ಹೈಕೋರ್ಟ್​ ಸ್ಪಷ್ಟಪಡಿಸಿದೆ.
ಅಪಘಾತ ಪರಿಹಾರ ಪ್ರಕರಣವೊಂದರಲ್ಲಿ ಪರಿಹಾರ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜಯಂತ್​ ಬ್ಯಾನರ್ಜಿ ಮತ್ತು ತಾರಾ ವಿತಸ್ತಾ ಗಂಜು ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ಮೃತರ ಮೊದಲ ಮತ್ತು ಎರಡನೇ ಪತ್ನಿಯರು ಪರಿಹಾರದ ಮೊತ್ತವನ್ನು ಶೇ. 50ರಷ್ಟು ಹಂಚಿಕೊಳ್ಳಲು ಒಪ್ಪಂದ ಮಾಡಿರುವುದನ್ನು ದಾಖಲಿಸಿಕೊಂಡಿರುವ ನ್ಯಾಯಾಪೀಠ ಪರಿಹಾರವನ್ನು 15.10 ಲಕ್ಷ ರೂಪಾಯಿಯಿಂದ 30.12 ಲಕ್ಷ ರೂ. ಗೆ ಏರಿಸಿ ಆದೇಶಿಸಿದೆ.
2019ರ ಮಾರ್ಚ್​ನಲ್ಲಿ ನಡೆದಿದ್ದ ಅಪಘಾತವೊಂದರಲ್ಲಿ 34 ವರ್ಷದ ದಾವಣಗೆರೆಯ ರೈತರೊಬ್ಬರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಅಪಘಾತ ಪರಿಹಾರ ಕೋರಿ ಮೃತರ ಮೊದಲ ಪತ್ನಿ ಮತ್ತು ತಾಯಿ ಅಪಘಾತ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಮೃತರ ಎರಡನೇ ಪತ್ನಿ ಮತ್ತು 8 ವರ್ಷದ ಅಪ್ರಾಪ್ತ ಮಗಳು ಕೂಡ ತಮಗೂ ಪರಿಹಾರದ ಹಕ್ಕಿದೆ ಎಂದು ಅರ್ಜಿ ಸಲ್ಲಿಸಿದ್ದರು. ಆದರೆ, ವಿವಾಹದ ಕಾನೂನುಬದ್ಧತೆಯನ್ನು ನಿರ್ಧರಿಸುವ ಪ್ಯಾಪ್ತಿ ತನಗಿಲ್ಲ ಎಂದಿದ್ದ ನ್ಯಾಯಮಂಡಳಿ, ಅವರಿಗೆ ಪಾಲು ಹಂಚಿಕೆ ಮಾಡದೆ ಒಟ್ಟು 15.10 ಲಕ್ಷ ರೂ. ಪರಿಹಾರವನ್ನು ಘೋಷಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.
ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್​ನ ವಿಭಾಗೀಯ ನ್ಯಾಯಪೀಠ, ಸುಪ್ರೀಂ ಕೋರ್ಟ್​ ಈ ಹಿಂದೆ ನೀಡಿರುವ ಹಲವು ಮಹತ್ವದ ತೀರ್ಪುಗಳನ್ನು ಉಲ್ಲೇಖಿಸಿ ಈ ಆದೇಶ ನೀಡಿದೆ. 

ಸುಪ್ರೀಂ ಆದೇಶದ ಉಲ್ಲೇಖ

ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ಕಾನೂನಾತ್ಮಕ ಪ್ರತಿನಿಧಿ ಎಂಬ ಪದಕ್ಕೆ ವಿಶಾಲ ಅರ್ಥ ನೀಡಬೇಕು. ಅಪಘಾತದಿಂದಾಗಿ ಯಾರು ನಷ್ಟವನ್ನು ಅನುಭವಿಸುತ್ತಾರೋ, ಅವರೆಲ್ಲರಿಗೂ ಪರಿಹಾರ ಕೋರುವ ಹಕ್ಕಿದೆ. ಪರಿಹಾರವನ್ನು ನಿರ್ಧರಿಸುವಾಗ ಮೃತರೊಂದಿಗಿನ ಕಾನೂನುಬದ್ಧ ಸಂಬಂದಕ್ಕಿಂತ ಹೆಚ್ಚಾಗಿ, ಅವರ ಮೇಲಿದ್ದ ಆರ್ಥಿಕ ಅವಲಂಬನೆ ಮುಖ್ಯವಾದ ಅಂಶವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಈ ಅಂಶಗಳನ್ನು ಪರಿಗಣಿಸಿರುವ ನ್ಯಾಯಪೀಠ, ಈ ಪ್ರಕರಣದಲ್ಲಿ ಮೊದಲನೇ ಮತ್ತು ಎರಡನೇ ಪತ್ನಿಯರು, ತಾಯಿ ಮತ್ತು ಅಪ್ರಾಪ್ತ ಮಗಳು ಮೃತನನ್ನು ಆರ್ಥಿಕವಾಗಿ ಅವಲಂಬಿಸಿದ್ದರು ಎಂದು ಪರಿಗಣಿಸಿ ಪರಿಹಾರ ಹಂಚಿಕೆ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net