ಆವಾಸ ಯೋಜನೆಯಲ್ಲಿ 29.24 ಕೋಟಿ ರೂ.ಅವ್ಯವಹಾರ

ಕರ್ನಾಟಕ ಲೋಕಾಯುಕ್ತ
ಕರ್ನಾಟಕ ಲೋಕಾಯುಕ್ತ
Published on
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ರಾಮದುರ್ಗ ತಾಲೂಕಿನ  ಕೊಳಗೇರಿ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆ ಸರ್ವರಿಗೂ ಸೂರು (ನಗರ)-2022 ಯೋಜನೆಯಡಿ ಅಂದಾಜು 29.24 ಕೋಟಿ ರೂ. ಅವ್ಯವಹಾರ ಆರೋಪದ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಬೆಳಗಾವಿ ಉಪವಿಭಾಗ ಕಚೇರಿ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತ  ಬಿ.ಎಸ್.ಶಂಭುಲಿಂಗಪ್ಪ, ಬೆಂಗಳೂರು ಮೂಲದ ಖಾಸಗಿ ಗುತ್ತಿಗೆದಾರ ಎನ್.ಪಿ.ಪ್ರಸಾದ ಹಾಗೂ ಇತರರ ವಿರುದ್ಧ ನಕಲಿ ಬಿಲ್ ಸೃಷ್ಟಿಸಿ ಸರ್ಕಾರದ ಕೋಟ್ಯಂತರ ರೂ. ದುರುಪಯೋಗ ಮಾಡಿಕೊಂಡಿರುವ ಕುರಿತು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಯೋಜನೆಯ ಫಲಾನುಭವಿಗಳಿಗೆ ನಿಯಮಾನುಸಾರ ಮನೆ ನಿರ್ಮಿಸಿಕೊಡದೇ ಇದ್ದರೂ ಸಹ, ಕಾಮಗಾರಿ ಪೂರ್ಣಗೊಂಡಂತೆ ನಕಲಿ ದಾಖಲೆ ಹಾಗೂ ಬಿಲ್ ಸೃಷ್ಟಿಸಿ ಮಂಡಳಿಯ ವಿವಿಧ ಹಂತದ ಅಧಿಕಾರಿಗಳ ಮೂಲಕ ಅನುಮೋದನೆ ಪಡೆಯಲಾಗಿದೆ. ಉಪವಿಭಾಗ ಹಾಗೂ ವಿಭಾಗ ಮಟ್ಟದ ಅಧಿಕಾರಿಗಳು ಕಾಮಗಾರಿ ಸ್ಥಳ ಪರಿಶೀಲನೆ ನಡೆಸದೇ, ಜಿಪಿಎಸ್ ಆಧಾರಿತ ಛಾಯಾಚಿತ್ರ ಪಡೆಯದೇ, ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಂತೆ ಸುಳ್ಳು ವರದಿ ಸಿದ್ದಪಡಿಸಿದ್ದಾರೆ. 2019ರಿಂದ 2024ರವರೆಗೆ ವಿವಿಧ ಹಂತಗಳಲ್ಲಿ 29,45,42,035 ರೂ. ಮೊತ್ತವನ್ನು ಗುತ್ತಿಗೆದಾರನಿಗೆ ಪಾವತಿಸಿರುವ ಕುರಿತು ಲೋಕಾಯುಕ್ತ ಬೆಳಗಾವಿ ವಿಭಾಗದ ಆರಕ್ಷಕ ನಿರೀಕ್ಷಕ ಎಸ್.ಎಚ್. ಹೊಸಮನಿ ಪೂರ್ವಭಾವಿ ವಿಚಾರಣೆ ನಡೆಸಿ ಪ್ರಾಥಮಿಕ ವರದಿ ಸಲ್ಲಿಸಿದ್ದರು.
ಗುತ್ತಿಗೆದಾರರು ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡುವ ಬದಲು ಮರಳು, ಕಬ್ಬಿಣ, ಸಿಮೆಂಟ್ ಸೇರಿದಂತೆ ಕಟ್ಟಡ ಸಾಮಗ್ರಿ ಮಾತ್ರ ಪೂರೈಸಿದ್ದಾರೆ. ಪ್ರತಿ ಫಲಾನುಭವಿಗೆ 1.10 ಲಕ್ಷ ರೂ.ರಂತೆ 600 ಫಲಾನುಭವಿಗಳಿಗೆ 6.10 ಕೋಟಿ ರೂ. ಮೌಲ್ಯದ ಸಾಮಗ್ರಿ ಪೂರೈಸಲಾಗಿದೆ. ಆದರೆ, ಸರ್ಕಾರದಿಂದ ಬಿಡುಗಡೆಯಾದ ಒಟ್ಟು ಬಿಲ್ ಮೊತ್ತದಲ್ಲಿ ಈ ವೆಚ್ಚವನ್ನು ಹೊರತುಪಡಿಸಿ, ಅಂದಾಜು 23,35,42,032 ರೂ. ಹೆಚ್ಚುವರಿ ಮೊತ್ತವನ್ನು ಗುತ್ತಿಗೆದಾರರಿಗೆ ಅಕ್ರಮವಾಗಿ ಪಾವತಿಸಿ ಸರ್ಕಾರಕ್ಕೆ ನಷ್ಟ ಉಂಟುಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಆರಕ್ಷಕ ನಿರೀಕ್ಷಕ ವೆಂಕಟೇಶ ಯಡಹಳ್ಳಿ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net