ಇನ್ನೂ ಸಂಪರ್ಕಕ್ಕೆ ಸಿಗದ 27 ಕನ್ನಡಿಗರು: ಗೂಗಲ್ ಫಾರ್ಮ್​​ನಲ್ಲಿ 31 ಮಂದಿ ನೋಂದಣಿ- 27 Kannadigas still unreachable

ನೇಪಾಳದಲ್ಲಿ ಸಂಭವಿಸಿದ ಹಠಾತ್ ಭೀಕರ ಪ್ರವಾಹ
ನೇಪಾಳದಲ್ಲಿ ಸಂಭವಿಸಿದ ಹಠಾತ್ ಭೀಕರ ಪ್ರವಾಹ
Published on

ಬೆಂಗಳೂರು: ನೇಪಾಳದಲ್ಲಿ ಸಂಭವಿಸಿದ ಹಠಾತ್ ಭೀಕರ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ 27 ಕನ್ನಡಿಗರು ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಅವರ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.

ವಿಶೇಷ ಗೂಗಲ್ ಫಾರ್ಮ್‌ನಲ್ಲಿ ಇದುವರೆಗೆ ನೋಂದಾಯಿಸಿಕೊಂಡಿರುವ 31 ಮಂದಿ ಪೈಕಿ 4 ಮಂದಿ ಸುರಕ್ಷಿತವಾಗಿದ್ದು, ಸಂಪರ್ಕಕ್ಕೆ ಸಿಕ್ಕಿದ್ದಾರೆ. ಆದರೆ, 2 ದಿನಗಳಿಂದ 27 ಪ್ರವಾಸಿಗರು ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಲ್ಲಿ ಬೆಂಗಳೂರಿನ ಮೂಲದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಧಾರವಾಡ, ಮೈಸೂರು ಮತ್ತು ವಿಜಯನಗರದ ತಲಾ ಓರ್ವ ಮಂದಿ ಇದ್ದಾರೆ.
ದುರಂತ ಸಂಭವಿಸಿದ್ದ ಸ್ಥಳದಲ್ಲಿ ನೆಟ್‌ವರ್ಕ್ ಸೇರಿ ಅನೇಕ ಸಮಸ್ಯೆಗಳಿವೆ. ಸಂಪೂರ್ಣವಾಗಿ ರಸ್ತೆ ಮಾರ್ಗಗಳು ಹಾಳಾಗಿರುವ ಕಾರಣ ಅಲ್ಲಿಂದ ಬೇರೆ ಕಡೆಗೆ ತೆರಳಲು ಪ್ರವಾಸಿಗರು ಸಾಧ್ಯವಾಗಿಲ್ಲ ಅನ್ನಿಸುತ್ತದೆ. ಆದರೆ, ಕಾಣೆಯಾಗಿರುವ ಕನ್ನಡಿಗರ ಪತ್ತೆಗಾಗಿ ದೆಹಲಿಯ ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್, ಕೇಂದ್ರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಭಾರತೀಯ ರಾಯಭಾರಿ ಕಚೇರಿಗಳ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿ ಇದ್ದಾರೆ. ರೆಸಿಡೆಂಟ್ ಕಮಿಷನರ್ ಬಳಿ ನಿರಂತರವಾಗಿ ನಾವು ಮಾಹಿತಿ ಪಡೆಯುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ(ಕೆಎಸ್‌ಡಿಎಂಎ) ಅಧಿಕಾರಿಗಳು, ವಿಜಯವಾಣಿಗೆ ತಿಳಿಸಿದ್ದಾರೆ.
ಕನ್ನಡಿಗರ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಸರ್ಕಾರವು ಸಮರೋಪಾದಿ ಕ್ರಮಕೈಗೊಂಡಿದೆ. ಸಿಎಂ ಡಿ.ಕೆ.ಶಿವಕುಮಾರ್, ಡಿಸಿಎಂ ಡಾ.ಜಿ.ಪರಮೇಶ್ವರ ಅವರು, ನೇಪಾಳದ ಪರಿಸ್ಥಿತಿಯನ್ನು ನೇರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಬಾಧಿತ ಪ್ರದೇಶಗಳಲ್ಲಿರುವ ಕನ್ನಡಿಗರ ಕ್ಷೇಮಾಭಿವೃದ್ಧಿಗಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಕರ್ನಾಟಕ ಭವನದ ರೆಸಿಡೆಂಟ್ ಕಮಿಷನರ್ ಅವರೊಂದಿಗೆ ಸಿಎಂ ಮತ್ತು ಡಿಸಿಎಂ ನಿರಂತರ ಸಂಪರ್ಕದಲ್ಲಿದ್ದಾರೆ. ಪರಿಸ್ಥಿತಿಯ ಮೇಲ್ವಿಚಾರಣೆಗೆ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ 24*7 ಕಾಲ ಕಾರ್ಯಾಚರಿಸುತ್ತಿದೆ. ವಿದೇಶಾಂಗ ಸಚಿವಾಲಯದ ಕ್ಷಿಪ್ರ ಪ್ರತಿಕ್ರಿಯೆ ಕೋಶ ಮತ್ತು ಗೃಹ ಸಚಿವಾಲಯದ ಸಮಗ್ರ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಮನ್ವಯ ಸಾಧಿಸುತ್ತಿದೆ. ಕಠ್ಮಂಡು ಮತ್ತು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳೊಂದಿಗೆ ಕರ್ನಾಟಕ ಭವನ ಸಂಪರ್ಕದಲ್ಲಿದ್ದು, ಕನ್ನಡಿಗರನ್ನು ಸುರಕ್ಷಿತವಾಗಿ ರಕ್ಷಿಸಲು ಪ್ರತ್ಯೇಕ ತಂಡವನ್ನು ಈಗಾಗಲೇ ರಚಿಸಲಾಗಿದೆ.
ಸುರಕ್ಷಿತ ಸ್ಥಳದಲ್ಲೇ ಉಳಿದುಕೊಳ್ಳಿ:
ಬಾಧಿತ ಪ್ರದೇಶಗಳಲ್ಲಿರುವ ಕನ್ನಡಿಗರು ಸುರಕ್ಷಿತ ಸ್ಥಳಗಳಲ್ಲೇ ಉಳಿದುಕೊಳ್ಳಬೇಕು. ಸ್ಥಳೀಯ ಆಡಳಿತ ಮತ್ತು ಭಾರತೀಯ ರಾಯಭಾರ ಕಚೇರಿ ನೀಡುವ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಅಧಿಕೃತ ಸೂಚನೆ ಲಭ್ಯವಾಗುವವರೆಗೆ ಅಪಾಯಕಾರಿ ಮಾರ್ಗಗಳಲ್ಲಿ ಪ್ರಯಾಣಿಸಬಾರದು ಎಂದು ಅಲ್ಲಿನ ಕನ್ನಡಿಗರಿಗೆ, ಸರ್ಕಾರ ಮನವಿ ಮಾಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net