6 ವರ್ಷದಲ್ಲಿ 98 ಕಳಪೆ ಗುಣಮಟ್ಟ ಔಷಧಗಳ ಪತ್ತೆ: ರೋಗಿಗಳ ಜೀವಕ್ಕೆ ನಕಲಿ ಔಷಧಗಳ ಕಂಟಕ- Fake medicines

ಕಳಪೆ ಗುಣಮಟ್ಟ ಔಷಧಗಳು
ಕಳಪೆ ಗುಣಮಟ್ಟ ಔಷಧಗಳು
Published on

ಹರೀಶ್ ಬೇಲೂರು ಬೆಂಗಳೂರು

ರೋಗಿಗಳ ಜೀವನದ ಜತೆ ಚೆಲ್ಲಾಟವಾಡುತ್ತಿರುವ ‘ನಕಲಿ ಔಷಧ ಜಾಲ’ ಪತ್ತೆಯಾಗಿರುವ ನಡುವೆಯೂ 2021-22 ರಿಂದ 2026ರ ಆಗಸ್ಟ್‌ವರೆಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಪ್ರಯೋಗಾಲಯದಲ್ಲಿ 98 ಕಳಪೆ ಗುಣಮಟ್ಟ (ಎನ್‌ಎಸ್‌ಕ್ಯೂ) ಔಷಧಗಳು ಪತ್ತೆಯಾಗಿವೆ. ಇದರಲ್ಲಿ ಅತಿ ಹೆಚ್ಚು ಮಾತ್ರೆ, ಸಿರಪ್​​ಗಳೇ ಹೆಚ್ಚಿವೆ.
2020-21ರಿಂದ 2025-26ರವರೆಗೆ 15 ಕಳಪೆ ಔಷಧಗಳನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ನಕಲಿ ಔಷಧಗಳ ಸರಬರಾಜು ಮಾಡಿರುವ 26 ಔಷಧ ಕಂಪನಿಗಳ ಪೈಕಿ 6 ಕಂಪನಿಗಳ ವಿರುದ್ಧ ಮಾತ್ರ ಕಾನೂನು ಕ್ರಮ ಜರುಗಿಸಲು ಅನುಮತಿ ಸಿಕ್ಕಿದೆ. ಉಳಿದ ಕಂಪನಿಗಳ ವಿರುದ್ಧ ತನಿಖೆಗೆ ಅನುಮತಿ ಸಿಕ್ಕಿಲ್ಲ. ಇದರಿಂದ ಕಳಪೆ ಔಷಧಗಳ ಸರಬರಾಜು ಮಾಡುವ ಕಂಪನಿಗಳು ವಿರುದ್ಧ ಪರಿಣಾಮಕಾರಿ ಕ್ರಮವಾಗುತ್ತಿಲ್ಲ. ಹರಿಯಾಣ, ಹಿಮಾಚಲ ಪ್ರದೇಶ, ಉತ್ತರಾಖಂಡ, ಮಹಾರಾಷ್ಟ್ರ, ಪಂಜಾಬ್, ತೆಲಂಗಾಣ ಮತ್ತು ಕರ್ನಾಟಕ ಮೂಲದ ಕಂಪನಿಗಳು ನಿಗಮಕ್ಕೆ ಸರಬರಾಜು ಮಾಡಿರುವ ವಿವಿಧ ಔಷಧಗಳು ನಕಲಿ ಎಂಬುದು ಪ್ರಯೋಗಾಲಯದಲ್ಲಿ ಸಾಬೀತಾಗಿದೆ.ಕಳಪೆ ಔಷಧಗಳು ಪೂರೈಕೆಯಲ್ಲಿ ಹೆಚ್ಚಿನ ಕಂಪನಿಗಳು ಹಿಮಾಚಲ ಪ್ರದೇಶದಲ್ಲಿರುವುದು ಸರ್ಕಾರದ ದಾಖಲೆಯಿಂದ ಬಹಿರಂಗವಾಗಿದೆ.
ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್), ಪ್ರತಿ ವರ್ಷ ನೂರಾರು ಕೋಟಿ ರೂ. ಮೌಲ್ಯದ ಬ್ಯಾಂಡೇಜ್ ಕ್ಲಾತ್, ಕಾಟನ್, ಸರ್ಜಿಕಲ್ ಗ್ಲೌಸ್, ಗ್ಲೂಕೋಸ್ ಬಾಟಲ್, ಆಂಟಿಬಯೋಟಿಕ್ ಮಾತ್ರೆ ಮತ್ತು ವೈದ್ಯಕೀಯ ಸಲಕರಣೆ ಸೇರಿ ಹಲವು ಔಷಧಗಳನ್ನು ಖರೀದಿಸಿ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ, ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ನಗರ ಆರೋಗ್ಯ ಕೇಂದ್ರಗಳಿಗೆ ಪೂರೈಸುತ್ತಿದೆ. ಇದಕ್ಕಾಗಿ ಟೆಂಡರ್ ನಡೆಸುವ ನಿಗಮವು, ಎಲ್-1 ಪಡೆದ ಕಂಪನಿಗಳಿಗೆ ಔಷಧ ಪೂರೈಸಲು ಕಾರ್ಯಾದೇಶ ಪತ್ರ ನೀಡುತ್ತಿದೆ. ಕಾರ್ಯಾದೇಶ ಪತ್ರ ಪಡೆಯುವ ಕಂಪನಿಗಳು ನಿಗಮದ ವ್ಯಾಪ್ತಿಯ ಔಷಧ ಉಗ್ರಾಣಗಳಿಗೆ ಔಷಧ ಸರಬರಾಜು ಮಾಡುತ್ತಿವೆ.
ಉಗ್ರಾಣಗಳಲ್ಲಿ ದಾಸ್ತಾನು ಮಾಡಿಕೊಂಡು ಬೇಡಿಕೆ ಸಲ್ಲಿಸುವ ಆಸ್ಪತ್ರೆಗಳಿಗೆ ನಿಗಮ, ಔಷಧಗಳನ್ನು ಪೂರೈಸುತ್ತಿದೆ. ಬಳಿಕ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು, ನಿಗಮಕ್ಕೆ ಸರಬರಾಗಿರುವ ಹಲವು ಔಷಧ ಬ್ಯಾಚ್‌ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಿದ್ದಾಗ ಸಾಕಷ್ಟು ಔಷಧಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಮಾರುಕಟ್ಟೆಯಲ್ಲಿ ಪೂರೈಕೆಯಾಗುವ ಔಷಧಗಳನ್ನು ಪರೀಕ್ಷೆ ನಡೆಸಿದ್ದ ವೇಳೆ ಸಾಕಷ್ಟು ಔಷಧಗಳು ಕಡಿಮೆ ಗುಣಮಟ್ಟ ಹೊಂದಿವೆ.
ಅತಿ ಹೆಚ್ಚು ಸ್ಯಾಂಪಲ್ ಸಂಗ್ರಹವಾಗಲಿ
ರಾಜ್ಯದಲ್ಲಿ ನಾಯಿಕೊಡೆಗಳಂತೆ ಮೆಡಿಕಲ್ ಡಿಸ್ಟ್ರಿಬ್ಯೂಟರ್‌ಗಳು ಆರಂಭವಾಗುತ್ತಿವೆ. ಕೆಲ ಡಿಸ್ಟ್ರಿಬ್ಯೂಟರ್‌ಗಳು ನಿಯಮ ಪಾಲಿಸಿದರೆ ಇನ್ನೂ ಕೆಲ ಡಿಸ್ಟ್ರಿಬ್ಯೂಟರ್‌ಗಳು ನಿಯಮ ಪಾಲಿಸುತ್ತಿಲ್ಲ. ಕೆಲವರು ಇದನ್ನು ದಂಧೆ ಮಾಡಿಕೊಂಡು ಬಾಟಲ್, ಪ್ಯಾಕೆಟ್‌ಗಳ ಮೇಲೆ ಪ್ರತಿಷ್ಠಿತ ಕಂಪನಿಗಳ ಲೇಬಲ್ ಅಂಟಿಸಿ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ.ಹಣ ಮಾಡಿಕೊಳ್ಳುತ್ತಿದ್ದಾರೆ. ಆನ್‌ಲೈನ್ ಔಷಧಗಳು ಮತ್ತು ಸೌಂದರ್ಯವರ್ಧಕಗಳ ಕಾಯ್ದೆ ಉಲ್ಲಂಸಿ ಾರ್ಮಸಿಗಳು ಹಾಗೂ ಕ್ವಿಕ್ ಕಾಮರ್ಸ್ ಔಷಧ ಡೆಲಿವರಿ ಆ್ಯಪ್‌ಗಳು, ಔಷಧಗಳನ್ನು ಮಾರಾಟ ಮಾಡುತ್ತಿವೆ. ಆನ್‌ಲೈನ್‌ನಲ್ಲಿ ಮಾರಾಟವಾಗುವ ಹಲವು ಜೀವರಕ್ಷಕ ಔಷಧಗಳ ಕಲಬೆರಕೆಯಿಂದ ಕೂಡಿವೆ. ನಕಲಿ ಔಷಧಗಳ ವಿರುದ್ಧ ಸಮರ ಸಾರಿರುವ ಔಷಧ ಆಡಳಿತ ಇಲಾಖೆಯ ಪ್ರಯೋಗಾಲಯವು ಇನ್ನಷ್ಟು ಉನ್ನತೀಕರಣವಾಗಬೇಕಿದೆ. ಅತ್ಯಾಧುನಿಕರಣ ಉಪಕರಣ ಅಳವಡಿಕೆ ಮತ್ತು ಔಷಧ ವಿಶ್ಲೇಷಣೆ ಮಾಡುವ ಸಿಬ್ಬಂದಿಗೆ ನುರಿತ ತರಬೇತಿ ನೀಡುವ ಅಗತ್ಯವಿದೆ. ಮಾರುಕಟ್ಟೆಯಲ್ಲಿ ಸರಬರಾಜುವಾಗುವ ಔಷಧಗಳ ಮಾದರಿಯನ್ನು ಪರಿಣಾಮಕಾರಿಯಾಗಿ ಸಂಗ್ರಹಿಸಿ ಪರೀಕ್ಷಿಸಿದರೆ ಇನ್ನಷ್ಟು ನಕಲಿ ಔಷಧಗಳು ಮತ್ತೆಯಾಗಲಿವೆ.
ಸಾರ್ವಜನಿಕರು ಇದನ್ನು ಪಾಲಿಸಿ:
* ಔಷಧಗಳ ಬಳಕೆ ಅವಧಿಯ ದಿನಾಂಕ, ದರ ಪರಿಶೀಲಿಸಿ
* ವೈದ್ಯರ ಸಲಹಾ ಚೀಟಿ ಪಡೆದು ಔಷಧ ಖರೀದಿಸಿ
* ಒಬ್ಬರಿಗೆ ಕೊಟ್ಟಿರುವ ಔಷಧವನ್ನು ವೈದ್ಯರ ಸಲಹೆ ಇಲ್ಲದೆ ಮತ್ತೊಬ್ಬರು ಬಳಸಬೇಡಿ
* ಬಳಕೆ ಅವಧಿ ಮುಗಿದ ನಂತರ ಔಷಧಗಳಲ್ಲಿ ಕೆಲ ರಾಸಾಯನಿಕ ಬದಲಾವಣೆ
* ನಕಲಿ ಔಷಧ ಸೇವಿಸುವುದರಿಂದ ಮಾನವನ ದೇಹಕ್ಕೆ ಹಾನಿ
* ಕೆಲ ಔಷಧಗಳು ವಿಷಕಾರಿಯಾಗಿ ಬದಲು
ಕಳಪೆ ಔಷಧಗಳ ವಿವರ:
ವಿಷಪೂರಿತ, ದೋಷಯುಕ್ತ ಅಥವಾ ಪ್ರಮಾಣಿತ ಮಾನದಂಡಗಳಿಗೆ ಅನುಗುಣವಾಗದ ಇಂಗ್ರಿಡಿಯೆಂಟ್ಸ್ ಒಳಗೊಂಡ ಔಷಧ ಉತ್ಪಾದಿಸುವುದು, ವಿತರಿಸುವುದು ಮತ್ತು ಮಾರಾಟ ಮಾಡುವುದು ಅಪರಾಧ. ಇಂತಹ ಕಳಪೆ ಮಟ್ಟದ ಔಷಧಗಳು ರೋಗಿಗಳ ಆರೋಗ್ಯಕ್ಕೆ ಮಾತ್ರವಲ್ಲದೆ ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಮಾರಕ ಉಂಟು ಮಾಡಲಿದೆ.
ಡಾ.ನಿರಂಜನ್ ಎಲ್ಲೂರು.
ಕನಾರ್ಟಕ ರಾಜ್ಯ ಇಂಟಿಗ್ರೇಟೆಡ್ ಮೆಡಿಕಲ್ ಪ್ರಾಕ್ಟಿಷಿನಿಯರ್ಸ್‌ ಅಸೋಸಿಯೇಷನ್ ಕಾರ್ಯದರ್ಶಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net