ಸೋನಿಯಾ ಗಾಂಧಿ ಬಿಲಾಂಗಿಂಗ್ ಪ್ರಕಟಿಸದಿರಲು ಪೆಂಗ್ವಿನ್ ನಿರ್ಧಾರ..? ಪ್ರಕಾಶಕರ ಆ ಒಂದು ಪ್ರಸ್ತಾಪ ತಿರಸ್ಕರಿಸಿದ್ದೇ ಇಷ್ಟಕ್ಕೆಲ್ಲಾ ಕಾರಣವಾಯ್ತಾ..? | Belonging

Belonging | ಸೋನಿಯಾ ಗಾಂಧಿ ಬಿಲಾಂಗಿಂಗ್ ಪ್ರಕಟಿಸದಿರಲು ಪೆಂಗ್ವಿನ್ ನಿರ್ಧಾರ..?
Belonging | ಸೋನಿಯಾ ಗಾಂಧಿ ಬಿಲಾಂಗಿಂಗ್ ಪ್ರಕಟಿಸದಿರಲು ಪೆಂಗ್ವಿನ್ ನಿರ್ಧಾರ..?
Published on

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಇನ್ ಇಂಡಿಯಾ (Belonging: A Journey of Love in India) ಅನ್ನು ಪ್ರಕಟಿಸದಿರಲು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ನಿರ್ಧರಿಸಿದೆ ಎಂದು ವರದಿಯಾಗಿದೆ.

ಪುಸ್ತಕದ ಕರಡು ಪ್ರತಿಯ ಒಂದು ಭಾಗದಲ್ಲಿ ಕೆಲ ಸಂಪಾದಕೀಯ ಬದಲಾವಣೆಗಳನ್ನು ಮಾಡಲು ಮತ್ತು ಕೆಲವು ವಿವರಗಳನ್ನು ತೆಗೆದುಹಾಕಲು ಪ್ರಕಾಶನ ಸಂಸ್ಥೆಯು ಕೇಳಿಕೊಂಡಿತ್ತು. ಆದರೆ ಈ ಪ್ರಸ್ತಾಪವನ್ನು ಸೋನಿಯಾ ಗಾಂಧಿ ಒಪ್ಪಿಕೊಳ್ಳಲಿಲ್ಲ. ಇದೇ ಕಾರಣಕ್ಕೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ಆತ್ಮಕಥೆಯು ಪೆಂಗ್ವಿನ್ ರಾಂಡಮ್ ಹೌಸ್‌ನ ಭಾಗವಾಗಿರುವ ಆಲ್‌ಫ್ರೆಡ್ ಎ ನಾಫ್ ಸಂಸ್ಥೆಯ ಮೂಲಕ ನವೆಂಬರ್ 10 ರಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲು ನಿಗದಿಯಾಗಿತ್ತು. ನಾಫ್ ಸಂಸ್ಥೆಯು ಆರಂಭದಲ್ಲಿ 1 ಲಕ್ಷ ಪ್ರತಿಗಳನ್ನು ಮುದ್ರಿಸುವುದಾಗಿ ಘೋಷಿಸಿತ್ತು. ಈಗ ಪೆಂಗ್ವಿನ್ ಇಂಡಿಯಾ ಈ ಯೋಜನೆಯಿಂದ ಹಿಂದೆ ಸರಿದಿರುವುದರಿಂದ, ಈ ಪುಸ್ತಕವನ್ನು ಪ್ರಕಟಿಸಲು ಹಲವು ಪ್ರಕಾಶನ ಸಂಸ್ಥೆಗಳು ಆಸಕ್ತಿ ತೋರಿಸುತ್ತಿವೆ ಎಂದು ಹೇಳಲಾಗಿದೆ. ಭಾರತದಲ್ಲಿ ಈ ಆತ್ಮಕಥೆಯನ್ನು ಪ್ರಕಟಿಸುವ ಮತ್ತು ವಿತರಿಸುವ ಒಪ್ಪಂದವನ್ನು ಅಂತಿಮಗೊಳಿಸಲು ಹಾರ್ಪರ್ ಕಾಲಿನ್ಸ್ ಸಿದ್ಧವಾಗಿದೆ ಎಂದು ವರದಿಯಾಗಿದೆ.

ಸೋನಿಯಾ ಗಾಂಧಿ ಅವರ ವೈಯಕ್ತಿಕ ಜೀವನದ ಮಹತ್ವದ ವಿವರಣೆ

ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪುಸ್ತಕವು ಎರಡನೇ ಮಹಾಯುದ್ಧದ ನಂತರದ ಇಟಲಿಯಲ್ಲಿನ ಸೋನಿಯಾ ಗಾಂಧಿ ಅವರ ಬಾಲ್ಯ, ಭಾರತಕ್ಕೆ ಬಂದ ಅವರ ಪಯಣ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ಅವರ ವಿವಾಹದ ಜೀವನದ ನೆನಪುಗಳನ್ನು ಒಳಗೊಂಡಿರಲಿದೆ ಎಂದು ನಿರೀಕ್ಷಿಸಲಾಗಿದೆ.
ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಅಗಲಿಕೆ ಸೇರಿದಂತೆ ಅವರ ಜೀವನದಲ್ಲಿ ನಡೆದ ಪ್ರಮುಖ ದುರಂತಗಳ ಕುರಿತೂ ಈ ಪುಸ್ತಕ ಬೆಳಕು ಚೆಲ್ಲಲಿದೆ. ಇದರೊಂದಿಗೆ ಅವರು ಸಾರ್ವಜನಿಕ ಜೀವನಕ್ಕೆ ಧುಮುಕಿದ್ದು ಮತ್ತು ಭಾರತದ ಅತ್ಯಂತ ಪ್ರಮುಖ ರಾಜಕೀಯ ಕುಟುಂಬಗಳಲ್ಲಿ ಒಂದಾದ ನೆಹರೂ-ಗಾಂಧಿ ಕುಟುಂಬದ ಕೇಂದ್ರಬಿಂದುವಾಗಿದ್ದ ವರ್ಷಗಳ ಅನುಭವಗಳು ಇದರಲ್ಲಿ ಒಳಗೊಂಡಿರಲಿವೆ. 2004 ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಬಂದಾಗ, ತಾವು ಪ್ರಧಾನಮಂತ್ರಿಯಾಗದಿರಲು ತೆಗೆದುಕೊಂಡ ನಿರ್ಧಾರದ ಹಿನ್ನೆಲೆಯನ್ನೂ ಈ ಪುಸ್ತಕದಲ್ಲಿ ಪ್ರಸ್ತಾಪಿಸುವ ನಿರೀಕ್ಷೆಯಿದೆ.

ಆತ್ಮಕಥೆಯ ಬಗ್ಗೆ ಸೋನಿಯಾ ಗಾಂಧಿ ಹೇಳಿದ್ದೇನು..?

ಪ್ರಕಾಶಕರ ಅಧಿಕೃತ ಪ್ರಕಟಣೆಯಲ್ಲಿ ಸೋನಿಯಾ ಗಾಂಧಿ ಅವರು, ನನ್ನ ಕುಟುಂಬದ ಬಗ್ಗೆ ಸಾಕಷ್ಟು ಬರೆಯಲಾಗಿದೆ. ಆದರೆ ಅವರ ನಿರ್ಧಾರಗಳ ಹಿಂದಿನ ಸತ್ಯ, ಅವರ ಕ್ರಿಯೆಗಳು ಮತ್ತು ಅವರ ಮಾನವೀಯ ಕೊರತೆಗಳ ಸತ್ಯಾಸತ್ಯತೆಯನ್ನು ತಲುಪಲು ಕೆಲವೇ ವರದಿಗಳಿಗೆ ಸಾಧ್ಯವಾಗಿದೆ. ನನ್ನ ಈ ಕಥೆಯು ಕಳೆದ ಆರು ದಶಕಗಳಲ್ಲಿ ನಾನು ಕಂಡ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ವಿಶಿಷ್ಟ ದೃಷ್ಟಿಕೋನವನ್ನು ಓದುಗರಿಗೆ ನೀಡುತ್ತದೆ ಎಂದು ಹೇಳಿದ್ದಾರೆ. ದಶಕಗಳಿಂದ ತಾವು ಕಾಯ್ದುಕೊಂಡು ಬಂದಿದ್ದ ವೈಯಕ್ತಿಕ ಗೌಪ್ಯತೆಯಿಂದ ಹೊರಬಂದು ಈ ಆತ್ಮಕಥೆಯನ್ನು ಬರೆಯಬೇಕಾಯಿತು ಎಂದೂ ಅವರು ಒಪ್ಪಿಕೊಂಡಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರೊಂದಿಗಿನ ಅನುಭವ, ತಾವು ಹಿಂದಿ ಭಾಷೆ ಕಲಿತು ಭಾರತದ ಜೀವನ ಶೈಲಿಗೆ ಹೊಂದಿಕೊಂಡದ್ದು ಮತ್ತು ಸಂಜಯ್ ಗಾಂಧಿ ಸಾವು ಸೇರಿದಂತೆ ಕುಟುಂಬದಲ್ಲಾದ ದುರಂತಗಳ ಕುರಿತೂ ಸೋನಿಯಾ ಗಾಂಧಿ ಬೆಳಕು ಚೆಲ್ಲಿದ್ದಾರೆ. ಈ ಆತ್ಮಕಥೆಯನ್ನು ಬರೆಯುವುದು ತಮಗೆ ತುಂಬಾ ಕಷ್ಟಕರವಾಗಿತ್ತು ಎಂದಿರುವ ಸೋನಿಯಾ ಗಾಂಧಿ, ಇದು ತಮ್ಮ ಮನಸ್ಸಿನಾಳದಲ್ಲಿದ್ದ ಅನುಭವಗಳನ್ನು ತೆರೆದಿಡುವ ಮತ್ತು ಹಂಚಿಕೊಳ್ಳುವ ಪ್ರಯತ್ನವಾಗಿತ್ತು ಎಂದು ಹೇಳಿದ್ದಾರೆ.

ಕುಟುಂಬದ ಕಥೆಯನ್ನು ಹೇಳಲಿದೆ ಈ ಪುಸ್ತಕ : ರಾಹುಲ್ ಗಾಂಧಿ

ರಾಜೀವ್ ಗಾಂಧಿ ಅವರ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವಾಗ ರಾಹುಲ್ ಗಾಂಧಿ ತಮ್ಮ ತಾಯಿಯ ಆತ್ಮಕಥೆಯ ಬಗ್ಗೆ ಮಾತನಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ. ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ ಹಂಚಿಕೊಂಡಿದ್ದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಮಾಮಾ (ಅಮ್ಮ) ಎಂದು ಕರೆದಿದ್ದು, 1991 ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ವರ್ಷಗಳ ನೆನಪುಗಳನ್ನು ಹಂಚಿಕೊಂಡಿದ್ದರು.

ರಾಹುಲ್​ ಗಾಂಧಿ ಪೋಸ್ಟ್ ಹೀಗಿದೆ!

ತಂದೆ ತೀರಿಕೊಂಡ ದಿನದಿಂದ, ಜೀವನದಲ್ಲಿ ಎದುರಾದ ಪ್ರತಿಯೊಂದು ಕಷ್ಟವನ್ನೂ ನೀವು ಅಸಾಧಾರಣ ಧೈರ್ಯ ಮತ್ತು ಗೌರವದಿಂದ ಎದುರಿಸಿದ್ದನ್ನು ನಾನು ನೋಡಿದ್ದೇನೆ. ತಂದೆಯ ಅಗಲಿಕೆಯ ನಂತರ ನಿಮ್ಮ ಜೀವನ ಎಷ್ಟು ಕಷ್ಟಕರವಾಗಿತ್ತು ಮತ್ತು ನೀವು ಎಂತಹ ಪರಿಸ್ಥಿತಿಗಳನ್ನು ಎದುರಿಸಿದ್ದೀರಿ ಎಂಬುದು ನಿಜವಾಗಿಯೂ ನನಗೂ ಮತ್ತು ಪ್ರಿಯಾಂಕಾಗೆ ಮಾತ್ರ ಗೊತ್ತು.
ತಮ್ಮ ತಾಯಿಯಂತೆ ವೈಯಕ್ತಿಕ ವಿಚಾರಗಳನ್ನು ರಹಸ್ಯವಾಗಿಡಲು ಇಷ್ಟಪಡುವ ವ್ಯಕ್ತಿಯೊಬ್ಬರು ತಮ್ಮ ಜೀವನದ ಕಥೆಯನ್ನು ಪ್ರಪಂಚಕ್ಕೆ ತಿಳಿಸುವುದು ಎಷ್ಟು ಕಷ್ಟ ಎಂಬುದು ತಮಗೆ ತಿಳಿದಿದೆ ಎಂದಿರುವ ರಾಹುಲ್, ಸೋನಿಯಾ ಗಾಂಧಿ ಅವರ ಜೀವನದ ಕಥೆಯನ್ನು ಅವರನ್ನು ಪ್ರೀತಿಸುವ ಲಕ್ಷಾಂತರ ಜನರು ಕೊನೆಗೂ ಓದುತ್ತಾರೆ ಎಂಬುದು ತುಂಬಾ ಸಂತೋಷ ಮತ್ತು ಹೆಮ್ಮೆಯ ವಿಚಾರ ಎಂದಿದ್ದಾರೆ. ಇಂದು ತಂದೆಯವರ ಜನ್ಮದಿನದಂದು, ಅವರು ಮೇಲಿಂದ ಮುಗುಳ್ನಗುತ್ತಾ ತಮ್ಮ ಸುಂದರ ಸೋನಿಯಾರನ್ನು ಹೆಮ್ಮೆಯಿಂದ ನೋಡುತ್ತಿದ್ದಾರೆ ಎಂಬುದನ್ನು ನಾನು ಭಾವಿಸಬಲ್ಲೆ ಎಂದು ರಾಹುಲ್​ ಬರೆದುಕೊಂಡಿದ್ದಾರೆ.
1984 ರಿಂದ 1989 ರವರೆಗೆ ದೇಶದ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು 1994 ಆಗಸ್ಟ್ 20 ರಂದು ಜನಿಸಿದರು. ರಾಹುಲ್ ಗಾಂಧಿಗೆ 20 ವರ್ಷ ವಯಸ್ಸಿದ್ದಾಗ, ಅಂದರೆ 1991ರಲ್ಲಿ ತಮಿಳುನಾಡಿನ ಶ್ರೀಪೆರಂಬುದೂರಿನಲ್ಲಿ ಎಲ್‌ಟಿಟಿಇ ಆತ್ಮಹುತಿ ಬಾಂಬ್ ದಾಳಿಯ ಮೂಲಕ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಲಾಯಿತು.

ಪೆಂಗ್ವಿನ್ ಇಂಡಿಯಾದ ಪುಸ್ತಕ ವಿವಾದಗಳು!

ಈ ವರ್ಷದ ಆರಂಭದಲ್ಲಿ, ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಪ್ರದರ್ಶಿಸಿದ್ದ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ. ಎಂ. ನರವಣೆ ಅವರ ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ (Four Stars of Destiny) ಎಂಬ ಆತ್ಮಕಥೆಯನ್ನು ತಾವು ಮುದ್ರಿಸಿಲ್ಲ ಎಂದು ಪ್ರಕಾಶನ ಸಂಸ್ಥೆ ತಿಳಿಸಿತ್ತು. ಗಾಲ್ವಾನ್ ಸಂಘರ್ಷ ಮತ್ತು ಅಗ್ನಿಪಥ್ ಸೇನಾ ನೇಮಕಾತಿ ಯೋಜನೆಯ ಕುರಿತಾದ ಭಾಗಗಳು ಸೇರಿದಂತೆ ಆ ಕರಡು ಪ್ರತಿಯ ಕೆಲ ಪ್ರಮುಖ ಅಂಶಗಳು ಮಾಧ್ಯಮಗಳಲ್ಲಿ ವರದಿಯಾಗಿದ್ದವು.(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net